ಸೋಮವಾರಪೇಟೆ, ಮೇ 17: ತಾಲೂಕಿನ ಆಲೂರುಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಲಂಬಿ ಗ್ರಾಮದಲ್ಲಿ ನಿನ್ನೆ ಬೆಳಕಿಗೆ ಬಂದ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ದಂತೆ ಕೊಡಗು- ಹಾಸನ ಗಡಿಯ ಅರಣ್ಯ ಪ್ರದೇಶದ ಮೂಲಕ ಎಸ್ಕೇಪ್ ಆಗುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.ಮಾಲಂಬಿ ಗ್ರಾಮದ ಜೇನುಕುರುಬರ ಕುಮಾರ ಎಂಬಾತನ ಪತ್ನಿ, ನಾಗಿ (45) ಎಂಬಾಕೆಯ ಮೃತದೇಹ ನಿನ್ನೆ ಬೆಳಗ್ಗೆ ಕಂಡು ಬಂದಿದ್ದು, ಘಟನೆಗೆ ಸಂಬಂಧಿಸಿದಂತೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕುಮಾರ ಮತ್ತು ನಾಗಿ ಈರ್ವರು ಮಾಲಂಬಿ ಗ್ರಾಮದ ಮನೆಯಲ್ಲಿ ವಾಸವಿದ್ದರು. ನಿನ್ನೆ ದಿನ ನಾಗಿಯ ಮೃತದೇಹ ಮನೆಯೊಳಗೆ ಕಂಡು ಬಂದಿದ್ದು, ಪತಿ ಕುಮಾರ ಪರಾರಿ ಯಾಗಿದ್ದನು. ತಲೆಯ ಹಿಂಭಾಗಕ್ಕೆ ಗಂಭೀರ ಸ್ವರೂಪದ ಗಾಯವಾಗಿ ನಾಗಿ ಮೃತಪಟ್ಟಿದ್ದು, ಪತಿಯೇ ಹಲ್ಲೆ ನಡೆಸಿ ಹತ್ಯೆಗೈದಿರ ಬಹುದೆಂಬ ಸಂಶಯದಿಂದ ಪೊಲೀಸರು ಇಂದು ಮುಂಜಾನೆ 4 ಗಂಟೆಯವರೆಗೂ ಮಾಲಂಬಿ ವ್ಯಾಪ್ತಿಯ ವಿವಿಧ ಹಾಡಿ ಗಳಲ್ಲಿ ಶೋಧ ಕಾರ್ಯ ನಡೆಸಿದ್ದರು.ಇಂದು ಬೆಳಿಗ್ಗೆ ಆರೋಪಿ ಪತಿ ಕುಮಾರ ಅಲಿಯಾಸ್ ಗಣೇಶ್, ಮಾಲಂಬಿಯಿಂದ ಅರಣ್ಯದ ಮೂಲಕವೇ ಕೊಡಗು- ಹಾಸನ ಗಡಿಯಲ್ಲಿರುವ ಅರಣ್ಯದಲ್ಲಿ ಸಂಚರಿಸಿ, ಹಾಸನ ಗಡಿಯ ರಸ್ತೆಗೆ ಬಂದ ಸಂದರ್ಭ ಶನಿವಾರಸಂತೆಯ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ನಿನ್ನೆ ಮಧ್ಯಾಹ್ನ 12 ಗಂಟೆಯವರೆಗೂ ಮಾಲಂಬಿ ವ್ಯಾಪ್ತಿಯಲ್ಲಿ ಓಡಾಡಿಕೊಂಡಿದ್ದ ಆರೋಪಿ ಕುಮಾರ, ಪೊಲೀಸರ ವಾಹನಗಳು ಮಾಲಂಬಿಯತ್ತ ಆಗಮಿಸುತ್ತಿದ್ದಂತೆ ಅರಣ್ಯದೊಳಗೆ ತಲೆಮರೆಸಿಕೊಂಡಿದ್ದ.

ರಾತ್ರಿಯಿಡೀ ಅರಣ್ಯದಲ್ಲೇ ಕಳೆದು ಇಂದು ಬೆಳಿಗ್ಗೆ ಹಾಸನ-ಕೊಡಗು ಅರಣ್ಯದ ಗಡಿಯಲ್ಲಿರುವ ರಸ್ತೆಯತ್ತ ಬರುತ್ತಿರುವ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ತಕ್ಷಣ ಕಾರ್ಯಪ್ರವೃತ್ತರಾದ ಶನಿವಾರಸಂತೆ ಠಾಣೆಯ ಅಪರಾಧ ಪತ್ತೆದಳ ವಿಭಾಗದ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಆರೋಪಿಯನ್ನು ಬೆನ್ನಟ್ಟಿ ಹಿಡಿದಿದ್ದಾರೆ.

ಪೊಲೀಸರಿಂದ ಬಂಧನ ಕ್ಕೊಳಗಾದ

(ಮೊದಲ ಪುಟದಿಂದ) ಆರೋಪಿ ಕುಮಾರ, ಕೃತ್ಯದ ಬಗ್ಗೆ ಒಪ್ಪಿಕೊಂಡಿದ್ದಾನೆ ಎನ್ನಲಾಗಿದ್ದು, ಹೆಚ್ಚಿನ ತನಿಖೆಯಿಂದಷ್ಟೇ ಘಟನೆಯ ಸಂಪೂರ್ಣ ಮಾಹಿತಿ ಲಭ್ಯವಾಗಬೇಕಿದೆ.

ಸೋಮವಾರಪೇಟೆ ಪೊಲೀಸ್ ವೃತ್ತ ನಿರೀಕ್ಷಕ ನಂಜುಂಡೇಗೌಡ ಅವರನ್ನೊಳಗೊಂಡ ತಂಡ, ಶನಿವಾರಸಂತೆ ಠಾಣಾಧಿಕಾರಿ ಕೃಷ್ಣನಾಯಕ್ ನೇತೃತ್ವದ ತಂಡದೊಂದಿಗೆ ಅಪರಾಧ ಪತ್ತೆದಳ ವಿಭಾಗದ ಸಿಬ್ಬಂದಿಗಳನ್ನು ಒಳಗೊಂಡಂತೆ ವಿವಿಧ ತಂಡಗಳನ್ನು ಆರೋಪಿಯ ಪತ್ತೆಗಾಗಿ ರಚಿಸಲಾಗಿತ್ತು ಎನ್ನಲಾಗಿದೆ.

ಇತ್ತ ನಾಗಿಯ ಮೃತದೇಹವನ್ನು ಸಂಬಂಧಿಕರ ಸಮಕ್ಷಮ ಮರಣೋತ್ತರ ಪರೀಕ್ಷೆ ನಡೆಸಿದ ನಂತರ, ಪೊಲೀಸ್ ವೃತ್ತ ನಿರೀಕ್ಷಕ ನಂಜುಂಡೇಗೌಡ ಅವರ ಉಪಸ್ಥಿತಿಯಲ್ಲಿ ಮಾಲಂಬಿಯಲ್ಲಿ ಇಂದು ಸಂಜೆ ವೇಳೆಗೆ ಅಂತ್ಯಕ್ರಿಯೆ ನಡೆಸಲಾಯಿತು.