ಕೊಡ್ಲಿಪೇಟೆ,ಮೇ 14: ವಾರ್ಷಿಕ ನಿರ್ವಹಣೆಯ ಕೊರತೆಯಿಂದ ತಾಲೂಕಿನ ಹಲವು ಭಾಗಗಳಲ್ಲಿ ಲೋಕೋಪಯೋಗಿ ಇಲಾಖೆಗೆ ಒಳಪಟ್ಟ ರಸ್ತೆಗಳು ದುಸ್ಥಿತಿಗೆ ತಲುಪುತ್ತಿವೆ. ಮಳೆಗಾಲ ಪ್ರಾರಂಭವಾಗುವ ಸಮಯದಲ್ಲಿ ರಸ್ತೆಗಳನ್ನು ನಿರ್ವಹಣೆ ಮಾಡಬೇಕಿದ್ದರೂ ಸಹ ತಾಲೂಕಿನಲ್ಲಿ ಅಂತಹ ಕಾಮಗಾರಿಗಳು ನಡೆಯುತ್ತಿರುವ ನಿದರ್ಶನಗಳು ಕಾಣುತ್ತಿಲ್ಲ. ಅಂತರ್‍ಜಿಲ್ಲೆ-ರಾಜ್ಯಗಳನ್ನು ಸಂಪರ್ಕಿಸುವ ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆ-ಮಡಿಕೇರಿ ರಾಜ್ಯಹೆದ್ದಾರಿ ನಿರ್ವಹಣೆಯ ಕೊರತೆಯಿಂದ ದುಸ್ಥಿತಿಗೆ ತಲುಪುತ್ತಿದೆ. ಈಗಾಗಲೇ ಮಳೆ ಬೀಳುತ್ತಿದ್ದು, ಮಳೆ ನೀರಿನ ಸರಾಗ ಹರಿವಿಗೆ ಸಮಸ್ಯೆ ಯಾಗಿದೆ. ಜಿಲ್ಲೆಯ ಗಡಿ ಕೊಡ್ಲಿಪೇಟೆ ಯಿಂದ ಸೋಮವಾರಪೇಟೆ ಮಾರ್ಗವಾಗಿ (ಮೊದಲ ಪುಟದಿಂದ) ಮಡಿಕೇರಿಗೆ ಸಂಪರ್ಕಿಸುವ ರಾಜ್ಯ ಹೆದ್ದಾರಿಯ ಇಕ್ಕೆಲಗಳಲ್ಲಿ ಗಿಡಗಂಟಿಗಳು ಬೆಳೆದು ನಿಂತಿದ್ದು, ಬಹುತೇಕ ಮೋರಿಗಳು ಮಣ್ಣಿನಿಂದ ಮುಚ್ಚಲ್ಪಟ್ಟಿವೆ.ಪರಿಣಾಮ ಮಳೆಯ ನೀರು ರಸ್ತೆಯ ಮೇಲೆಯೇ ಹರಿಯಲಾರಂಭಿಸಿದ್ದು, ರಸ್ತೆಯ ಮಧ್ಯೆ ಸಣ್ಣಪುಟ್ಟ ಗುಂಡಿಗಳು ನಿರ್ಮಾಣವಾಗುವ ಹಂತದಲ್ಲಿವೆ. ಮಳೆಗಾಲದ ಪ್ರಾರಂಭದಲ್ಲಿಯೇ ರಸ್ತೆಯ ಬದಿಯಲ್ಲಿ ಶೋಲ್ಡರ್‍ಗಳ ನಿರ್ಮಾಣ, ಚರಂಡಿ ನಿರ್ಮಾಣ, ಗಿಡಗಂಟಿಗಳ ತೆರವು ಕಾರ್ಯ ನಡೆದರೆ ಮಾತ್ರ ಮಳೆಗಾಲದಲ್ಲಿ ರಸ್ತೆಗಳು ಬಾಳಿಕೆ ಬರುತ್ತವೆ.ಇಲಾಖೆಯಿಂದ ರಸ್ತೆಗಳ ವಾರ್ಷಿಕ ನಿರ್ವಹಣೆಗೆ ಅನುದಾನ ಮೀಸಲಿಡಲಾಗಿದ್ದು, ಇವುಗಳ ಬಳಕೆ ಸಮರ್ಪಕವಾಗಿ ಆಗುತ್ತಿದೆಯೇ ಎಂಬ ಬಗ್ಗೆ ಸಂಶಯ ಮೂಡಿದೆ. ಕಳೆದ ವರ್ಷ ಮಳೆಗಾಲದ ಪ್ರಾರಂಭದಲ್ಲಿ ಕೆಲವೆಡೆ ಲೋಕೋಪಯೋಗಿ ಇಲಾಖೆಯಿಂದ ರಸ್ತೆ ಬದಿಯಲ್ಲಿ ಚರಂಡಿ ದುರಸ್ತಿ ನಡೆದಿದೆ.
ಕೊಡ್ಲಿಪೇಟೆ, ರಾಮೇನಹಳ್ಳಿ, ಶನಿವಾರಸಂತೆ, ನಂದಿಗುಂದ, ಗೌಡಳ್ಳಿ, ಸೋಮವಾರಪೇಟೆವರೆಗಿನ ರಸ್ತೆಯ ಬದಿಯಲ್ಲಿ ಕಾಡುಬೆಳೆದಿದ್ದು, ವಾಹನಗಳ ಸುಗಮ ಸಂಚಾರಕ್ಕೂ ಅಡಚಣೆಯಾಗಿದೆ. ಪ್ರಸಕ್ತ ವರ್ಷದ ಮಳೆಗಾಲ ಇನ್ನೇನು ಪ್ರಾರಂಭವಾ ಗಲಿದ್ದು, ಅಷ್ಟರೊಳಗೆ ಚರಂಡಿಗಳ ದುರಸ್ತಿ ಕಾರ್ಯ ನಡೆಸಲು ಇಲಾಖೆ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
- ಡಿ.ಆರ್. ಧರ್ಮ