ಮಂಜೇಶ್ವರ ಕನ್ನಡ ಅಲ್ಪಸಂಖ್ಯಾತ ಪ್ರದೇಶ

ಕಾಸರಗೋಡು, ಮೇ 14: ಕಾಸರಗೋಡು ಜಿಲ್ಲೆ ಮಂಜೇಶ್ವರ ತಾಲೂಕು ವ್ಯಾಪ್ತಿಯ ಪ್ರದೇಶವನ್ನು ಕನ್ನಡ ಭಾಷೆಯ ಅಲ್ಪಸಂಖ್ಯಾತ ಪ್ರದೇಶ ಎಂಬುದಾಗಿ ಕೇರಳ ಸರ್ಕಾರ ಘೋಷಣೆ ಮಾಡಿದೆ. ಈ ಸಂಬಂಧ ಮಂಜೇಶ್ವರ ತಾಲೂಕಿಗೆ ಕನ್ನಡ ಭಾಷೆಯ ಅಲ್ಪಸಂಖ್ಯಾತ ಪ್ರದೇಶ ಸ್ಥಾನಮಾನವನ್ನು ನೀಡಿ ಕೇರಳ ಸರ್ಕಾರ ಆದೇಶ ಹೊರಡಿಸಿದೆ. ಕನ್ನಡ ಭಾಷೆಯ ಅಲ್ಪಸಂಖ್ಯಾತ ಪ್ರದೇಶವಾದ ಕಾಸರಗೋಡನ್ನು ವಿಭಜಿಸುವ ಮೂಲಕ ಮಂಜೇಶ್ವರನನ್ನು ಪ್ರತ್ಯೇಕ ತಾಲೂಕಾಗಿ ಮಾಡಲಾಗಿತ್ತಾದರೂ ಆ ವೇಳೆ ಭಾಷಾ ಅಲ್ಪಸಂಖ್ಯಾತ ಸ್ಥಾನಮಾನವನ್ನು ಮಂಜೇಶ್ವರಕ್ಕೆ ನೀಡಲಾಗಿರಲಿಲ್ಲ. ಇದರಿಂದಾಗಿ ಅಲ್ಲಿನ ಕನ್ನಡಿಗರು ಕೆಲ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿದ್ದರು. ಇದನ್ನು ಗಮನದಲ್ಲಿಟ್ಟುಕೊಂಡು ಪ್ರದೇಶ ಕರ್ನಾಟಕ ಸಮಿತಿಯ ಅಧ್ಯಕ್ಷ ಮತ್ತು ವಕೀಲ ಕೆ.ಎಂ. ಬಳ್ಳಕುರಾಯ 2014 ರಲ್ಲಿಯೇ ಮಂಜೇಶ್ವರ ತಾಲೂಕಿಗೆ ಈ ಸ್ಥಾನಮಾನ ನೀಡುವ ಕುರಿತು ಹೋರಾಟಕ್ಕೆ ಮುಂದಾಗಿದ್ದರು. ಈ ಬೇಡಿಕೆಯನ್ನು ಜಿಲ್ಲಾಧಿಕಾರಿ ಮತ್ತು ರಾಜ್ಯ ಅಲ್ಪಸಂಖ್ಯಾತರ ಸಮಿತಿಯೊಂದಿಗೆ ಸಕ್ರಿಯವಾಗಿ ಚರ್ಚಿಸಲಾಗಿ ಇದರ ಸಂಬಂಧ ಪ್ರತಿಭಟನೆ, ಮುಷ್ಕರಗಳು ಸಹ ನಡೆದಿದ್ದವು.

ನೌಕರರಿಗೆ ವರ್ಕ್ ಫ್ರಂ ಹೋಂ ಸೌಲಭ್ಯ

ನವದೆಹಲಿ, ಮೇ 14: ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು ಈ ಹಿನ್ನೆಲೆ ಮನೆಯಲ್ಲೇ ಕುಳಿತು ಕೆಲಸ ಮಾಡುವಂತಾಗಿದೆ. ಇನ್ನು ಕೊರೊನಾ ನಂತರವೂ ಕೇಂದ್ರ ಸರ್ಕಾರ ತನ್ನ ನೌಕರಿಗಾಗಿ ವರ್ಕ್ ಫ್ರಂ ಹೋಂ ಸೌಲಭ್ಯ ನೀಡುವ ಬಗ್ಗೆ ಕರಡು ರೂಪಿಸಿದೆ. ಮುಂಬರುವ ದಿನಗಳಲ್ಲಿ ಕಚೇರಿಯಲ್ಲಿ ಅಂತರ ಕಾಯ್ದುಕೊಳ್ಳುವುದಕ್ಕಾಗಿ ಈ ವ್ಯವಸ್ಥೆಯನ್ನ ತರಲು ಚಿಂತಿಸಲಾಗಿದ್ದು ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ದೂರುಗಳ ಇಲಾಖೆ ಈ ಬಗ್ಗೆ ಕರಡು ರೂಪಿಸಿದೆ.