ಮಡಿಕೇರಿ, ಮೇ 16: ಕೊರೊನಾ ವೈರಸ್ ಹರಡದಂತೆ ತಡೆಗಟ್ಟುವಲ್ಲಿ ಕಾರ್ಯನಿರ್ವಹಿಸುತ್ತಿರುವ ಕೊರೊನಾ ವಾರಿಯರ್ಸ್‍ಗಳಿಗೆ ಕಂಟೈನ್‍ಮೆಂಟ್ ಮತ್ತು ಕೆಂಪು ಹಾಗೂ ಹಳದಿ ವಲಯದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳ ಸುರಕ್ಷತೆಗಾಗಿ ಪಿ.ಪಿ.ಇ. ಕಿಟ್‍ಗಳನ್ನು ವಿತರಿಸಬೇಕು. ಕೊರೊನಾ ವಿರುದ್ಧ ಹೋರಾಡುತ್ತಿರುವ ಎಲ್ಲಾ ನೌಕರರು ಮತ್ತು ಕಾರ್ಮಿಕರಿಗೆ ಆಗಿಂದಾಗ್ಗೆ ಉಚಿತ ಕೋವಿಡ್-19 ಪರೀಕ್ಷೆ ಮಾಡಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಕುಶಾಲನಗರದಲ್ಲಿ ಸಿಐಟಿಯು ಸಂಘಟನೆಯ ಸೋಮವಾರಪೇಟೆ ತಾಲೂಕು ಸಮಿತಿ ಸೋಮವಾರಪೇಟೆ ಉಪ ತಹಶೀಲ್ದಾರ್‍ರ ಮೂಲಕ ಸರ್ಕಾರಕ್ಕೆ ನೀಡಿದೆ.

ರೂ. 50 ಲಕ್ಷ ವಿಮೆಯನ್ನು ಕರ್ತವ್ಯದಲ್ಲಿದ್ದಾಗ ಮರಣ ಹೊಂದಿದವರಿಗೆ ಮತ್ತು ಅವರ ಇಡೀ ಕುಟುಂಬದ ಸದಸ್ಯರಿಗೂ ಜಾರಿ ಮಾಡಬೇಕು, ಕೊರೊನಾ ಕರ್ತವ್ಯದಲ್ಲಿರುವ ಎಲ್ಲಾ ಇಲಾಖೆಯ ದಿನಗೂಲಿ, ಗುತ್ತಿಗೆ, ಹೊರಗುತ್ತಿಗೆ, ಸ್ಕೀಂ ನೌಕರರಿಗೆ ಮತ್ತು ಮುನಿಸಿಪಾಲಿಟಿ ಹಾಗೂ ಗ್ರಾ.ಪಂ. ನೌಕರರಿಗೆ ಹೆಚ್ಚುವರಿಯಾಗಿ ಪ್ರತೀ ತಿಂಗಳು ರೂ. 25 ಸಾವಿರ ಪ್ರೋತ್ಸಾಹ ಧನ ನೀಡಬೇಕು ಎಂದು ಸಮಿತಿಯ ಸಂಚಾಲಕ ಪಿ.ಆರ್. ಭರತ್ ಒತ್ತಾಯಿಸಿದರು.

ಅಗತ್ಯವಿರುವವರಿಗೆ ಉಚಿತ ಆಹಾರ ಮತ್ತು ವಸತಿ ವ್ಯವಸ್ಥೆಯನ್ನು ಜಿಲ್ಲಾಧಿಕಾರಿ ಅಥವಾ ತಹಶೀಲ್ದಾರ್ ಅವರ ಮೂಲಕ ಸರ್ಕಾರವೇ ಮಾಡಬೇಕು ಎಂದು ಆಗ್ರಹಿಸಿದರು. ಈ ಸಂದರ್ಭ ಗ್ರಾ.ಪಂ. ನೌಕರರ ಸಂಘದ ತಾಲೂಕು ಕಾರ್ಯದರ್ಶಿ ವಿಜಯ್, ಬಿಸಿಯೂಟ ನೌಕರರ ಸಂಘದ ಕಾವೇರಿ, ತಲೆಹೊರೆ ಕಾರ್ಮಿಕರ ಸಂಘದ ಪಿ.ಎಂ. ರಾಜನ್, ಅಂಗನವಾಡಿ ನೌಕರರ ಸಂಘದ ಜಮುನಾ ಸೇರಿದಂತೆ ಸರ್ಕಾರಿ ಆಸ್ಪತ್ರೆ ಸ್ವಚ್ಛತಾ ಸಿಬ್ಬಂದಿಗಳ ಸಂಘದ ಶಾರದಮ್ಮ ಹಾಗೂ ಮತ್ತಿತರರು ಹಾಜರಿದ್ದರು.