ಮಡಿಕೇರಿ, ಮೇ 17: ಪ್ರಸ್ತುತದ ಸನ್ನಿವೇಶದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಸಹಕಾರಿಯಾಗುವಂತೆ ಬೆನ್ನೆಲುಬಾಗಿರುವ ಮಲೆನಾಡು ಜಿಲ್ಲೆಗಳ ಬೆಳೆಗಾರರ ಬಗ್ಗೆ ಮಾತ್ರ ತೀರಾ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಎಐಸಿಸಿಯ ಮಾಜಿ ಸದಸ್ಯ ಹಾಗೂ ಕೆಪಿಸಿಸಿಯ ಹಿರಿಯ ಉಪಾಧ್ಯಕ್ಷರಾಗಿದ್ದ ಬೊಟ್ಟೋಳಂಡ ಮಿಟ್ಟು ಚಂಗಪ್ಪ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೊಡಗು ಸೇರಿದಂತೆ ಮಲೆನಾಡು ಜಿಲ್ಲೆಗಳ ಬೆಳೆಗಾರರು ನಿರಂತರವಾಗಿ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಕಾಫಿ ಬೆಳೆಗಾರರು ತಾವು ಮಾತ್ರ ಬದುಕುವದಲ್ಲದೆ ಲಕ್ಷಾಂತರ ಮಂದಿಯ ಬದುಕಿಗೂ ನೆರವಾಗಿದ್ದಾರೆ ಎಂಬದನ್ನು ಅರಿತುಕೊಳ್ಳಬೇಕಿದೆ ಎಂದಿರುವ ಅವರು ಎರಡು ವರ್ಷಗಳ ಸತತ ಪ್ರಾಕೃತಿಕ ವಿಕೋಪ, ಈಗಿನ ಕೊರೊನಾ ಸನ್ನಿವೇಶದ ಗಂಭೀರತೆಯ ನಡುವೆಯೂ ಬೆಳೆಗಾರರು ತಮ್ಮ ಅವಲಂಬಿತರನ್ನು ಪೋಷಿಸಿಕೊಂಡು ಬಂದಿದ್ದಾರೆ. ಆದರೆ ಬೆಳೆಗಾರರ ಪರಿಸ್ಥಿತಿಯನ್ನು ಮಾತ್ರ ಅರ್ಥಮಾಡಿಕೊಳ್ಳದಿರುವದು ವಿಷಾದನೀಯ ಎಂದು ಮಿಟ್ಟು ಚಂಗಪ್ಪ ಹೇಳಿದ್ದಾರೆ.
ವಾಸ್ತವತೆಯನ್ನು ಅರಿತು ಬೆಳೆಗಾರರಿಗೂ ಒಂದಷ್ಟು ಚೇತರಿಸಿ ಕೊಳ್ಳಲು ಪರಿಹಾರೋಪಾಯವನ್ನು ಪ್ರಕಟಿಸಬೇಕು. ಸಾಲ ಬಡ್ಡಿಮನ್ನಾ, ಗೊಬ್ಬರ ದರ ಕಡಿಮೆ ಮಾಡುವದು, ಹಲವು ರೀತಿಯಲ್ಲಿ ಸಹಾಯಧನ ಒದಗಿಸುವದು ಇತ್ಯಾದಿ ಮಾರ್ಗ ಸೂಚಿಗಳನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಪ್ರಕಟಿಸಬೇಕು. ಈ ವಿಚಾರದಲ್ಲಿ ರಾಜಕೀಯ ರಹಿತವಾಗಿಯೂ ಚಿಂತನೆ ಅಗತ್ಯ ಎಂದು ಮಿಟ್ಟು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.