ಮಡಿಕೇರಿ, ಮೇ 17 : ಸ್ಥಳೀಯ ಸರ್ಕಾರ ವೆಂದೇ ಗುರುತಿಸಲ್ಪಟ್ಟಿರುವ ಗ್ರಾ.ಪಂ. ಗಳ ಅಧಿಕಾರಾವಧಿ ಪೂರ್ಣ ಗೊಂಡು ಚುನಾವಣೆ ನಡೆಯಬೇಕಾದ ಹಂತದಲ್ಲೇ ಕೊರೊನಾ ಲಾಕ್‍ಡೌನ್ ಎದುರಾಗಿ ಆಡಳಿತಾಧಿಕಾರಿಗಳನ್ನು ನೇಮಿಸುವ ಸಾಧ್ಯತೆಗಳಿದೆ. ಕೊರೊನಾ ಸಂದಿಗ್ಧ ಪರಿಸ್ಥಿತಿಯಲ್ಲಿ ಅಧಿಕಾರಿಗಳನ್ನು ನೇಮಕ ಮಾಡದೆ ಹಾಲಿ ಇರುವ ಚುನಾಯಿತ ಸದಸ್ಯರುಗಳನ್ನೇ ಮುಂದಿನ ಚುನಾವಣೆವರೆಗೆ ಮುಂದುವರೆಸಲು ಸರ್ಕಾರ ಅವಕಾಶ ಕಲ್ಪಿಸಬೇಕೆಂದು ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನ ಸಮಿತಿಯ ರಾಜ್ಯ ಉಪಾಧ್ಯಕ್ಷ ಕೆ.ಎ. ಯಾಕೂಬ್ ಒತ್ತಾಯಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು ಮೇ ತಿಂಗಳ ಅಂತ್ಯದೊಳಗೆ ನಡೆಯಬೇಕಿದ್ದ ಗ್ರಾಮ ಪಂಚಾಯತ್ ಚುನಾವಣೆಗೂ ಕೊರೊನಾ ಲಾಕ್ ಡೌನ್ ಅಡ್ಡಿಯಾಗಿದ್ದು, ಸುಮಾರು 6 ತಿಂಗಳುಗಳ ಕಾಲ ಚುನಾವಣೆಯನ್ನು ಮುಂದೂಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ತಿಳಿಸಿದ್ದಾರೆ.

ಆದರೆ ಆಡಳಿತಾಧಿಕಾರಿಯ ನೇಮಕ ಅಥವಾ ಬೇರೆ ಯಾವುದೋ ಆಡಳಿತ(ಉಸ್ತುವಾರಿ) ಸಮಿತಿ ನೇಮಕ ಮಾಡುವ ಸರ್ಕಾರದ ಚಿಂತನೆಗೆ ಕಾನೂನಿನಲ್ಲಿ ಅವಕಾಶವಿದ್ದರೂ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಇದು ಸೂಕ್ತವಲ್ಲವೆಂದು ಅಭಿಪ್ರಾಯಪಟ್ಟಿದ್ದಾರೆ.

ಇಂದಿನ ಕೊರೊನಾ ಪರಿಸ್ಥಿತಿ ಮತ್ತು ಮುಂಬರುವ ಮಳೆಗಾಲದ ವಿಕೋಪದ ಸವಾಲಿನ ಸಮಯದಲ್ಲಿ, ಪಂಚಾಯತ್ ಆಡಳಿತಕ್ಕೆ ಕೇವಲ ಆಡಳಿತಾಧಿಕಾರಿಯ ಅಥವಾ ಆಡಳಿತ ಸಮಿತಿಯ ನೇಮಕ ಅಸಮಂಜಸವಾಗುತ್ತದೆ.

ಸರ್ಕಾರÀ ಈ ನಿರ್ಧಾರವನ್ನು ತಕ್ಷಣ ಕೈಬಿಟ್ಟು, ಪ್ರಸ್ತುತ ಇರುವ ಚುನಾಯಿತ ಪ್ರತಿನಿಧಿಗಳನ್ನು ಮುಂದುವರಿಸಬೇಕು ಎಂದು ಯಾಕೂಬ್ ಒತ್ತಾಯಿಸಿದ್ದಾರೆ.