ಮಡಿಕೇರಿ, ಮೇ 16: ಕೊಡಗಿನಲ್ಲಿ ಕೊಡವ ಜನಾಂಗ ಸೇರಿದಂತೆ, ಕೊಡವ ಭಾಷೆ ಮಾತನಾಡುವ 20 ಸಮುದಾಯಗಳು ಒಂದೆಡೆ ಸೇರಿ ಸೌಹಾರ್ಧ ಬದುಕನ್ನು ನಡೆಸುವಲ್ಲಿ ಸಹಕಾರಿಯಾದ ನಾಡಿನ ಜಮ್ಮಾ, ಉಂಬಳಿ, ಊರುಪರಂಬು, ದೇವಪರಂಬು, ನಾಡ್‍ಮಂದ್ ಸೇರಿದಂತೆ ಗೋಮಾಳ ಜಾಗಗಳ ಅಕ್ರಮ ಒತ್ತುವರಿಯನ್ನು ತೆರವುಗೊಳಿಸಿ ಯಥಾಸ್ಥಿತಿ ಕಾಪಾಡಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕೊಡವ ಭಾಷಿಕ ಸಮುದಾಯಗಳ ಕೂಟ ಶಾಸಕ ಕೆ.ಜಿ. ಬೋಪಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದೆ.
ಈ ಸಂದರ್ಭ ಮಾತನಾಡಿದ ಕೂಟದ ಅಧ್ಯಕ್ಷ ಡಾ.ಮೇಚಿರ ಸುಭಾಷ್ ನಾಣಯ್ಯ, ಜಿಲ್ಲೆಯಾದ್ಯಂತ ನೆಲೆಕಂಡಿರುವ ಮಂದ್-ಪರಂಬು, ಗೋಮಾಳ, ಕೆರೆಗಳ, ಒತ್ತುವರಿಯನ್ನು ತೆರವುಗೊಳಿಸಿ, ಜಾಗದ ವಾಸ್ತವಾಂಶವನ್ನು ಗುರುತಿಸಲು ಪೂರ್ಣ ಪ್ರಮಾಣದ ತಜ್ಞರ ಸಮಿತಿ ಮತ್ತು ಸತ್ಯಶೋಧನಾ ಸಮಿತಿಯನ್ನು ರಚಿಸಬೇಕೆಂದು ಒತ್ತಾಯಿಸಿದರು.
ಅಂದಿನ ಕಾಲದಲ್ಲಿ ರಾಜವಂಶಸ್ಥರು, ನಾಡಿನ ಮೂಲನಿವಾಸಿ ಜನಾಂಗದವರ ಬದುಕಿನ ವೈಶಾಲ್ಯತೆಯನ್ನು ಪರಿಗಣಿಸಿ, ಉಂಬಳಿಯಾಗಿ ನೀಡಿದ ಜಾಗವನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಿ ಕೊಳ್ಳುವಲ್ಲಿ, ಪೀಳಿಗೆಯ ಮಕ್ಕಳಿಗೆ ದಾರಿದೀಪವಾಗಲು ಎಚ್ಚರ ವಹಿಸಬೇಕಾದ ಅನಿವಾರ್ಯತೆಯಿದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ತಕ್ಷಣ ಎಚ್ಚೆತ್ತುಕೊಂಡು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು.
ಕೂಟದ ಗೌರವ ಕಾರ್ಯದರ್ಶಿ ಕೂಡಂಡ ಸಾಬ ಸುಬ್ರಮಣಿ, ಸಹ ಕಾರ್ಯದರ್ಶಿ ಮೊಳ್ಳೆಕುಟ್ಟಂಡ ದಿನು ಬೋಜಪ್ಪ, ಖಜಾಂಚಿ ಪಡಿಞರಂಡ ಪ್ರಭುಕುಮಾರ್, ನಿರ್ದೇಶಕರುಗಳಾದ ಕುಡಿಯರ ಮುತ್ತಪ್ಪ, ತೋರೆರ ಕಾಶಿ ಕಾರ್ಯಪ್ಪ, ಪೊನ್ನಜ್ಜೀರ ಕಿಶು ಭರತ್ ಹಾಗೂ ಕೋಲೆಯಂಡ ಯು. ಗಿರೀಶ್ ಮನವಿ ಸಲ್ಲಿಸುವ ಸಂದರ್ಭ ಹಾಜರಿದ್ದರು.