ಪೆರಾಜೆ, ಮೇ 17: ಮನುಷ್ಯ ಹುಟ್ಟಿದ ಮೇಲೆ ಸಾಯಲೇಬೇಕು. ಸತ್ತ ಮನುಷ್ಯನನ್ನು ಹೂಳಲು ಸ್ಮಶಾನ ಬೇಕು. ಆದರೆ ಗ್ರಾಮದಲ್ಲಿ ಸ್ಮಶಾನಕ್ಕೆ ಜಾಗವಿಲ್ಲದ ಕಾರಣ, ಶವವನ್ನು ಅಂತ್ಯಸಂಸ್ಕಾರ ಮಾಡಲು ನೆರೆಯ ದ.ಕ. ಜಿಲ್ಲೆಯ ಸುಳ್ಯದಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ಶವಸಂಸ್ಕಾರ ಮಾಡಿದ ಘಟನೆ ಪೆರಾಜೆಯಲ್ಲಿ ನಡೆದಿದೆ.ಪೆರಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಇಂದಿರಾ ಆವಾಜ್ ಕಾಲೋನಿಯಲ್ಲಿ ಮಾವಜಿ ದೇರಣ್ಣ ಎಂಬವರು ಅಸೌಖ್ಯದಿಂದ ತೀರಿಕೊಂಡಿದ್ದರು. ಆದರೆ ಅವರ ಶವಸಂಸ್ಕಾರ ಮಾಡಲು ಸ್ಥಳವಿಲ್ಲದೆ ಗ್ರಾಮಸ್ಥರು ತೀವ್ರ ಪ್ರತಿಭಟನೆ ನಡೆಸಿ ಬಳಿಕ ಗ್ರಾಮಸ್ಥರ ಸಹಕಾರದಿಂದ ಸುಳ್ಯದ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು.ಕಂದಾಯ ಇಲಾಖೆಯ ವಿರುದ್ಧ ಆಕ್ರೋಶ ಘಟನೆಯ ಬಗ್ಗೆ ಮಾಹಿತಿ ನೀಡಲು, ಶವಸಂಸ್ಕಾರ ಮಾಡಲು ಹಾಗೂ ಬಹುದಿನಗಳ ಸ್ಮಶಾನದ ಬೇಡಿಕೆಯನ್ನು ತಿಳಿಸಲು ಪಂಚಾಯತ್ ಸದಸ್ಯರುಗಳು ಸಂಪಾಜೆ ಕಂದಾಯ ಪರಿವೀಕ್ಷಕ ಸದಾನಂದ ಮೂಲೆಮಜಲು ಹಾಗೂ ಪೆರಾಜೆ ಗ್ರಾಮ ಲೆಕ್ಕಿಗ ರಮೇಶ್ ಅವರಿಗೆ ಕರೆಯನ್ನು ಮಾಡಿದರು ಕರೆಯನ್ನು ಸ್ವೀಕರಿಸಲಿಲ್ಲ. ಈ ಸಂದರ್ಭದಲ್ಲಿ ಕಂದಾಯ ಪರಿವೀಕ್ಷಕರು, ತಹಶೀಲ್ದಾರ್, ಗ್ರಾಮಲೆಕ್ಕಿಗ ಇವರಲ್ಲಿ ಯಾರಾದರೂ ಒಬ್ಬರು ಸ್ಥಳಕ್ಕೆ ಬಾರದೆ ಇದ್ದಲ್ಲಿ ರಸ್ತೆಯಲ್ಲಿ ಅಂತ್ಯಸಂಸ್ಕಾರ ಮಾಡುವುದಾಗಿ ಪಂಚಾಯತ್ ಸದಸ್ಯ ಪ್ರಕಾಶ್ ದೊಡ್ಡಡ್ಕ ಪಟ್ಟು ಹಿಡಿದರು. ಸ್ಥಳಕ್ಕೆ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ, ಪಂಚಾಯತ್ ಸದಸ್ಯರನ್ನು ಹೊರತುಪಡಿಸಿ ಶವವನ್ನು ರುದ್ರಭೂಮಿಗೆ ತೆಗೆದುಕೊಂಡು ಹೋಗುವವರೆಗೂ ಕಂದಾಯ ಇಲಾಖೆಯ ಕಡೆಯಿಂದ ಒಬ್ಬರೂ ಬಂದಿರಲಿಲ್ಲ. ಆದರೂ ದೇಶದಾದ್ಯಂತ ಕೊರೊನಾ ತಡೆಗಟ್ಟುವ ಸಲುವಾಗಿ ಲಾಕ್‍ಡೌನ್ ಇರುವುದರಿಂದ ಮುಂದಿನ ದಿನಗಳಲ್ಲಿ ಕಂದಾಯ ಇಲಾಖೆ ಸ್ಮಶಾನದ ಜಾಗ ಗುರುತಿಸಿ ಪಂಚಾಯತ್‍ಗೆ

(ಮೊದಲ ಪುಟದಿಂದ) ಹಸ್ತಾಂತರಿಸದೆ ಇದ್ದಲ್ಲಿ ಬೃಹತ್ ಪ್ರತಿಭಟನೆ ನಡೆಸುವ ತೀರ್ಮಾನ ಕೈಗೊಂಡ ಗ್ರಾಮಸ್ಥರು ಕೊನೆಗೆ ಸುಳ್ಯದ ಹಿಂದೂ ರುದ್ರ ಭೂಮಿಯ ಪ್ರಮುಖರನ್ನು ಮನವಿ ಮಾಡಿ ಸುಳ್ಯಕ್ಕೆ ಶವವನ್ನು ಕೊಂಡೊಯ್ದು ಅಂತ್ಯ ಸಂಸ್ಕಾರ ಮಾಡಲಾಯಿತು.

ಅಧ್ಯಕ್ಷ- ಉಪಾಧ್ಯಕ್ಷರ ಒತ್ತಾಯ

ಸ್ಥಳಕ್ಕೆ ಆಗಮಿಸಿದ ಪಂಚಾಯತ್ ಅಧ್ಯಕ್ಷೆ ಜಯಲಕ್ಷ್ಮಿ ಧರಣೀಧರ ಹಾಗೂ ಉಪಾಧ್ಯಕ್ಷ ನಂಜಪ್ಪ ನಿಡ್ಯಮಲೆ ಮಾತನಾಡಿ, ಕೆಲ ತಿಂಗಳ ಹಿಂದೆ ಮಡಿಕೇರಿ ತಹಶೀಲ್ದಾರರು ಬಂದು ಹಿಂದೆ ಕಂದಾಯ ಇಲಾಖೆ ಗುರುತಿಸಿದ ಜಾಗವನ್ನು ಪರಿಶೀಲನೆ ನಡೆಸಿ ಹೋದರೇ ಹೊರತು ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ತಕ್ಷಣವೇ ಕಂದಾಯ ಇಲಾಖೆಯವರು ಗುರುತಿಸಿದ ಜಾಗವನ್ನು ನಮ್ಮ ಪಂಚಾಯತ್‍ಗೆ ಒದಗಿಸಿಕೊಟ್ಟು ನಮ್ಮ ಗ್ರಾಮದ ಎರಡು ಬಡ ಕಾರ್ಮಿಕ ವರ್ಗದ ಕಾಲೋನಿಗಳ ಬಹುದಿನಗಳ ಬೇಡಿಕೆಯನ್ನು ಈಡೇರಿಸಿಕೊಡಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭ ಶ್ರೀ ಶಾಸ್ತಾವು ದೇವಸ್ಥಾನ ಆಡಳಿತ ಮೊಕ್ತೇಸರ ವಿಶ್ವನಾಥ್ ಕುಂಬಳಚೇರಿ, ಉದಯಚಂದ್ರ ಕುಂಬಳಚೇರಿ, ಪ್ರಾ.ಕೃ.ಪ.ಸ. ಸಂಘದ ನಿರ್ದೇಶಕರಾದ ದಾಸಪ್ಪ ಮಡಿವಾಳ ಹಾಗೂ ಸೀತಾರಾಮ್ ಕದಿಕಡ್ಕ, ಮಹೇಶ್ ಮೂಲೆಮಜಲು ಮೊದಲಾದವರು ಇದ್ದರು. - ಕಿರಣ್ ಕುಂಬಳಚೇರಿ