ಓರ್ವ ಉಗ್ರ ಬಲಿ: ಯೋಧ ಹುತಾತ್ಮ

ಜಮ್ಮು, ಮೇ 17: ಜಮ್ಮು ಮತ್ತು ಕಾಶ್ಮೀರದ ದೋಡಾದಲ್ಲಿ ಭಾರತೀಯ ಸೇನಾಪಡೆ ಎನ್‍ಕೌಂಟರ್ ನಡೆಸಿದ್ದು, ಓರ್ವ ಉಗ್ರನನ್ನು ಹೊಡೆದುರುಳಿಸಿದ್ದು, ಕಾರ್ಯಾಚರಣೆ ವೇಳೆ ಓರ್ವ ಯೋಧ ಹುತಾತ್ಮರಾಗಿದ್ದಾರೆ. ಗುಂಡ್ನಾ ದೋಡಾ ಎಂಬ ಪ್ರದೇಶದಲ್ಲಿ ಉಗ್ರರು ಅಡಗಿ ಕುಳಿತಿರುವ ಕುರಿತು ಖಚಿತ ಮಾಹಿತಿ ತಿಳಿದುಬರುತ್ತಿದ್ದಂತೆಯೇ ಸೇನಾಪಡೆಗಳು ಕಾರ್ಯಾಚರಣೆ ನಡೆಸಲು ಆರಂಭಿಸಿದ್ದರು. ಈ ವೇಳೆ ಉಗ್ರರು ಭದ್ರತಾಪಡೆಗಳ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಕೂಡಲೇ ಕಾರ್ಯಾಚರಣೆ ಚುರುಕುಗೊಳಿಸಿರುವ ಸೇನಾಪಡೆ ಕಾರ್ಯಾಚರಣೆಯನ್ನು ಎನ್‍ಕೌಂಟರ್ ಆಗಿ ಮಾರ್ಪಡಿಸಿ ಉಗ್ರನೋರ್ವನನ್ನು ಹತ್ಯೆ ಮಾಡಿದೆ. ಕಾರ್ಯಾಚರಣೆ ವೇಳೆ ಓರ್ವ ಯೋಧ ಹುತಾತ್ಮರಾಗಿದ್ದಾರೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸ್ಥಳದಲ್ಲಿ ಇನ್ನೂ ಇಬ್ಬರು ಉಗ್ರರು ಅಡಗಿ ಕುಳಿತಿರುವ ಶಂಕೆಗಳು ವ್ಯಕ್ತವಾಗಿರುವ ಹಿನ್ನೆಲೆ ಭದ್ರತಾಪಡೆಗಳು ಕಾರ್ಯಾಚರಣೆಯನ್ನು ಮುಂದುವರೆಸಿವೆ ಎಂದು ತಿಳಿದು ಬಂದಿದೆ.

ರಾಜ್ಯದಲ್ಲಿ ಆತ್ಮ ನಿರ್ಭರ್ ಭಾರತ್

ಬೆಂಗಳೂರು, ಮೇ 17: ಆತ್ಮ ನಿರ್ಭರ್ ಭಾರತ್ ಪ್ಯಾಕೇಜ್‍ನ 5ನೇ ದಿನದ ಘೋಷಣೆಗಳು, ಕಾರ್ಮಿಕರಿಗೆ ಉದ್ಯೋಗ ಸೃಜನೆ, ಆರೋಗ್ಯ, ಶಿಕ್ಷಣ ಕ್ಷೇತ್ರದ ಸುಧಾರಣೆಗಳು, ಕೈಗಾರಿಕೆ ವಲಯದ ಕಾನೂನು ಸುಧಾರಣೆ ಹಾಗೂ ರಾಜ್ಯದ ಆರ್ಥಿಕ ಸ್ಥಿತಿ ಸುಧಾರಣೆಗೆ ಒತ್ತು ನೀಡಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅಭಿಪ್ರಾಯಪಟ್ಟಿದ್ದಾರೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪ್ಯಾಕೇಜ್ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು ಕೇಂದ್ರ ಸರ್ಕಾರದ “ಆತ್ಮ ನಿರ್ಭರ್ ಭಾರತ್ ದ ಆಶಯ ಸಾಕಾರಗೊಳಿಸಲು ರಾಜ್ಯ ಸರ್ಕಾರ ಎಲ್ಲ ರೀತಿಯಲ್ಲೂ ಶ್ರಮಿಸಲಿದೆ ಎಂದು ಮುಖ್ಯಮಂತ್ರಿಗಳು ಕೇಂದ್ರಕ್ಕೆ ಆಶ್ವಾಸನೆ ಕೊಟ್ಟಿದ್ದಾರೆ. ಟಿವಿ ಚಾನೆಲ್‍ಗಳನ್ನು ಪ್ರಾರಂಭ ಮಾಡಿ ಮಕ್ಕಳಿಗೆ ಪಾಠ ಹೇಳುವುದು ಒಳ್ಳೆಯ ನಿರ್ಧಾರ, ಇದರಿಂದ ಶಾಲಾ ದಿನಗಳನ್ನು ಕಳೆದುಕೊಂಡ ಮಕ್ಕಳಿಗೆ ಉತ್ತಮ ಪ್ರಯೋಜನವಾಗಲಿದೆ. ಇ-ವಿದ್ಯಾ ಯೋಜನೆ ದೇಶದ ವಿದ್ಯಾ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ತರಲಿದೆ ಎಂದು ಯಡಿಯೂರಪ್ಪ ಹೇಳಿದ್ದಾರೆ.

ಪ್ಯಾಕೇಜ್‍ನ ಕೊನೆಯ ಹಂತದ ಘೋಷಣೆ

ನವದೆಹಲಿ, ಮೇ 17: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೊರೊನಾ ವೈರಸ್ ಹಾವಳಿಯ ಪರಿಣಾಮವಾಗಿ ಎದುರಾಗಿರುವ ಆರ್ಥಿಕ ಸಂಕಷ್ಟವನ್ನು ಎದುರಿಸಲು, ಮೋದಿ ಸರ್ಕಾರ ಘೋಷಿಸಿರುವ 20 ಲಕ್ಷ ಕೋಟಿ ರೂಪಾಯಿಗಳ ಆರ್ಥಿಕ ಪ್ಯಾಕೇಜ್‍ನ ಕೊನೆಯ ಹಂತದ ಘೋಷಣೆಗಳನ್ನು ಭಾನುವಾರ ಮಾಡಿದರು. ಪತ್ರಿಕಾಗೋಷ್ಠಿಯ ಕೊನೆಗೆ ವಿಪಕ್ಷಗಳನ್ನು ಉದ್ದೇಶಿಸಿ ಅವರು, ವಲಸೆ ಕಾರ್ಮಿಕರ ವಿಚಾರದಲ್ಲಿ ನಾವೆಲ್ಲಾ ಒಗ್ಗಟ್ಟಿನಿಂದ ಕೆಲಸ ಮಾಡಬೇಕೆಂದು ಮನವಿ ಮಾಡಿದರು. ವಲಸೆ ಕಾರ್ಮಿಕರನ್ನು ಸುರಕ್ಷಿತವಾಗಿ ಮನೆಗೆ ಸೇರಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಇದರಲ್ಲಿ ರಾಜಕೀಯ ಬೇಡ. ಈ ಕುರಿತು ಕೇಂದ್ರ ಸರ್ಕಾರ ದೇಶದ ಎಲ್ಲಾ ರಾಜ್ಯ ಸರ್ಕಾರಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಈ ವಿಷಯದಲ್ಲಿ ಕೇಂದ್ರ ಸರ್ಕಾರದ ಮೇಲೆ ಆರೋಪ ಹೊರಿಸುವುದರಲ್ಲೇ ಕಾಲ ಕಳೆಯದೆ ಸಂಕಷ್ಟದಿಂದ ಪಾರಾಗಲು ಸರ್ಕಾರದೊಂದಿಗೆ ಕೈ ಜೋಡಿಸಬೇಕು ಎಂದು ಎಲ್ಲಾ ವಿಪಕ್ಷಗಳಿಗೆ ಮನವಿ ಮಾಡಿದರು. ವಲಸೆ ಕಾರ್ಮಿಕರ ಕುರಿತು ಹೇಳಿಕೆ ನೀಡುವಾಗ ಹೆಚ್ಚಿನ ಜವಾಬ್ದಾರಿಯಿಂದ ವರ್ತಿಸುವಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಈ ಸಂದರ್ಭದಲ್ಲಿ ವಿಶೇಷವಾಗಿ ಮನವಿ ಮಾಡಿಕೊಂಡರು.

ಮಂಡ್ಯದಲ್ಲಿ 22 ಮಂದಿಗೆ ಸೋಂಕು

ಮಂಡ್ಯ, ಮೇ 17: ಸಕ್ಕರೆ ನಾಡು ಮಂಡ್ಯದಲ್ಲಿ ಒಂದೇ ದಿನ 22 ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, 22 ಮಂದಿಯ ಪೈಕಿ 19 ಮಂದಿ ವಲಸೆ ಕಾರ್ಮಿಕರಾಗಿದ್ದು, ಅಂತರ್ ರಾಜ್ಯ ಪ್ರಯಾಣದ ಹಿನ್ನೆಲೆ ಹೊಂದಿದ್ದಾರೆ. ಇಂದು ರಾಜ್ಯದಲ್ಲಿ ಹೊಸದಾಗಿ 54 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1146ಕ್ಕೆ ಏರಿಕೆಯಾಗಿದೆ. 36 ಪುರುಷರು, 18 ಮಹಿಳೆಯರಲ್ಲಿ ಕೊರೊನಾ ಅಟ್ಯಾಕ್ ಆಗಿದ್ದು, 54 ಕೊರೊನಾ ಸೋಂಕಿತರ ಪೈಕಿ 10 ಮಕ್ಕಳಿಗೂ ವೈರಸ್ ತಗುಲಿದೆ. ಇಂದು ಪತ್ತೆಯಾದ 54 ಪ್ರಕರಣಗಳ ಪೈಕಿ ಬರೋಬ್ಬರಿ 22 ಪ್ರಕರಣಗಳು ಮಂಡ್ಯ ಜಿಲ್ಲೆಯೊಂದರಿಂದಲೇ ವರದಿಯಾಗಿದೆ. ಈ 22 ಪ್ರಕರಣಗಳ ಪೈಕಿ 19 ಪ್ರಕರಣಗಳು ವಲಸೆ ಕಾರ್ಮಿಕರದ್ದಾಗಿದ್ದು, ಎಲ್ಲರೂ ಅಂತರ್ ರಾಜ್ಯ ಪ್ರಯಾಣದ ಹಿನ್ನೆಲೆಯನ್ನು ಹೊಂದಿದ್ದಾರೆ.

ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1147

ಬೆಂಗಳೂರು, ಮೇ 17: ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 55 ಕೊರೊನಾ ಸೋಂಕಿನ ಪ್ರಕರಣಗಳು ವರದಿಯಾಗಿದ್ದು, ಇದರಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1147ಕ್ಕೆ ಏರಿಕೆಯಾಗಿದೆ. ಉಡುಪಿಯ 54 ವರ್ಷದ ನಿವಾಸಿ ತಾ. 14 ರಂದು ಹೃದಯಾಘಾತದಿಂದ ಮೃತಪಟ್ಟಿದ್ದರು. ಅವರ ಪರೀಕ್ಷಾ ವರದಿಯಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಇವರು ಹೃದಯ ಸಂಬಂಧಿ ಕಾಯಿಲೆಯಿಂದ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಇದರಿಂದ ರಾಜ್ಯದಲ್ಲಿ ಮೃತಪಟ್ಟವರ ಸಂಖ್ಯೆ 37ಕ್ಕೇರಿಕೆಯಾಗಿದೆ. ಒಟ್ಟು 509 ಜನರು ಗುಣಮುಖರಾಗಿದ್ದಾರೆ. ಇದಲ್ಲದೆ ಮಂಡ್ಯದಲ್ಲಿ 22, ಕಲಬುರ್ಗಿದಲ್ಲಿ 10, ಹಾಸನದಲ್ಲಿ 6, ಯಾದಗಿರಿದಲ್ಲಿ 3, ಕೋಲಾರದಲ್ಲಿ 3, ದಕ್ಷಿಣ ಕನ್ನಡದಲ್ಲಿ 2, ಧಾರವಾಡದಲ್ಲಿ 4, ಶಿವಮೊಗ್ಗದಲ್ಲಿ 2, ವಿಜಯಪುರದಲ್ಲಿ 1 ಪ್ರಕರಣಗಳು ವರದಿಯಾಗಿದೆ. ಮಂಡ್ಯದಲ್ಲಿ ಕಳೆದ ಇಪ್ಪತ್ತನಾಲ್ಕು ಗಂಟೆಗಳಲ್ಲಿ 22 ಕೊರೊನಾ ಸೋಂಕು ಪ್ರಕರಣ ದಾಖಲಾಗಿದ್ದು ಜಿಲ್ಲೆಯಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 72ಕ್ಕೆ ತಲುಪಿದೆ. ಕೊರೊನಾ ವೈರಸ್‍ನಿಂದಾಗಿ ವಿಶ್ವದಲ್ಲಿ 46.34 ಲಕ್ಷಕ್ಕೂ ಹೆಚ್ಚು ಜನರು ಬಾಧಿತರಾಗಿದ್ದು, 3.11 ಲಕ್ಷಕ್ಕೂ ಹೆಚ್ಚು ಜನರು ಈ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ.

ಎನ್‍ಕೌಂಟರ್‍ನಲ್ಲಿ ನಕ್ಸಲ್ ಬಲಿ

ಸಿಮ್ದೇಗಾ, ಮೇ 17: ಜಾರ್ಖಾಂಡ್‍ನ ಸಿಂಮ್ದೇಗಾ ಜಿಲ್ಲೆಯಲ್ಲಿ ಮಾವೋವಾದಿಗಳ ವಿರುದ್ಧ ಎನ್‍ಕೌಂಟರ್ ನಡೆದಿದ್ದು, ಈ ವೇಳೆ ಓರ್ವ ನಕ್ಸಲ್‍ನನ್ನು ಹತ್ಯೆ ಮಾಡಲಾಗಿದೆ ಎಂದು ಭಾನುವಾರ ತಿಳಿದು ಬಂದಿದೆ. ಸಿಮ್ದೇಗಾ ಜಿಲ್ಲೆಯಲ್ಲಿ ನಕ್ಸಲರು ಅಡಗಿ ಕುಳಿತಿರುವ ಮಾಹಿತಿ ತಿಳಿಯುತ್ತಿದ್ದಂತೆಯೇ ಪೊಲೀಸರು ಕಾರ್ಯಾಚರಣೆ ನಡೆಸಲು ಆರಂಭಿಸಿತ್ತು. ಈ ವೇಳೆ ನಕ್ಸಲರು ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದು, ಪರಿಣಾಮ ಪೊಲೀಸರು ಕಾರ್ಯಾಚರಣೆಯನ್ನು ಎನ್‍ಕೌಂಟರ್ ಆಗಿ ಮಾರ್ಪಡಿಸಿತ್ತು ಎಂದು ವರದಿಗಳು ತಿಳಿಸಿವೆ. ಇಂದು ಬೆಳಿಗ್ಗೆ ಎನ್‍ಕೌಂಟರ್ ನಡೆದಿದ್ದು, ಓರ್ವ ನಕ್ಸಲ್‍ನನ್ನು ಹತ್ಯೆ ಮಾಡಲಾಗಿದೆ. ಅಲ್ಲದೆ, ಮತ್ತೋರ್ವ ಗಂಭೀರವಾಗಿ ಗಾಯ ಗೊಂಡಿದ್ದಾನೆಂದು ತಿಳಿದುಬಂದಿದೆ. ಪ್ರಸ್ತುತ ಸ್ಥಳದಲ್ಲಿ ಕಾರ್ಯಾಚರಣೆ ಮುಂದುವರೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.