ನವದೆಹಲಿ, ಮೇ 17: ಕೋವಿಡ್-19 ರ ನಿಯಂತ್ರಣವನ್ನು ದೇಶದಲ್ಲಿ ಪೂರ್ಣ ಪ್ರಮಾಣದಲ್ಲಿ ಇನ್ನೂ ಸಾಧಿಸಲು ಸಾಧ್ಯವಾಗದ ಕಾರಣ ಕೇಂದ್ರ ಗೃಹ ಸಚಿವಾಲಯವು ಮೇ.31 ರ ವರೆಗೆ ದೇಶಾದ್ಯಂತ ಲಾಕ್‍ಡೌನ್ ನಿರ್ಬಂಧವನ್ನು ಮುಂದುವರಿಸಿ ಇಂದು ಆದೇಶ ಹೊರಡಿಸಿದೆ. ಕೇಂದ್ರ ವಿಪತ್ತು ನಿರ್ವಹಣಾ ಪ್ರಾಧಿಕಾರದ ನಿರ್ದೇಶನದಂತೆ ಈ ಆದೇಶ ಹೊರಡಿಸಿರುವುದಾಗಿ ಕೇಂದ್ರ ಗೃಹಖಾತೆ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮುಖ್ಯವಾಗಿ ಲಾಕ್‍ಡೌನ್ 4.0 ಮಾರ್ಗಸೂಚಿಯಲ್ಲಿ ಅಂತರ ರಾಜ್ಯ ಸಾರಿಗೆ ವ್ಯವಸ್ಥೆಗೆ ಒತ್ತು ಕೊಡಲಾಗಿದೆ. ಪ್ರಯಾಣಿಕರನ್ನು ಒಯ್ಯುವ ವಾಹನಗಳು ಹಾಗೂ ಬಸ್‍ಗಳ ಅಂತರ ರಾಜ್ಯ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ ಈ ಸಂಬಂಧ ಪರಸ್ಪರ ಆಯಾ ರಾಜ್ಯಗಳಿಂದ ಸಮ್ಮತಿ ಪಡೆಯುವುದು ಅವಶ್ಯಕ.ಇದೇ ರೀತಿ ಆಯಾ ರಾಜ್ಯಗಳಲ್ಲಿ ಅಂತರ ಜಿಲ್ಲಾ ಪ್ರಯಾಣಿಕರ ವಾಹನಗಳು ಮತ್ತು ಬಸ್‍ಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.ಆಯಾ ರಾಜ್ಯಗಳು ಈ ಕುರಿತು ತೀರ್ಮಾನ ಕೈಗೊಳ್ಳುವ ಅವಕಾಶ ನೀಡಲಾಗಿದೆ. ಆಯಾ ರಾಜ್ಯಗಳಲ್ಲಿ ಕೆಂಪು, ಹಸಿರು, ಕೇಸರಿ ವಲಯಗಳನ್ನು ಕೇಂದ್ರದ ಆರೋಗ್ಯ ಸಚಿವಾಲಯದ ಮಾರ್ಗಸೂಚಿ ಅನ್ವಯ ಆಯಾ ರಾಜ್ಯಗಳು ನಿರ್ಧಾರ ಕೈಗೊಳ್ಳಬಹುದು.

ಈಗಾಗಲೇ ದೇಶಾದ್ಯಂತ ರಾತ್ರಿ 7 ರಿಂದ ಬೆಳಿಗ್ಗೆ 7 ಗಂಟೆಯವರೆಗೆ ಅಗತ್ಯ ಕಾರ್ಯ ಚಟುಚಟಿಕೆಗಳ ಹೊರತು ಜಾರಿಯಲ್ಲಿರುವಂತಹ ರಾತ್ರಿ ಕಫ್ರ್ಯೂ ಮುಂದುವರೆ ಯುತ್ತದೆ. ಅಲ್ಲದೆ ಇತರ ಎಲ್ಲಾ ಮಾರ್ಗಸೂಚಿಗಳು ಮೇ 2 ರಂದು ಜಾರಿಯಲ್ಲಿದಂತಹ ನಿರ್ಬಂಧ ನಿಯಮಾವಳಿಗಳೇ ಯಥಾವತ್ತಾಗಿ ಮುಂದುವರಿಯಲಿದೆ.

ಮುಖ್ಯಮಂತ್ರಿಯವರಿಂದ ಇಂದು ವಿಶೇಷ ಸಭೆ

ಕೇಂದ್ರ ನೂತನ ಮಾರ್ಗಸೂಚಿ ಹಾಗೂ ಲಾಕ್‍ಡೌನ್ ವಿಸ್ತರಣೆ ಆದೇಶ ಹೊರ ಬಿದ್ದ ಬೆನ್ನಲ್ಲೆ ಕರ್ನಾಟಕ ಸರ್ಕಾರವು ಈ ಬಗ್ಗೆ ವಿಶೇಷ ಸಭೆ ಮೂಲಕ ಚರ್ಚಿಸಲು ತೀರ್ಮಾನಿಸಿದೆ. ಸೋಮವಾರ ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಭೆ ಕರೆದಿದ್ದು, ಆಮೂಲಾಗ್ರ ಚರ್ಚೆ ನಡೆಸಲಿದ್ದಾರೆ. ಕೇಂದ್ರದ ನೂತನ ಮಾರ್ಗಸೂಚಿಯಲ್ಲಿ ಬಸ್‍ಗಳ ಸಂಚಾರಕ್ಕೆ ಅನುವು ಮಾಡಿ ಕೊಟ್ಟಿರುವ ಹಿನ್ನೆಲೆ ರಾಜ್ಯದಲ್ಲಿಯೂ ಈ ಬಗ್ಗೆ ಸಾರಿಗೆ ವ್ಯವಸ್ಥೆಯನ್ನು ಮರು ಜಾರಿಗೊಳಿಸುವ ಹಿನ್ನೆಲೆಯಲ್ಲಿ ಪ್ರಮುಖವಾಗಿ ನಿರ್ಧಾರ ಕೈಗೊಳ್ಳಲಿರುವುದಾಗಿ ತಿಳಿದು ಬಂದಿದೆ.