ಮಕೇರಿ, ಮೇ 14: ಪ್ರಸ್ತುತದ ವರ್ಷಗಳಲ್ಲಿ ಬಹುತೇಕ ರೈತರು ಹತ್ತು ಹಲವಾರು ಕಾರಣಗಳಿಂದಾಗಿ ಭತ್ತದ ಕೃಷಿಯ ಬಗ್ಗೆ ನಿರಾಸಕ್ತಿ ತೋರುತ್ತಿರುವದು ಎಲ್ಲರಿಗೂ ಅರಿವಿದೆ. ಕೊಡಗು ಜಿಲ್ಲೆ ಕೃಷಿ ಪ್ರಧಾನವಾಗಿದ್ದರೂ ಇಲ್ಲಿರುವ ಹಲವು ಸಮಸ್ಯೆಗಳು ಇತ್ತೀಚಿನ ವರ್ಷಗಳಲ್ಲಿ ಭತ್ತದ ಕೃಷಿಯ ದಿಕ್ಕನ್ನೇ ಬದಲಿಸಿಬಿಟ್ಟಿದೆ. ವಾತಾವರಣದ ಏರು - ಪೇರು, ಕಾಡಾನೆಗಳು ಸೇರಿದಂತೆ ವನ್ಯಜೀವಿಗಳ ಉಪಟಳ, ಕಾರ್ಮಿಕರ ಕೊರತೆ ಲಾಭದ ಬದಲು ನಷ್ಟವೇ ಅಧಿಕ ಎಂಬಂತಹ ಕಾರಣಗಳಿಂದಾಗಿ ಭತ್ತದ ಬೆಳೆ ಜಿಲ್ಲೆಯಲ್ಲಿ ಕಡಿಮೆಯಾಗುತ್ತಿದೆ. ಒಂದು ಫಸಲನ್ನೇ ಪಡೆಯಲು ಕೃಷಿಕರು ಮುಂದಾಗದೆ ಗದ್ದೆಗಳನ್ನು ಪಾಳು ಬಿಡುವದು, ಲೇಔಟ್‍ಗಳಾಗಿ ಪರಿವರ್ತಿಸುವದು ಅಥವಾ ಭತ್ತದ ಬದಲಾಗಿ ಬೇರೆ ಬೆಳೆಗಳನ್ನು ಬೆಳೆಯಲು ಮುಂದಾಗುತ್ತಿದ್ದಾರೆ. ಉತ್ತರ ಕೊಡಗಿನ ಕೆಲವೆಡೆಗಳಲ್ಲಿ ಒಂದಷ್ಟು ಕೃಷಿ ಕಂಡು ಬರುವದ ರೊಂದಿಗೆ ನೀರಾವರಿ ಸೌಲಭ್ಯ ಇರುವ ಕೆಲವೆಡೆಗಳಲ್ಲಿ ಎರಡನೆಯ ಫಸಲು ಪಡೆಯಲು ಕೆಲವರು ಪ್ರಯತ್ನಿಸು ವದುಂಟು. ದಕ್ಷಿಣ ಕೊಡಗಿನಲ್ಲಿ ಇಂತಹ ಚಟುವಟಿಕೆಗಳು ಕಡಿಮೆ ಎನ್ನಬ ಹುದು. ಆದರೆ ಇಲ್ಲೊಬ್ಬ ಯುವ ಕೃಷಿಕ ಉದ್ಯೋಗದಲ್ಲಿದ್ದು ಕೊಂಡು ಈ ಬಾರಿ ಬೇಸಿಗೆಯಲ್ಲಿ ಎರಡನೆಯ ಭತ್ತದ ಫಸಲು ಪಡೆಯುವತ್ತ ಸಂಕಷ್ಟಗಳ ನಡುವೆ ಎದೆಗುಂದದೆ ಪ್ರಯತ್ನ ನಡೆಸಿದ್ದು, ಇದು ಸಫಲತೆ ಕಾಣುತ್ತಿದೆ.

(ಮೊದಲ ಪುಟದಿಂದ) ಕೋಟೂರು ವಿಎಸ್‍ಎಸ್‍ಎನ್ ಬ್ಯಾಂಕ್ (ಸಹಕಾರ ಸಂಘ)ದಲ್ಲಿ ಉದ್ಯೋಗಿಯಾಗಿರುವ ಕಾಟಿಮಾಡ ಗಿರಿ ಅಯ್ಯಪ್ಪ ಅವರು ಯುಕೋ ಸಂಘಟನೆಯ ‘ನಾಡ ಮಣ್ಣೇ ನಾಡ ಕೂಳ್’ ಎಂಬ ಚಿಂತನೆಯನ್ನು ಮೈಗೂಡಿಸಿಕೊಂಡಿದ್ದಾರೆ.

ಇವರು ಉದ್ಯೋಗ ನಿಭಾಯಿಸುವದರೊಂದಿಗೆ ಪ್ರಸಕ್ತ ಸಾಲಿನಲ್ಲಿ ಲಾಕ್‍ಡೌನ್‍ನಂತಹ ಸಮಸ್ಯೆಯ ನಡುವೆಯೇ ಸುಮಾರು ಏಳು ಎಕರೆ ಪ್ರದೇಶದಲ್ಲಿ ಬೇಸಿಗೆ ಅವಧಿಯಲ್ಲಿ ಎರಡನೆಯ ಫಸಲಿಗೆ ಪ್ರಯತ್ನ ನಡೆಸಿದ್ದು, ಈ ಗದ್ದೆಗಳು ಇದೀಗ ಫಸಲಿಗೆ ಬಂದು ನಿಂತಿವೆ. ಕೋಟೂರುವಿನಲ್ಲಿ ತಮಗೆ ಸೇರಿದ ಗದ್ದೆ ಹಾಗೂ ಸುಳುಗೋಡು ಗ್ರಾಮದಲ್ಲಿ ಸಂಬಂಧಿಕರೊಬ್ಬರ ಗದ್ದೆಯಲ್ಲಿ ಇವರು ಕೃಷಿ ಮಾಡಿದ್ದು ಇದೀಗ ಭತ್ತದ ತೆನೆ ನಳನಳಿಸುತ್ತಿದೆ.

ಜನವರಿ ಆರಂಭದಲ್ಲಿ ‘ಡ್ರಮ್‍ಸೀಡ್’ ಪದ್ಧತಿಯಂತೆ ಇವರು ಮೈಸೂರಿನಿಂದ ಆರ್‍ಜೆ 33 ಎಂಬ ಭತ್ತದ ತಳಿಯನ್ನು ತಂದು ಬಿತ್ತನೆ ಮಾಡಿದ್ದಾರೆ. ಸುಮಾರು 120 ದಿನಗಳ ಅವಧಿ ಬಳಿಕ ಕುಯಿಲಿಗೆ ಬರುತ್ತದೆ. ಕೋಟೂರುವಿನಲ್ಲಿ ಎರಡು ಎಕರೆ ಪ್ರದೇಶಕ್ಕೆ ಬೋರ್‍ವೆಲ್ ಮೂಲಕ ನೀರು ಬಳಸಿ ಕೃಷಿ ಮಾಡಿದ್ದಾರೆ. ಇಲ್ಲಿ ಇವರಿಗೆ ಹೆಚ್ಚು ಸಮಸ್ಯೆಯಾಗಿಲ್ಲವಂತೆ. ಆದರೆ ಹೆಚ್ಚು ಪ್ರದೇಶ ಹೊಂದಿರುವ ಸುಳುಗೋಡುವಿನಲ್ಲಿ ಮಾತ್ರ ತೀವ್ರ ಸಂಕಷ್ಟ ಎದುರಿಸಿದ್ದಾರೆ. ಇಲ್ಲಿನ ಜಾಗಕ್ಕೆ ಟ್ರ್ಯಾಕ್ಟರ್ ಮೂಲಕ ನೀರನ್ನು ಹಾಯಿಸಿ ಬೆಳೆ ಬೆಳೆದಿದ್ದಾರೆ.

ವನ್ಯಜೀವಿಗಳ ಅಡ್ಡಿ

ಸುಳುಗೋಡುವಿನಲ್ಲಿ ಕಾಡಾನೆಗಳು, ಇತರ ವನ್ಯಜೀವಿಗಳು, ಗೀಜುಗದ ಹಕ್ಕಿಗಳ ಕಾಟವನ್ನು ಎದುರಿಸುವಂತಾಗಿದೆ. ಈ ಉಪಟಳವಿಲ್ಲದಿದ್ದರೆ ಕೃಷಿಕರಿಗೆ ಉತ್ಸಾಹ ಬರುತ್ತದೆ. ಸರಕಾರದಿಂದ ಈ ನಿಟ್ಟಿನಲ್ಲಿ ಸಹಕಾರ ದೊರೆತಲ್ಲಿ ಇನ್ನಷ್ಟು ರೈತರು ಮುಂದೆ ಬರಬಹುದು ಎಂದು ಗಿರಿ ಅಯ್ಯಪ್ಪ ಹೇಳುತ್ತಾರೆ. ಇದೀಗ ಇವರ ಪ್ರಯತ್ನ ಸಫಲತೆಯತ್ತ ಬಂದಿದ್ದು, ಮುಂದಿನ ಹತ್ತು ದಿನಗಳಲ್ಲಿ ಕುಯಿಲು ಪ್ರಾರಂಭಿಸಬಹುದಾಗಿದೆ.

ಎಲ್‍ಇಡಿ ಲೈಟ್, ಹಾಡು - ಕ್ಯಾಸೆಟ್ ರೀಲ್..!

ಬೆಳೆದ ಫಸಲನ್ನು ವನ್ಯಪ್ರಾಣಿಗಳಿಂದ ರಕ್ಷಿಸಿಕೊಳ್ಳಲು ಗಿರಿ ಅಯ್ಯಪ್ಪ ಅವರು ವಿಶೇಷ ರೀತಿಯ ಪ್ರಯತ್ನವನ್ನು ನಡೆಸಿದ್ದಾರೆ. ಆನೆಗಳು ದಾಟುವ ಮಾರ್ಗದಲ್ಲಿ ಶೆಡ್ ನಿರ್ಮಿಸಿ ಅಲ್ಲಿ ತಮ್ಮ ಟ್ರ್ಯಾಕ್ಟರ್ ಅನ್ನು ಇಟ್ಟಿದ್ದು, ಪ್ರಯೋಜನಕ್ಕೆ ಬಂದಿದೆ. ಇದರಿಂದಾಗಿ ಅಲ್ಲಿ ಮನುಷ್ಯರಿದ್ದಾರೆ ಎಂಬ ಭಾವನೆಯಿಂದ ಆನೆಗಳು ಮಾರ್ಗ ಬದಲಿಸಿವೆ ಎನ್ನುತ್ತಾರೆ. ಅಯ್ಯಪ್ಪ ಇದರೊಂದಿಗೆ ಗದ್ದೆಯ ಸುತ್ತಲೂ ಯುಪಿಎಸ್‍ನ ಸಹಕಾರದೊಂದಿಗೆ ಎಲ್‍ಇಡಿ ಬಲ್ಬ್‍ಗಳನ್ನು ಅಳವಡಿಸಿ ರಾತ್ರಿ ಬೆಳಕು ಹರಿಸುತ್ತಿರುವದೂ ಉಪಯೋಗವಾಗಿದೆ. ಇದರೊಂದಿಗೆ ಗೀಜುಗದ ಹಕ್ಕಿಗಳ ಕಾಟ ತಡೆಯಲು ಹಳೆಯ ಕ್ಯಾಸೆಟ್‍ನ ರೀಲನ್ನು ಗದ್ದೆಯ ಸುತ್ತಲೂ ಕಟ್ಟಿರುವದರಿಂದ ಹಕ್ಕಿಗಳ ಕಾಟ ಕಡಿಮೆಯಾಗಿದೆಯಂತೆ.

ಇವು ಮಾತ್ರವಲ್ಲ, ಸಂಜೆ 7 ರಿಂದ ಈ ವ್ಯಾಪ್ತಿಯಲ್ಲಿ ಭಜನೆಯ ರೀತಿಯ ಹಾಡನ್ನು (ಧ್ವನಿಸುರುಳಿ) ಬೆಳಗಿನ ತನಕ ಹಾಕುತ್ತಿರುವದೂ ಇವರಿಗೆ ಪ್ರಯೋಜನವಾಗಿದೆ. ಮನುಷ್ಯರಿದ್ದಾರೆಂಬ ಭಾವನೆ ಸೃಷ್ಟಿಯಿಂದಾಗಿ ಕಾಡಾನೆಗಳು ಸೇರಿದಂತೆ ಇತರ ವನ್ಯಜೀವಿಗಳ ಉಪಟಳ ಇದೀಗ ಕಡಿಮೆಯಾಗಿದೆ. ಆರಂಭದಲ್ಲಿ ಸಾಕಷ್ಟು ಸಮಸ್ಯೆ ಎದುರಾಗಿ ಫಸಲು ನಾಶವಾಗುತ್ತಿತ್ತು ಎಂದು ಅವರು ‘ಶಕ್ತಿ’ಯೊಂದಿಗೆ ಅನಿಸಿಕೆ ವ್ಯಕ್ತಪಡಿಸಿದರು.

ಈ ಪ್ರಯತ್ನದೊಂದಿಗೆ ಆನೆಗಳು ಸನಿಹದಲ್ಲಿ ತಿರುಗಾಡುವದು ಅರಿವಾದಾಗ ಪತ್ನಿ, ಮಗುವಿನೊಂದಿಗೆ ಸೇರಿ ಪಟಾಕಿ ಸಿಡಿಸುವದು, ಡ್ರಮ್ ಶಬ್ಧ ಮಾಡುವ ಮೂಲಕ ಬೆಳೆಯನ್ನು ರಕ್ಷಿಸುವ ಪ್ರಯತ್ನ ಮಾಡಲಾಗುತ್ತಿದೆ. ಫಸಲು ಮನೆ ತುಂಬಿಕೊಳ್ಳಲು ಇನ್ನೂ ಕೆಲವು ದಿನ ಈ ಪ್ರಯತ್ನ ಮುಂದುವರಿಸಬೇಕಾಗಿದೆ ಎಂದು ವಿವರಿಸಿದ ಗಿರಿ ಅಯ್ಯಪ್ಪ ಅವರು ಜಿಲ್ಲೆಯಲ್ಲಿ ಭತ್ತದ ಕೃಷಿ ಈ ಹಿಂದಿನಂತೆ ಮುಂದುವರಿದಲ್ಲಿ ಸಾಕಷ್ಟು ಪ್ರಯೋಜನಗಳಿದ್ದು, ಇತರ ಕೃಷಿಕರೂ ಮುಂದೆ ಬಂದಲ್ಲಿ ಸಂತಸದಾಯಕ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.