ಸಿದ್ದಾಪುರ, ಮೇ 16: ಕೊರೊನಾ ವೈರಸ್ ಭೀತಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ತರು ಇದೀಗ ಅತಂತ್ರ ಸ್ಥಿತಿಯಲ್ಲಿದ್ದಾರೆ ದೇಶದಾದ್ಯಂತ ರಾಜ್ಯದ್ಯಂತ ಹಾಗೂ ಜಿಲ್ಲೆಯಲ್ಲಿ ಕೂಡ ಕೊರೊನಾ ವೈರಸ್ಸಿನಿಂದ ಜನರು ಬೆಚ್ಚಿಬಿದ್ದಿದ್ದಾರೆ. ಕಳೆದ ವರ್ಷ ಮಹಾಮಳೆಗೆ ಸಿಲುಕಿಕೊಂಡು ಪ್ರವಾಹದಿಂದ ನೂರಾರು ಮನೆಗಳು ಹಾನಿಯಾಗಿ ಹಲವರ ಬದುಕು ದುಸ್ಥರವಾಗಿತ್ತು. ಕಳೆದ ವರ್ಷ ಪ್ರವಾಹಕ್ಕೆ ಸಿಲುಕಿ ಸಿದ್ದಾಪುರ ವ್ಯಾಪ್ತಿಯ ಕರಡಿಗೋಡು, ಗುಹ್ಯ, ನೆಲ್ಲಿಹುದಿಕೇರಿ ಭಾಗದ ಬೆಟ್ಟದ ಕಾಡು, ಕುಂಬಾರಗುಂಡಿ, ಕೊಂಡಂಗೇರಿ ಭಾಗದ ನದಿ ತೀರದ ನೂರಾರು ಮನೆಗಳು ಪ್ರವಾಹಕ್ಕೆ ಸಿಲುಕಿ ನೆಲಸಮಗೊಂಡಿತ್ತು. ಅಲ್ಲದೆ ನೂರಾರು ಮನೆಗಳು ಸಂಪೂರ್ಣವಾಗಿ ಹಾನಿಗೊಳಗಾಗಿತ್ತು ಇದಲ್ಲದೆ ಮನೆಮಠಗಳನ್ನು ಕಳೆದುಕೊಂಡವರ ಮನೆಯ ಸಾಮಗ್ರಿಗಳು ಕೂಡ ನೀರಿನಲ್ಲಿ ಕೊಚ್ಚಿಹೋಗಿ ಮನೆ ಕಳೆದುಕೊಂಡ ಹಲವಾರು ಮಂದಿ ಅನೇಕ ಕಡೆಗಳಲ್ಲಿ ಜಿಲ್ಲಾಡಳಿತದ ವತಿಯಿಂದ ತೆರೆಯಲಾಗಿದ್ದ ಪರಿಹಾರ ಕೇಂದ್ರದಲ್ಲಿ ಬಹಳಷ್ಟು ದಿನ ಆಶ್ರಯ ಪಡೆದರು ಅಲ್ಲದೆ ಹಲವಾರು ಮಂದಿ ಬಾಡಿಗೆ ಮನೆಗಳಿಗೆ ತೆರಳಿದರು. ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದ ನೂರಾರು ಕುಟುಂಬಗಳು ತಮಗೆ ಸರಕಾರ ಪುನರ್ವಸತಿ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು.
ಸಿದ್ದಾಪುರ ಹಾಗೂ ನೆಲ್ಲಿಹುದಿಕೇರಿ ಗ್ರಾಮಸ್ಥರು ತಮಗೆ ಪುನರ್ವಸತಿ ಕಲ್ಪಿಸಿಕೊಡುವಂತೆ ಪ್ರತಿಭಟನೆಯನ್ನು ಕೂಡ ಹಮ್ಮಿಕೊಂಡಿದ್ದರು ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಸಚಿವರುಗಳು ಆಗಮಿಸಿ ಶಾಶ್ವತ ಸೂರು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಸಂತ್ರಸ್ತರಿಗೆ ಭರವಸೆಯನ್ನು ನೀಡಿದರು. ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಜಿಲ್ಲಾಡಳಿತಕ್ಕೆ ತ್ವರಿತಗತಿಯಲ್ಲಿ ಜಾಗವನ್ನು ಗುರುತಿಸುವಂತೆ ಆದೇಶವನ್ನೂ ನೀಡಿದ್ದರು ಈ ಹಿನ್ನೆಲೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಉಪವಿಭಾಗಾಧಿಕಾರಿ ಅವರುಗಳ ನೇತೃತ್ವದಲ್ಲಿ ಕಂದಾಯ ಇಲಾಖಾಧಿಕಾರಿಗಳು ಸರಕಾರಿ ಭೂಮಿ ಒತ್ತುವರಿ ಮಾಡಿಕೊಂಡಿದ್ದ ಕಾಫಿ ತೋಟದ ಮಾಲೀಕರಿಂದ ಸರ್ಕಾರಿ ಭೂಮಿಯನ್ನು ವಶಕ್ಕೆ ಪಡೆದುಕೊಂಡರು ಅರೆಕಾಡು ಗ್ರಾಮದಲ್ಲಿ ಒತ್ತುವರಿದಾರರಿಂದ ವಶಪಡಿಸಿಕೊಂಡಿರುವ ಜಾಗದಲ್ಲಿ ಪುನರ್ವಸತಿ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಸಿದ್ಧತೆಯನ್ನು ಜಿಲ್ಲಾಡಳಿತ ಕೈಗೊಂಡಿತು.
ಸರ್ಕಾರದ ಮಟ್ಟದಲ್ಲಿ ಮನೆ ನಿರ್ಮಾಣಕ್ಕೆ ಯೋಜನೆಗಳನ್ನು ರೂಪಿಸ ಲಾಗಿತ್ತು ಗ್ರಾಮ ಪಂಚಾಯಿತಿ ಮುಖಾಂತರ ರಾಜೀವ್ ಗಾಂಧಿ ವಸತಿ ಯೋಜನೆ ಅಡಿಯಲ್ಲಿ ಮನೆ ನಿರ್ಮಾಣಕ್ಕೆ ಸಿದ್ಧತೆ ಕೈಗೊಂಡಿದ್ದರು ಅಲ್ಲದೆ ಸಿದ್ದಾಪುರ ಭಾಗದ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಿಕೊಡಲು ವೀರಾಜಪೇಟೆ ತಾಲೂಕಿನ ಬಿ ಶೆಟ್ಟಿಗೇರಿ ಗ್ರಾಮದಲ್ಲಿ ಜಾಗವನ್ನು ಗುರುತಿಸಿ ನೆಲವನ್ನು ಸಮತಟ್ಟು ಮಾಡಲಾಗಿತ್ತು. ಜಿಲ್ಲಾಡಳಿತವು ಮಳೆಗಾಲ ಮುಂಚಿತ ಮನೆ ನಿರ್ಮಾಣಕ್ಕೆ ಮುಂದಾಗಿತ್ತು. ಆದರೆ ಕೊರೊನಾ ವೈರಸ್ ಜಿಲ್ಲಾಡಳಿತದ ತ್ವರಿತಗತಿಯ ಸಿದ್ಧತೆಗಳಿಗೆ ತಣ್ಣೀರೆರಚಿದೆ ಪುನರ್ವಸತಿ ಸಿಗುವ ಕನಸಿನಲ್ಲಿದ್ದ ಸಂತ್ರಸ್ತರಿಗೆ ಇದೀಗ ತೀವ್ರ ಹೊಡೆತ ಆಗಿದೆ. ಮುಂದೇನು ಮಾಡುವುದೆಂದು ಚಿಂತಾಕ್ರಾಂತರಾಗಿದ್ದಾರೆ. ಇದೀಗ ಮುಂದಿನ ಮಳೆಗಾಲ ಆರಂಭವಾಗುವ ಸೂಚನೆ ಕಂಡು ಬಂದಿರುತ್ತದೆ. ಪ್ರವಾಹದ ಭೀತಿ ಎದುರಾಗುವ ಸಾಧ್ಯತೆಯಿದೆ ಹಲವಾರು ಮಂದಿ ನದಿ ತೀರದಲ್ಲಿ ತಾತ್ಕಾಲಿಕ ಶೆಡ್ ನಿರ್ಮಾಣ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಮುಂದಿನ ಮಳೆಗಾಲದಲ್ಲಿ ಮತ್ತಷ್ಟು ಸಮಸ್ಯೆಗಳು ಎದುರಾಗಬಹುದು ಎಂಬ ಭಯದ ವಾತಾವರಣ ಮೂಡಿದೆ ಕೊರೊನಾ ವೈರಸ್ಸನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ಹಾಗೂ ಜಿಲ್ಲಾಡಳಿತ ಶ್ರಮವಹಿಸುತ್ತಿದೆ. ಇದರಿಂದಾಗಿ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಿಕೊಡುವ ಯೋಜನೆಗಳನ್ನು ಸಕಾಲಕ್ಕೆ ಕಾರ್ಯಗತಗೊಳಿಸಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ. ಆದರೆ ಕೊರೊನಾ ವೈರಸ್ ರಾಜ್ಯದಲ್ಲಿ ಬಂದ ಬಳಿಕ ಸಾಕಷ್ಟು ಬಡವರ ಬದುಕಿಗೆ ಸಂಕಟವಾಗಿದೆ ಸಂತ್ರಸ್ತರಿಗೆ ಇದು ನುಂಗಲಾರದ ತುತ್ತಾಗಿ ಪರಿಗಣಿಸಿದೆ ಮುಂದೇನು ಎಂಬ ಚಿಂತೆ ಕಾಡ ತೊಡಗಿದೆ. - ವಾಸು