ಮಡಿಕೇರಿ, ಮೆ 17: ಕೊಡಗಿನ ಐತಿಹ್ಯಗಳಲ್ಲಿ ಇಂತಹದ್ದೂ ಒಂದಿತ್ತು ಎನ್ನುವದು ಇದೀಗ ಇತಿಹಾಸದ ಪುಟದಲ್ಲಿ ಮಾತ್ರ ಇದೆ. ಒಂದಾನೊಂದು ಕಾಲದಲ್ಲಿ ಜಿಲ್ಲೆ ಬಹುತೇಕ ದಟ್ಟವಾದ ಅರಣ್ಯದಿಂದ ಕೂಡಿದ್ದ ಸಂದರ್ಭದಲ್ಲಿ ಇಲ್ಲಿನ ಬದುಕೂ ಅಂದಕಾರದಲ್ಲೇ ಇತ್ತು. ವ್ಯಾಘ್ರ ಎಂಬ ವನ್ಯ ಮೃಗದ ಉಪಟಳ ಹೆಚ್ಚಿದ್ದ ಕಾಲವದು. ಆಗ ವನ್ಯ ಜೀವಿಗಳ ಪೈಕಿ ಕ್ರೂರಿಯಾಗಿದ್ದು ಜನತೆಯನ್ನು ತಲ್ಲಣಗೊಳಿಸುತ್ತಿದ್ದ. ನಿಂತಲ್ಲಿ-ಕುಳಿತಲ್ಲಿ ನಡುಕ ತರಿಸುತ್ತಿದ್ದ ಭಾರೀ ಸಾಹಸದ ಪ್ರಾಣಿಯಾದ ಹುಲಿರಾಯನನ್ನು ಯಾರಾದರೂ ಗುಂಡಿಕ್ಕಿ ಕೊಲ್ಲುವಲ್ಲಿ ಯಶಸ್ವಿ ಯಾದರೆ, ಈ ಸಾಹಸ ಮೆರೆದ ವ್ಯಕ್ತಿಯನ್ನು “ನರಿಮಂಗಲ” (ಹುಲಿ ಮದುವೆ) ಎಂಬಂತಹ ಆಚರಣೆ ಯೊಂದಿಗೆ ಗೌರವಿಸಲಾಗುತ್ತಿತ್ತು. ಸಾಹಸ ಮೆರೆದಾತನಿಗೆ ಇದು ಮರೆಯಲಾಗದ ಘಟನೆ. ಕೊಂದ ಹುಲಿಯನ್ನು ಮುಂದಿರಿಸಿ ಕೋವಿ, ಕುಪ್ಪಸದಟ್ಟಿ ಸಹಿತವಾಗಿ ಆತನಿಗೆ ಇದಕ್ಕಾಗಿ ಈ ನರಿಮಂಗಲದ ಮೂಲಕ ಅತ್ಯುನ್ನತ ರೀತಿಯ ಗೌರವ ಸಲ್ಲಿಸಲಾಗುತ್ತಿತ್ತು.

ಆದರೆ ನಂತರದ ವರ್ಷಗಳಲ್ಲಿ ವನ್ಯಜೀವಿ ಕಾಯ್ದೆ ಕಠಿಣ ಸ್ವರೂಪ ದೊಂದಿಗೆ ಅನುಷ್ಠಾನಗೊಂಡಿತ್ತು. ಹುಲಿಯೇ ಇರಲಿ, ಇನ್ನಿತರ ಯಾವದೇ ಪ್ರಾಣಿಗಳಿರಲಿ ಹತ್ಯೆ ಮಾಡಿದಲ್ಲಿ ಆತನಿಗೆ ಜೈಲುವಾಸ ಖಚಿತ ಎಂಬ ಕಾನೂನು ಜಾರಿ ಯಾಗಿದ್ದು ಬಳಿಕ ನರಿಮಂಗಲಕ್ಕೂ ತೆರೆ ಬಿದ್ದಿತ್ತು. ಈ ಕಾಯಿದೆ ಜಾರಿಗೆ ಮುನ್ನ ಕೊಡಗಿನಲ್ಲಿ ಈ ರೀತಿಯಾಗಿ ಹಲವಷ್ಟು ನರಿಮಂಗಲಗಳು ನಡೆದಿರುವದು ಇದೀಗ ಇತಿಹಾಸ.

‘ಇದು ಕೊಡಗಿನ ಕೊನೆಯ ನರಿಮಂಗಲ’

ಅದು 1971ರ ಇಸವಿ. ಪಾಲಿಬೆಟ್ಟದ ಘಟ್ಟದಳ್ಳ ದಟ್ಟಾರಣ್ಯ ವ್ಯಾಪ್ತಿಯಲ್ಲಿ ವ್ಯಾಘ್ರವೊಂದು ಅಟ್ಟಹಾಸಗೈಯ್ಯುತ್ತಿತ್ತು. ಇದು ಎರಡು-ಮೂರು ಜನರನ್ನು ಕಬಳಿಸುವ ಮೂಲಕ ನರಹಂತಕವಾಗಿ ಮಾರ್ಪಟ್ಟು ಭೀತಿ ಮೂಡಿಸಿತ್ತು. ಈ ಸಂದರ್ಭದಲ್ಲಿ ಇದರ ನಿಯಂತ್ರಣ ಅನಿವಾರ್ಯವೂ ಆಗಿದ್ದು, ಇದನ್ನು ಗುಂಡಿಕ್ಕಿ ಕೊಂದವರಿಗೆ ಆಗಿನ ಜಿಲ್ಲಾಧಿಕಾರಿ ಯಾಗಿದ್ದ ಟಿ.ಜೆ. ರಾಮಕೃಷ್ಣ ಅವರು ಬಹುಮಾನವನ್ನೂ ಘೋಷಿಸಿದ್ದರು.

ಅವಕಾಶ ಬಳಸಿದ ಕಲ್ಮಾಡಂಡ ಜಿಮ್ಮಿ ಮಾದಯ್ಯ

ವನ್ಯಜೀವಿ ಕಾಯಿದೆ ಅನುಷ್ಠಾನಕ್ಕೆ ಮುನ್ನ ಕೊಡಗು ಬೇಟೆಗೂ ಹೆಸರಾಗಿತ್ತು. ಆಗ ಬೇಟೆ ನಿರ್ಬಂಧಿತವಾಗಿರಲಿಲ್ಲ. ನರಹಂತಕ ಹುಲಿಯ ಉಪಟಳ ಹೆಚ್ಚಾದ ಸಂದರ್ಭದಲ್ಲಿ ಈ ಹಿಂದೆ ಬೇಟೆಯಲ್ಲಿ ನಿಪುಣರಾಗಿದ್ದವರಲ್ಲಿ ಒಬ್ಬರು ಚೇರಂಬಾಣೆ ವಿಭಾಗದ ಕಲ್ಮಾಡಂಡ ಜಿಮ್ಮಿ ಮಾದಯ್ಯ ಅವರು. ಇವರು ಸಹಕಾರ ಇಲಾಖೆಯಲ್ಲಿ (ಕೆ.ಎ.ಎಸ್. ಶ್ರೇಣಿ) ಉದ್ಯೋಗಿಯೂ ಆಗಿದ್ದು ಬೆಂಗಳೂರಿನಲ್ಲಿದ್ದರು. ನರಹಂತಕನ ಹತ್ಯೆಗೆ ಬಹುಮಾನದೊಂದಿಗೆ ಅಧಿಕೃತ ಘೋಷಣೆಯನ್ನು ಸಂಬಂಧಿಯೊಬ್ಬ ರಿಂದ ಅರಿತ ಜಿಮ್ಮಿ ಮಾದಯ್ಯ ಕೊಡಗಿಗೆ ಆಗಮಿಸಿ ಕಾರ್ಯಾಚರಣೆಗಿಳಿದಿದ್ದರು.

ಘಟ್ಟದಳ್ಳ ಅರಣ್ಯಕ್ಕೆ ಜೋಡಿನಳಿಗೆಯ ಕೋವಿಯೊಂದಿಗೆ ಒಂದಿಬ್ಬರ ಸಹಕಾರದೊಂದಿಗೆ ಧಾವಿಸಿ ಜಾಲಾಡಿ ಹುಲಿಯ ಜಾಡು ಅರಸಿ ಕಂಡುಹಿಡಿದ ಇವರು ಕೊನೆಗೂ ಒಂದುದಿನ ರಾತ್ರಿ 8.30ರ ವೇಳೆಯಲ್ಲಿ ಬೆಳದಿಂಗಳ ಬೆಳಕಿನಲ್ಲಿ ಭಾರೀ ಗಾತ್ರದ (ಅವರು ಹೇಳುವಂತೆ ಮೂಗಿನ ಭಾಗದಿಂದ ಬಾಲದ ತುದಿಯ ತನಕ 13ಳಿ ಅಡಿ ಉದ್ದ) ಹುಲಿಗೆ ಗುಂಡಿಕ್ಕುವಲ್ಲಿ ಯಶಸ್ವಿಯಾಗಿದ್ದರು. ಭಯಮಿಶ್ರಿತ ಸನ್ನಿವೇಶದ ನಡುವೆ ರಾತ್ರಿ ಗುಂಡಿಕ್ಕಿದ್ದರೂ ಚಂಗನೆ ದೂರಕ್ಕೆ ಹಾರಿದ್ದ ಹುಲಿಯ ಸಾವನ್ನು ರಾತ್ರಿ ಖಚಿತ ಪಡಿಸಿಕೊಳ್ಳಲು ಇವರ್ಯಾರಿಗೂ ಧೈರ್ಯ ಬಂದಿರಲಿಲ್ಲ. ಜಿಮ್ಮಿ ಮಾದಯ್ಯ ಅವರು ಪ್ರಸ್ತುತ ಮಡಿಕೇರಿಯಲ್ಲಿ ನೆಲೆಸಿದ್ದಾರೆ. ಇವರು ‘ಶಕ್ತಿ’ಯೊಂದಿಗೆ ತಮ್ಮ ಆಗಿನ ಅನುಭವವನ್ನು ಈ ರೀತಿಯಾಗಿ ಹಂಚಿಕೊಂಡಿದ್ದಾರೆ.

ಇದು ಕಾದುಕುಳಿತ್ತಿದ್ದ ಭಯಾನಕತೆ, ಚಡಪಡಿಕೆಯನ್ನು ಮೆಲುಕು ಹಾಕಿದ ಜಿಮ್ಮಿ ಅವರು ‘ಗುಂಡಿಕ್ಕಿದ ಸಂದರ್ಭ ವ್ಯಾಘ್ರ ತಮ್ಮ ಸನಿಹಕ್ಕೆ ಹಾರಿ ತನ್ನ ಪಂಜದಿಂದ ನೆಲಕ್ಕೆ ಅಪ್ಪಳಿಸಿ ಮತ್ತೆ ದೂರ ನೆಗೆದಿತ್ತು’. ಈ ಜಾಗದಲ್ಲಿ ಅದರ ಎರಡು ಉರುಗು ಸಹ ಬಿದ್ದಿತ್ತು. ಮರುದಿನ ನಾಯಿ-ಜನಸಹಿತವಾಗಿ ಹುಡುಕಾಟ ನಡೆಸಿದಾಗ ಸನಿಹದ ಕಂದಕವೊಂದರಲ್ಲಿ ಇದು ಸತ್ತು ಬಿದ್ದಿತ್ತು ಎಂಬದಾಗಿ ಸ್ಮರಿಸಿದರು.

ಪುಟಿದೆದ್ದ ಸಂಭ್ರಮ

ಭಾರೀ ಗಾತ್ರದ ನರಹಂತಕ ಹುಲಿಯನ್ನು ಗುಂಡಿಕ್ಕಿರುವ ಸುದ್ದಿ ಹರಡಿದಂತೆ ಜನವಲಯದಲ್ಲಿ ಭಾರೀ ಸಂಭ್ರಮ ಉಂಟಾಗಿತ್ತು. ಹೆಚ್ಚು ಆತಂಕ ಸೃಷ್ಟಿಸುತ್ತಿದ್ದ ಹುಲಿ ಇನ್ನಿಲ್ಲವೆಂದರಿತ ಬಳಿಕ ಜನ ಸೇರಲಾರಂಭಿಸಿದರು. ಭಾರೀ ಗಾತ್ರದ ಈ ವ್ಯಾಘ್ರನನ್ನು ತಮ್ಮ ಒಟ್ಟಿಗಿದ್ದ ಸಂಬಂಧಿ ಬಿದ್ದಂಡ ರಾಜಪ್ಪ, ಕಾರ್ಮಿಕ ಮಾರ ಮತ್ತಿತರರೊಂದಿಗೆ ಜೋಂಗಾ ಜೀಪ್‍ಗೆ ಹಾಕಲಾಯಿತು.

ಆ ಬಳಿಕ ಗೋಣಿಕೊಪ್ಪ, ಪೊನ್ನಂಪೇಟೆ ತನಕ ತೆರಳಿ ವೀರಾಜಪೇಟೆ, ಮೂರ್ನಾಡು ಮಾರ್ಗವಾಗಿ ಮೆರವಣಿಗೆ ಮೂಲಕ ಮಡಿಕೇರಿಗೆ ತರಲಾಯಿತು. ಎಲ್ಲೆಲ್ಲೂ ಜನ ಕುತೂಹಲದಿಂದ ವೀಕ್ಷಿಸುತ್ತಿದ್ದರು. ಈ ಸಂದರ್ಭದಲ್ಲಿ ಮಡಿಕೇರಿಯ ಫೀ.ಮಾ. ಕಾರ್ಯಪ್ಪ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದ ಬಿದ್ದಾಟಂಡ ಸಿ. ಪೊನ್ನಪ್ಪ ಅವರು ವಿದ್ಯಾರ್ಥಿಗಳು ನೋಡಲು ಉತ್ಸುಕರಾಗಿದ್ದಾರೆ. ಕಾಲೇಜಿಗೆ ಆಗಮಿಸುವಂತೆ ಹೇಳಿದ್ದರಿಂದ ಅಲ್ಲಿಗೂ ತೆರಳಲಾಯಿತು.

ಇದಾದ ಬಳಿಕ ಮಡಿಕೇರಿಯ ತಮ್ಮ ಮನೆಯಲ್ಲಿ ಎಲ್ಲರೂ ಸೇರಿ ‘ನರಿಮಂಗಲ’ ಆಚರಿಸಿದರು. ಈ ಪದ್ಧತಿ ಬಳಿಕ ಕೋಟೆ ಆವರಣಕ್ಕೆ ಅದನ್ನು ಸಾಗಿಸಲಾಯಿತು ಎಂದು ಅವರು ನೆನಪಿಸಿಕೊಂಡರು.

ಬಂಧಿಸುವುದಾಗಿ ಹೇಳಿದ್ದ ಡಿಎಫ್‍ಓ

ಈ ಅವಧಿಯಲ್ಲಿ ಅರಣ್ಯ ಇಲಾಖೆಯಲ್ಲಿ ಡಿಎಫ್‍ಓ ಆಗಿದ್ದ ತಮಗೆ ಸ್ನೇಹಿತರೂ ಆಗಿದ್ದ ಆಳ್ವ ಎಂಬವರು ತುಳು ಭಾಷೆಯಲ್ಲಿ ‘ಪಿಲಿ ಕೆರ್ತನಾ, ನಿನ್ನಾನ್ ಅರೆಸ್ಟ್ ಮಲ್ಪುವೆ..’ (ಹುಲಿ ಕೊಂದಿದ್ದೀಯಾ ನಿನ್ನ ನಾನು ಬಂಧಿಸುವೆ) ಛೇಡಿಸಿದ್ದರು.

ಇದಕ್ಕೆ ಅನುಮತಿ ಇದೆ ಎಂದು ಹೇಳಿದಾಗ ಹೊಸ ಕಾಯಿದೆ ಇದೀಗ ಬಂದಿದೆ ಎಂದು ಅವರು ನುಡಿದಿದ್ದರು ಎಂದು ಜಿಮ್ಮಿ ಆಗಿನ ಸಂದರ್ಭವನ್ನು ಸ್ಮರಿಸಿದರು.

ಈ ಎಲ್ಲ ಘಟಾನವಳಿಗಳ ಬಳಿಕ ಹುಲಿಯನ್ನು ಅರಣ್ಯ ಇಲಾಖೆಗೆ (ಸರಕಾರಕ್ಕೆ) ಹಸ್ತಾಂತರಿಸಲಾಗಿತ್ತು. ಇದು ಕೊಡಗಿನಲ್ಲಿ ನಡೆದ ಕಟ್ಟಕಡೆಯ ನರಿಮಂಗಲ ಎಂಬದು ಇದೀಗ ಇತಿಹಾಸ.

? ಕಾಯಪಂಡ ಶಶಿ ಸೋಮಯ್ಯ