ಮಡಿಕೇರಿ, ಮೇ 17 : ನಗರದ ವಿಜಯ ವಿನಾಯಕ ಬಡಾವಣೆಯಲ್ಲಿ (ಕಾನ್ವೆಂಟ್ ಜಂಕ್ಷನ್ ಬಳಿ ) ಕಳೆದ ನಾಲ್ಕು ವರ್ಷಗಳಿಂದ ಮಿನಿವಿಧಾನ ಸೌಧ ಕಾಮಗಾರಿ ಆಮೆಗತಿಯಲ್ಲಿ ಸಾಗುವದರೊಂದಿಗೆ, ಕೆಲಸ ಪೂರ್ಣಗೊಳ್ಳದ ಪರಿಣಾಮ, ಇಲ್ಲಿನ ತಾಲೂಕು ಕಚೇರಿಯಲ್ಲಿ ಹಳೆಯ ಶಿಥಿಲಗೊಂಡಿರುವ ಕಟ್ಟಡದ ಸೋರುವಿಕೆ ನಡುವೆ ಕಡತಗಳನ್ನು ಸಂರಕ್ಷಿಸಲು ತಹಶೀಲ್ದಾರ್ ಮತ್ತು ಸಿಬ್ಬಂದಿ ತೊಳಲಾಡುತ್ತಿದ್ದಾರೆ.ಅನೇಕ ದಶಕಗಳ ಹಿಂದಿನ ಮಡಿಕೇರಿ ತಾಲೂಕು ಕಚೇರಿ ಹಾಗೂ ತಹಶೀಲ್ದಾರ್ ಸಹಿತ ಇತರ ಸಿಬ್ಬಂದಿಗಳು ಕಾರ್ಯನಿರ್ವಹಿಸುವ ಕಟ್ಟಡದ ಗೋಡೆಗಳು ಮತ್ತು ಮಾಡು ಶಿಥಿಲಗೊಂಡು ಅಪಾಯದ ಹಾದಿಯಲ್ಲಿವೆ. ವರ್ಷದ ಹಿಂದೆ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿ, ಈ ಕಟ್ಟಡದ ತಾತ್ಕಾಲಿಕ ರಿಪೇರಿಗೆ ರೂ. 3ಲಕ್ಷದ ಬೇಡಿಕೆಯಿಟ್ಟ ವೇಳೆ ಅವರು ರೂ. 1.50 ಲಕ್ಷ ಮಂಜೂ ರಾತಿಯೊಂದಿಗೆ ಲೋಕೋಪಯೋಗಿ ಇಲಾಖೆಯಿಂದ ರಿಪೇರಿಗೂ ಸೂಚಿಸಿದ್ದಾರೆ.ಆ ಬಳಿಕವೂ ಲೋಕೋಪ ಯೋಗಿ ಅಧಿಕಾರಿಗಳು ಅಪಾಯದ ಅಂಚಿನಲ್ಲಿರುವ ಕಟ್ಟಡ ರಿಪೇರಿ ಕೈಗೊಳ್ಳದ್ದರಿಂದ, ಅನಿವಾರ್ಯ ಪರಿಸ್ಥಿತಿಯಲ್ಲಿ ತಹಶೀಲ್ದಾರ್ ಪಿ.ಎಸ್. ಮಹೇಶ್ ಅವರು ಶಿರಸ್ತೇದಾರ್ ಗುರುರಾಜ್ ನೇತೃತ್ವದಲ್ಲಿ ಕಟ್ಟಡದ ಮೇಲ್ಚಾವಣಿ ರೀಪುಗಳು ಮತ್ತು ಇತರ ಮರ ಮುಟ್ಟು ಬದಲಾಯಿಸಿ, ಹೆಂಚುಗಳ ಮರು ಜೋಡಣೆ ಯೊಂದಿಗೆ ಮಳೆಯಲ್ಲಿ ಸೋರದಂತೆ ಕೆಲಸ ಕೈಗೊಂಡಿದ್ದಾರೆ.

ಅಲ್ಲದೆ ಅನೇಕ ದಶಕಗಳ ಕಡತಗಳನ್ನು ಮಳೆಯಿಂದ ರಕ್ಷಿಸುವ ದಿಸೆಯಲ್ಲಿ ತುರ್ತು ಕೆಲಸವನ್ನು ಕಚೇರಿ ನಿರ್ವಹಣಾ ನಿಧಿಯಿಂದ ಕೈಗೊಂಡು, ಈ ಮಳೆಗಾಲದಲ್ಲಿ ದಾಖಲಾತಿಗಳು ಹಾನಿಗೊಳ್ಳದಂತೆ ಮುಂಜಾಗ್ರತಾ ಕ್ರಮವನ್ನು ತೆಗೆದುಕೊಂಡಿದ್ದಾರೆ.

ಕಾಮಗಾರಿ ವಿಳಂಬ : ನಾಲ್ಕು ವರ್ಷ ಹಿಂದೆಯೇ ಮಿನಿವಿಧಾನ ಸೌಧ ನಿರ್ಮಾಣಕ್ಕೆ ಭೂಮಿಪೂಜೆ ನಡೆಸಿದ್ದರೂ, ಗೊಸರು ನಿವೇಶನದಲ್ಲಿ 20 ಅಡಿ ಆಳದಿಂದ ಪಿಲ್ಲರ್ ನಿರ್ಮಿಸಿ ಅಡಿಪಾಯ ಕೆಲಸ ಕೈಗೊಂಡಿದ್ದರಿಂದ, ಸಂಬಂಧಿಸಿದ ನೂತನ ಕಟ್ಟಡದ ನೆಲ ಅಂತಸ್ತು ಕೆಲಸವಷ್ಟೇ ಅಂದಾಜು ರೂ. 5 ಕೋಟಿ ಯೋಜನೆಯಡಿ ಪೂರೈಸಿ ಅಪೂರ್ಣ ಸ್ಥಿತಿಯಲ್ಲಿದೆ. ಪರಿಣಾಮ ಮಡಿಕೇರಿ ತಾಲೂಕು ಕಚೇರಿಯನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲಾರದೆ, ಇರುವ ಕಟ್ಟಡದೊಳಗೆ ಆತಂಕದ ನಡುವೆ ಸಂಬಂಧಿಸಿದವರು ದೈನಂದಿನ ಕೆಲಸಗಳನ್ನು ನಿರ್ವಹಿಸುವಂತಾಗಿದೆ.

ಪರ್ಯಾಯ ವ್ಯವಸ್ಥೆ : ತಾಲೂಕು ಕಚೇರಿಯ ಹಳೆಯ ಕಟ್ಟಡದ ಒಂದೆಡೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಕೆಲಸ ಕಾರ್ಯವು ನಡೆಯುತ್ತಿದ್ದು, ಅದನ್ನು ನಗರದ ಪ.ಪೂ. ಕಾಲೇಜಿನ ನೂತನ ಕಟ್ಟಡಕ್ಕೆ ಸ್ಥಳಾಂತರ ಗೊಳಿಸಿದರೆ, ಸದ್ಯಕ್ಕೆ ಆ ಕೊಠಡಿಗಳನ್ನು ಕೂಡ ತಾಲೂಕು ಕಂದಾಯ ಅಧಿಕಾರಿ ಗಳ ಕಚೇರಿಯಾಗಿ ಬಳಸಿಕೊಳ್ಳಲು ಪರ್ಯಾಯ ಚಿಂತನೆ ನಡೆದಿದೆ.

ಹೀಗಾಗಿ ಪೂರ್ಣಗೊಳ್ಳದ ಮಿನಿ ವಿಧಾನಸೌಧ ಕೆಲಸದಿಂದ, ಮಡಿಕೇರಿ ತಾಲೂಕು ತಹಶೀಲ್ದಾರ್ ಸೇರಿದಂತೆ ಕಂದಾಯ ಇಲಾಖೆಯ ಕೆಲಸ ಕಾರ್ಯಗಳಿಗೆ ಹಲವಷ್ಟು ವಿಘ್ನಗಳೊಂದಿಗೆ, ಮಳೆಗಾಲದಲ್ಲಿ ದಾಖಲಾತಿಗಳು ಹಾನಿಯಾಗದಂತೆ ಸಂರಕ್ಷಿಸುವ ಪ್ರಯತ್ನದಲ್ಲಿ ತಹಶೀಲ್ದಾರ್ ಪಿ.ಎಸ್. ಮಹೇಶ್ ಹಾಗೂ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.

ಸಿಬ್ಬಂದಿ ಕೊರತೆ : ಮಡಿಕೇರಿ ತಾಲೂಕು ಕಚೇರಿಯಲ್ಲಿ ಒಟ್ಟು 88 ಹುದ್ದೆಗಳಿದ್ದರೂ, 29 ಹುದ್ದೆಗಳು ಪ್ರಸ್ತುತ ಖಾಲಿ ಇವೆ. ಈ ನಡುವೆ 59 ಮಂದಿ ಸಾರ್ವಜನಿಕ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಕೊರೊನಾ ಸೋಂಕು ತಡೆಗಟ್ಟುವ ದಿಸೆಯಲ್ಲಿ ಬಹುತೇಕ ಸಿಬ್ಬಂದಿ ವಿವಿಧ ಹೋಬಳಿ ಕೇಂದ್ರಗಳಲ್ಲಿ ನಿಯೋಜನೆ ಗೊಂಡಿದ್ದು, ಪರಿಣಾಮಕಾರಿಯಾಗಿ ಸಾರ್ವಜನಿಕ ಅಗತ್ಯ ಕೆಲಸಗಳಿಗೆ ತೊಡಕಾಗುತ್ತಿದೆ ಎಂದು ಇರುವ ಸಿಬ್ಬಂದಿ ಅಸಹಾಯಕತೆ ವ್ಯಕ್ತಪಡಿಸಿ ದ್ದಾರೆ. ಭವಿಷ್ಯದಲ್ಲಿ ಎಲ್ಲವನ್ನೂ ಸರಿಪಡಿಸುವ ಪ್ರಯತ್ನದೊಂದಿಗೆ ದಾಖಲೆಗಳ ರಕ್ಷಣೆಗೂ ತಾತ್ಕಾಲಿಕ ಸುಧಾರಣೆಕೈಗೊಂಡಿರುವದಾಗಿ ತಹಶೀಲ್ದಾರ್ ಪಿ.ಎಸ್. ಮಹೇಶ್ ಅನಿಸಿಕೆ ಹಂಚಿಕೊಂಡಿದ್ದಾರೆ.