ಮಡಿಕೇರಿ, ಮೇ 17: ಬಹಳಷ್ಟು ಆಶಯದೊಂದಿಗೆ ಹಿಂದುಳಿದ ವರ್ಗಗಳ ಬಡ ವಿದ್ಯಾರ್ಥಿಗಳ ಶಿಕ್ಷಣ ವ್ಯವಸ್ಥೆಗಾಗಿ, ವಿಶಾಲ ಪ್ರದೇಶದಲ್ಲಿ ನಿರ್ಮಿಸುತ್ತಿರುವ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯ ಕಟ್ಟಡ ಕಾಮಗಾರಿ ತೀರಾ ಕಳಪೆಯಿಂದ ಕೂಡಿದೆ ಎಂಬ ಆರೋಪದ ಮೇರೆಗೆ, ಇಂದು ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರು ಖುದ್ದು ಪರಿಶೀಲನೆ ನಡೆಸಿದರು. ಸಂಬಂಧಿಸಿದ ಕಟ್ಟಡ ಕೆಲಸದಿಂದ ಸಿಡಿಮಿಡಿಕೊಂಡ ಅವರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಇಂಜಿನಿಯರ್ ಹಾಗೂ ಗುತ್ತಿಗೆದಾರರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.ಅಂದಾಜು 10 ಎಕರೆಗೂ ಅಧಿಕ ಪ್ರದೇಶದಿಂದ ಕೂಡಿರುವ ಭಾಗಮಂಡಲ - ಅಯ್ಯಂಗೇರಿ ಮಾರ್ಗ ಬದಿಯ ಈ ವಿಶಾಲ ತಾಣದಲ್ಲಿ ತಲೆಯೆತ್ತುತ್ತಿರುವ ಕಟ್ಟಡಗಳ ಶಾಲಾ ಸಂಕೀರ್ಣದಲ್ಲಿ ನಿರೀಕ್ಷೆಯಂತೆ ಕಾಮಗಾರಿ ಕೈಗೊಂಡಿಲ್ಲವೆಂದು, ಅಲ್ಲಿನ ಸ್ಥಳೀಯರು ಶಾಸಕರ ಗಮನ ಸೆಳೆದಿದ್ದರು. ಈ ಸಂಬಂಧ ಖುದ್ದು ಅಲ್ಲಿಗೆ ಭೇಟಿ ನೀಡಿದ ಶಾಸಕರು ಕಟ್ಟಡ ಕೆಲಸ ಸಮರ್ಪಕವಾಗಿ ನಿರ್ವಹಿಸಿಲ್ಲ ಎಂದು ಟೀಕಿಸಿದರು.ಅಲ್ಲದೆ ಕಳೆದ ಮೂರು ತಿಂಗಳಿ ನಿಂದ ಸಂಬಂಧಿಸಿದ ಇಂಜಿನಿಯರ್ ಹಾಗೂ ಗುತ್ತಿಗೆದಾರರು ಒಮ್ಮೆಯೂ ಕೆಲಸ ವೀಕ್ಷಿಸದೆ ಯಾರೋ ಕೆಳಹಂತದ ಕೆಲಸಗಾರರ ಉಸ್ತುವಾರಿಗೆ ಬಿಟ್ಟು, ಇದೀಗ ತರಾತುರಿಯಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಕಟ್ಟಡದ ಹಸ್ತಾಂತರಕ್ಕೆ ಮುಂದಾ ಗಿರುವದಾಗಿ ಆಕ್ರೋಶ ವ್ಯಕ್ತಪಡಿಸಿದರು.ರೂ. 18.50 ಕೋಟಿ ವೆಚ್ಚ : ಸರಕಾರದಿಂದ ವಿಶೇಷವಾಗಿ ಹಿಂದುಳಿದ ಗ್ರಾಮೀಣ ಮಕ್ಕಳ ಭವಿಷ್ಯಕ್ಕಾಗಿ ರೂ. 18.50 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಮುಂದಾ ಗಿರುವ ಈ ಕಟ್ಟಡ ಸಂಕೀರ್ಣದೊಳಗೆ ಆರರಿಂದ (ಮೊದಲ ಪುಟದಿಂದ) 12ನೇ ತರಗತಿ (ಪಿಯುಸಿ) ತನಕ ಕಲಿಕಾ ಕೊಠಡಿಗಳು, ಶಿಕ್ಷಕರುಗಳೊಂದಿಗೆ ಹೆಣ್ಣು ಮಕ್ಕಳು ಮತ್ತು ಗಂಡು ಮಕ್ಕಳ ಪ್ರತ್ಯೇಕ ವಸತಿ ನಿಲಯ ಕೂಡ ತಲೆಯೆತ್ತುತ್ತಿದೆ. ಆದರೆ ಶಾಲೆಗೆ ಮುಖ್ಯರಸ್ತೆಯಿಂದ ಸಂಪರ್ಕ ಮಾರ್ಗ, ಒಳಾಂಗಣದಲ್ಲಿ ಕ್ರೀಡಾಂಗಣ ಸೇರಿದಂತೆ ಇನ್ನಿತರ ಮೂಲಭೂತ ಸೌಕರ್ಯಗಳನ್ನು ಪರಿಪೂರ್ಣಗೊಳಿಸಿಲ್ಲವೆಂದು ಬೋಪಯ್ಯ ಬೊಟ್ಟು ಮಾಡಿದರು. ಹೀಗಾಗಿ ಸಂಬಂಧಿಸಿದವರು ತುರ್ತು ಗಮನಹರಿಸಿ ಪೂರ್ವಯೋಜನೆಯಂತೆ ಎಲ್ಲಾ ಕಾಮಗಾರಿಯನ್ನು ಸಮರ್ಪಕವಾಗಿ ಪೂರೈಸಿದ ಬಳಿಕವಷ್ಟೇ ಹಸ್ತಾಂತರ ಪ್ರಕ್ರಿಯೆ ಕೈಗೊಳ್ಳುವಂತೆ ಅವರು ತಾಕೀತು ಮಾಡಿದರು.