ಸಾಮಾನ್ಯವಾಗಿ ಅತಿವೃಷ್ಟಿ, ಅನಾವೃಷ್ಟಿ ಯಿಂದಾಗಿ ಹಣ್ಣಿನ ಬೆಳೆಗಳು ಹಾಳಾಗುತ್ತಿದ್ದ ಅನೇಕ ಉದಾಹರಣೆ ಗಳಿದೆ. ಆದರೆ ಇದೇ ಮೊದಲ ಬಾರಿಗೆ ಅತ್ಯುತ್ತಮ ಫಸಲಿದ್ದರೂ ನೈಸರ್ಗಿಕ ವಿಕೋಪವಿಲ್ಲದಿದ್ದರೂ ಫಸಲು ನಾಶದಿಂದ ಹಣ್ಣು ಬೆಳೆಗಾರ ಕಂಗೆಡುವಂಥ ವಿಚಿತ್ರ ಪರಿಸ್ಥಿತಿ ತಲೆದೋರಿದೆ.
ಕೊರೊನಾ ಲಾಕ್‍ಡೌನ್‍ನಿಂದಾಗಿ ಕೊಡಗು ಜಿಲ್ಲೆಯಾದ್ಯಂತ ಬೆಳೆಸಲಾಗಿದ್ದ ಸಹಸ್ರಾರು ಟನ್ ಹಣ್ಣಿನ ಫಸಲು ನೆಲಕಚ್ಚುತ್ತಿದೆ. ಮಾರ್ಚ್‍ನಿಂದ ಮೇ ತಿಂಗಳವರೆಗೆ ಕೇರಳ, ತಮಿಳುನಾಡು ರಾಜ್ಯಗಳಲ್ಲಿ ಅತ್ಯಂತ ಬೇಡಿಕೆ ಪಡೆಯುತ್ತಿದ್ದ ಕೊಡಗಿನ ಸ್ವಾದಿಷ್ಟ ಹಣ್ಣುಗಳು ಈಗ ಮಾರಾಟವಾಗದೇ ಕೊಳೆತು ಹೋಗುತ್ತಿದೆ. ಸಪೆÇೀಟ, ಅನನಾಸ್, ಬೆಣ್ಣೆಹಣ್ಣು, ಮಾವು ಸೇರಿದಂತೆ ಹಲವಾರು ಹಣ್ಣುಗಳಿಗೆ ಬೇಸಿಗೆಯಲ್ಲಿ ಜ್ಯೂಸ್ ತಯಾರಿಕೆಯಿಂದಾಗಿ ಬಹಳ ಬೇಡಿಕೆಯಿರುತ್ತದೆ.
ಗಿಡದಿಂದ ಕೈಗೆ ಬಂದು, ಬೆಳೆದಾತನ ಬಾಯಿಗೆ ಬಂದರೂ ಪ್ರಯೋಜನವಾಗದಂಥ ಆರ್ಥಿಕ ಸಂಕಷ್ಟದಲ್ಲಿ ಬೆಳೆಗಾರನಿದ್ದಾನೆ. ಗಿಡದಲ್ಲಿಯೇ ಸಾವಿರಾರು ಹಣ್ಣು ಕೊಳೆತು ಹೋಗುತ್ತಿರುವುದನ್ನು ಕಂಡು ಕೃಷಿಕರು ಕಣ್ಣೀರು ಹಾಕುವಂತಾಗಿದೆ.
ಶನಿವಾರಸಂತೆ ವ್ಯಾಪ್ತಿಯ ತೋಯಳ್ಳಿಯಲ್ಲಿ 2002 ರಿಂದ ಸಪೆÇೀಟ ಬೆಳೆಗೆ ಮುಂದಾಗಿದ್ದ ಟಿ.ಆರ್. ಪುರುಷೋತ್ತಮ್ ಉತ್ತಮ ಬೇಡಿಕೆ ಹಿನ್ನಲೆಯಲ್ಲಿ ಪ್ರತೀ ವರ್ಷ ಕೃಷಿ ಪ್ರದೇಶ ವಿಸ್ತರಿಸುತ್ತಲೇ ಬಂದರು. ಸಪೆÇೀಟಕ್ಕೆ ಭಾರೀ ಬೇಡಿಕೆ ಇದ್ದುದ್ದರಿಂದಾಗಿ ಕೇರಳದ ವ್ಯಾಪಾರಿಯೇ ಸಪೆÇೀಟ ಹಣ್ಣು ಗುತ್ತಿಗೆ ಪಡೆದು ಕೇರಳಕ್ಕೆ ಸಾಗಿಸುತ್ತಿದ್ದರು. ಉತ್ತಮ ಫಸಲು ಮತ್ತು ಬೆಲೆಯಿಂದಾಗಿ ಟಿ.ಆರ್. ಪುರುಷೋತ್ತಮ ಈ ವರ್ಷ 6 ಎಕರೆ ವಿಸ್ತಾರದಲ್ಲಿ 1150 ಗಿಡಗಳಿಂದ ಸುಮಾರು 9 ಟನ್ ಸಪೆÇೀಟ ಫಸಲು ಬೆಳೆದಿದ್ದರು. ಕೆ.ಜಿ.ಗೆ 20 ರೂಪಾಯಿಯಂತೆ ಕೇರಳದ ವ್ಯಾಪಾರಿಗೆ ಗುತ್ತಿಗೆಯನ್ನೂ ನೀಡಲಾಗಿತ್ತು.
ಆದರೆ ಲಾಕ್‍ಡೌನ್‍ನಿಂದಾಗಿ ಕೇರಳದಿಂದ ವ್ಯಾಪಾರಿಗೆ ಕೊಡಗು ಪ್ರವೇಶಿಸಲೇ ಆಗಲಿಲ್ಲ. ಜನರೇ ಸಂಚರಿಸಲಾಗದ ಮೇಲೆ ಸಪೆÇೀಟವನ್ನು ಕೇರಳಕ್ಕೆ ಕೊಂಡೊಯ್ಯುವುದಾದರೂ ಹೇಗೇ? ಕಾಲಿಟ್ಟಲ್ಲೆಲ್ಲಾ ಸಪೆÇೀಟ ಕೊಳೆತು ಬಿದ್ದಿದೆ. ಇಷ್ಟೊಂದು ಫಸಲು ಯಾವ ವರ್ಷವೂ ಆಗಿರಲಿಲ್ಲ. ಆದರೆ ಲಾಕ್‍ಡೌನ್‍ನಿಂದಾಗಿ ತೋಟದಿಂದ ಹೊರಕ್ಕೆ ಮಾರಾಟ ಮಾಡಲೂ ಸಾಧ್ಯವಾಗದ ದುಸ್ಥಿತಿಯಲ್ಲಿ ಸಿಲುಕಿಕೊಂಡೆ ಎಂದು ಸೋಮವಾರಪೇಟೆ ತಾಲೂಕಿನ ಅತೀ ದೊಡ್ಡ ಸಪೆÇೀಟ ಬೆಳೆಗಾರ ಪುರುಷೋತ್ತಮ್ ನೊಂದು ನುಡಿದರು.
ಮಡಿಕೇರಿಯ ಹಿರಿಯ ಉದ್ಯಮಿ ಬೊಟ್ಟೋಳಂಡ ಮಿಟ್ಟು ಚಂಗಪ್ಪ ಜಿಲ್ಲೆಯ ಗಡಿ ಗ್ರಾಮವಾದ ಬೆಣಗಾಲುವಿನಲ್ಲಿ 20 ವರ್ಷಗಳಿಂದ ಸಪೆÇೀಟ ತೋಟ ಹೊಂದಿದ್ದರು. ಕ್ರಿಕೆಟ್ ಬಾಲ್ ತಳಿಯ 5 ಸಾವಿರ ಗಿಡಗಳನ್ನು 50 ಎಕರೆಯಲ್ಲಿ ಮಿಟ್ಟು ಚಂಗಪ್ಪ ಪೆÇೀಷಿಸಿದ್ದರು. ಈ ಬಾರಿ ಅತ್ಯುತ್ತಮ ಫಸಲು ಕೂಡ ಬಂದಿತ್ತು.
ಆದರೆ ಲಾಕ್‍ಡೌನ್‍ನಿಂದಾಗಿ ಸಪೆÇೀಟ ಕುಯ್ಯಲೂ ಜನ ಸಿಗದೇ, ಸಪೆÇೀಟ ಸಾಗಾಣೆಗೂ ವಾಹನಗಳಿಲ್ಲದೇ, ಗುತ್ತಿಗೆದಾರರೂ ಬಾರದೇ ಗಿಡಗಳಲ್ಲಿಯೇ ಫಸಲು ಕೊಳೆತು ಹೋಯಿತು. ಈಗ ಸಾವಿರಾರು ಸಪೆÇೀಟ ಹಣ್ಣುಗಳು ಗಿಡಗಳ ಬುಡದಲ್ಲಿ ಬಿದ್ದಿರುವುದನ್ನು ನೋಡಲಾಗುತ್ತಿಲ್ಲ ಎಂದು ನೊಂದು ನುಡಿದರು ಮಿಟ್ಟು ಚಂಗಪ್ಪ.
ಸಪೆÇೀಟದಂತೆ ಕೊಡಗಿನ ಮತ್ತೊಂದು ಪ್ರಮುಖ ಫಲವಾದ ಬೆಣ್ಣೆಹಣ್ಣು ಕೂಡ ನೂರಾರು ಟನ್ ನಾಶವಾಗಿದೆ. ಅಂದಾಜಿನ ಪ್ರಕಾರ ಕೊಡಗಿನಲ್ಲಿ ವಾರ್ಷಿಕ 500 ಟನ್ ಬೆಣ್ಣೆಹಣ್ಣು ಬೆಳೆಯಲಾಗುತ್ತದೆ. ಕೊಡಗಿನ ಪ್ರತೀ ತೋಟಗಳಲ್ಲಿ ಈ ವರ್ಷ ಬೆಣ್ಣೆಹಣ್ಣು ಬೇಕಾಷ್ಟು ಸಂಖ್ಯೆಯಲ್ಲಿ ಕಂಡುಬಂದಿದೆ. ಇಂತಹ ಹಣ್ಣುಗಳನ್ನು ಬೆಂಗಳೂರಿನ ಮಾರುಕಟ್ಟೆಗೆ ತಲುಪಿಸಲು ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದಿಂದ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಬೆಂಗಳೂರಿನ ಅಪಾರ್ಟ್‍ಮೆಂಟ್‍ಗಳಿಗೆ ಕೊಡಗಿನ ಹಲವು ತೋಟಗಳಿಂದ 3 ಟನ್ ಬೆಣ್ಣೆಹಣ್ಣನ್ನು ರವಾನಿಸಲಾಗಿದ್ದು, ಜಿಲ್ಲೆಯಲ್ಲಿ ಕೆ.ಜಿ.ಗೆ 30 ರೂ. ದೊರಕಿದರೆ ಬೆಂಗಳೂರಿನಲ್ಲಿ ಕೆ.ಜಿ.ಗೆ 60 ರೂ. ದೊರಕುತ್ತಿರುವುದು ಬೆಣ್ಣೆಹಣ್ಣು ಕೃಷಿಕನ ಪಾಲಿಗೆ ವರದಾನವಾಗಿದೆ. ಲಾಕ್‍ಡೌನ್‍ನಿಂದಾಗಿ ಹೊರಹೋಗಲಾಗದ ಬೆಂಗಳೂರು ಮಹಾನಗರದ ಜನತೆಗೆ ಹಣ್ಣು ವ್ಯಾಪಾರಿಗಳ ಮೂಲಕ ಮನೆಬಾಗಿಲಿಗೆ ರುಚಿಕರ ಹಣ್ಣು ದೊರಕಿದಂತಾಗುತ್ತಿದೆ. ರೈತನಿಂದ ಗ್ರಾಹಕನಿಗೆ ಎಂಬ ನಮ್ಮ ಉದ್ದೇಶ ಸಫಲವಾಗಿದೆ. ಎಷ್ಟು ಹಣ್ಣಿದ್ದರೂ ನಾವು ಮಾರಾಟಕ್ಕೆ ವ್ಯವಸ್ಥೆ ಮಾಡುತ್ತಿದ್ದೇವೆ ಎಂದು ಕೆ.ವಿ.ಕೆ.ಯ ಹಿರಿಯ ವಿಜ್ಞಾನಿ ಡಾ. ವೀರೇಂದ್ರ ಕುಮಾರ್ ಮಾಹಿತಿ ನೀಡಿದರು.
ಊಟಿ, ಆಂಧ್ರದಿಂದಲೂ ಕೊಡಗಿನ ಬೆಣ್ಣೆಹಣ್ಣು ಖರೀದಿಸಲು ದೊಡ್ಡ ವಹಿವಾಟುದಾರರು ಮುಂದೆ ಬಂದಿರುವುದು ಉತ್ತಮ ಬೆಳವಣಿಗೆ. ಅಪಾರ ಬೇಡಿಕೆಯಿದ್ದರೂ ಮಳೆಗಾಲದಲ್ಲಿ ಹಣ್ಣು ಹಾಳಾಗುವುದರಿಂದಾಗಿ ಒಂದೇ ಪ್ರದೇಶದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಬೆಣ್ಣೆಹಣ್ಣು ಬೆಳೆಯಲು ಕೊಡಗಿನಲ್ಲಿ ಬೆಳೆಗಾರರು ಮುಂದೆ ಬರುತ್ತಿಲ್ಲ ಎಂದು ಹಣ್ಣು ಕೃಷಿ ತಜ್ಞ ಸಿ.ಆರ್. ಶಿವಕುಮಾರ್ ಹೇಳುತ್ತಾರೆ.
16 ವರ್ಷಗಳಲ್ಲಿ ಇದೇ ಮೊದಲ ಸಲ ಬೆಳೆದ ಹಣ್ಣುಗಳು ಮಾರಲಾಗದೇ ಕೊಳೆತೇ ಹೋಯಿತು. 1.75 ಎಕರೆಯಲ್ಲಿ 200 ಮರಗಳಲ್ಲಿ ಬೆಳೆದ ಬೆಣ್ಣೆಹಣ್ಣು ವಾರ್ಷಿಕ 20 ಕ್ವಿಂಟಾಲ್ ಫಸಲು ನೀಡುತ್ತಿತ್ತು. ಈ ವರ್ಷ 1.50 ಲಕ್ಷ ರೂ. ಸರ್ವನಾಶವಾಯಿತು ಎಂದು ನೊಂದು ಹೇಳಿದವರು ಗೋಣಿಮರೂರು ಗ್ರಾಮದ ಹಣ್ಣಿನ ಕೃಷಿಕ ಪಿ.ಪಿ. ಸೋಮಣ್ಣ (ರವಿ).
ಅನನಾಸು, ಕಿತ್ತಳೆ, ಮಾವು, ಹಲಸು, ನೇಂದ್ರಬಾಳೆ, ಪಚ್ಚೆಬಾಳೆ, ಪುನರ್ ಪುಳಿ, ಸೀಬೆಕಾಯಿ, ದಾಳಿಂಬೆ, ನೆಲ್ಲಿಕಾಯಿ, ಕರ್ಬುಜ, ಪರಂಗಿ, ಮೂಸಂಬಿ, ಪನ್ನೆರಳೆ, ಪಪ್ಪಾಯಿ ಚಕೋತ, ಲಕ್ಷ್ಮಣಫಲ, ಸೀತಾ ಫಲ ಸೇರಿದಂತೆ ಕೊಡಗಿನಲ್ಲಿ ಹಲವಾರು ವೈವಿಧ್ಯಮಯ ರುಚಿಕರ ಹಣ್ಣುಗಳಿಗೆ ಮಾರ್ಚ್‍ನಿಂದ ಮೇ ತಿಂಗಳವರೆಗೆ ಪರ್ವ ಕಾಲ. ಆದರೆ, ಬಹುತೇಕ ಕೃಷಿ ಪ್ರದೇಶಗಳಲ್ಲಿ ಈ ಹಣ್ಣುಗಳು ಬೆಳೆದಾತನ ಕುಟುಂಬದ ಬಾಯಿಗೆ ಆಹಾರವಾಯಿತೇ ವಿನಾ ಆರ್ಥಿಕವಾಗಿ ನೆರವಾಗಲೇ ಇಲ್ಲ.
ರಂಜಾನ್ ಸಂದರ್ಭದಲ್ಲಿ ಕೇರಳ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಪಡೆಯುತ್ತಿದ್ದ ಕೊಡಗಿನ ಹಣ್ಣುಗಳಿಗೆ ಲಾಕ್‍ಡೌನ್‍ನಿಂದಾಗಿ ಬಂದ್ ಆಗಿರುವ ಕೇರಳ ಗಡಿಯಲ್ಲಿ ಪ್ರವೇಶ ದೊರಕಲಿಲ್ಲ.
ಕೊನೇ ಹನಿ
ಸಾಮಾನ್ಯವಾಗಿ ಕೊಡಗಿನಿಂದ ಕೇರಳ, ತಮಿಳುನಾಡು, ಬೆಂಗಳೂರು, ಮಂಗಳೂರಿನ ಹಣ್ಣು ಮಾರುಕಟ್ಟೆಗೆ ಸ್ವಾದಿಷ್ಟ ಹಣ್ಣು ಮಾರಾಟವಾಗುತ್ತಿತ್ತು. ಮಾರ್ಚ್‍ನಿಂದ ಮೇ ತಿಂಗಳಲ್ಲಿ ಹಲವಾರು ಗುತ್ತಿಗೆದಾರರು ಹಣ್ಣಿನ ಫಸಲು ಕೊಯ್ಲಿಗೆ ತೋಟಗಳಲ್ಲಿ ಕಂಡುಬರುತ್ತಿದ್ದರು. ಲಾಕ್‍ಡೌನ್‍ನಿಂದಾಗಿ ಯಾವುದೇ ವ್ಯಾಪಾರಿಯೂ ತೋಟಕ್ಕೆ ಬಂದಿಲ್ಲ.
ರಾಶಿಗಟ್ಟಲೆ ಬೆಳೆಯಲಾದ ಬೆಣ್ಣೆಹಣ್ಣು ಕೊಡಗಿನ ಬಹುತೇಕ ಬೆಳೆಗಾರರ ಮನೆಗಳಲ್ಲಿ ಕಂಡುಬಂದಿದೆ. ಬೆಣ್ಣೆಹಣ್ಣನ್ನು ಮನೆ ಮಂದಿ ಮೂರು ಹೊತ್ತು ತಿನ್ನುವಂತಾಗಿದೆ. ಜತೆಗೆ ಲಾಕ್‍ಡೌನ್‍ನಿಂದಾಗಿ ಮನೆಗಳಲ್ಲಿ ಹಣ್ಣಿನ ವೈವಿಧ್ಯಮಯ ತಿನಿಸುಗಳು ತಯಾರಾಗುತ್ತಿದ್ದು ಬೆಣ್ಣೆಹಣ್ಣಿನ ಜ್ಯೂಸ್, ಸಲಾಡ್, ಹಲ್ವ, ಮಿಲ್ಕ್ ಶೇಕ್, ಸ್ಯಾಂಡ್ ವಿಚ್ ಸೇರಿದಂತೆ ಹತ್ತುಹಲವಾರು ವಿಧದ ತಿನಿಸು ತಯಾರಾಗುತ್ತಿದೆ. ಬೆಣ್ಣೆಹಣ್ಣು ಇಲ್ಲದ ತೋಟದ ಮನೆಯೇ ಕೊಡಗಿನಲ್ಲಿ ಇಲ್ಲದಂತಾಗಿದೆ.!