ಮಡಿಕೇರಿ, ಮೇ 14: ಮಡಿಕೇರಿ ನಗರಸಭೆಯಿಂದ ಪ್ರಸಕ್ತ ವರ್ಷ ಶೇ. 18.9 ರಷ್ಟು ಹೆಚ್ಚಿನ ತೆರಿಗೆ ವಸೂಲಾತಿ ಮಾಡದಂತೆ ನಿರ್ಧರಿಸಲಾಗಿ ರುವುದರ ಕುರಿತು ಗುರುವಾರದ ‘ಶಕ್ತಿ’ಯಲ್ಲಿ ವಿವರ ವರದಿ ಪ್ರಕಟಗೊಂಡಿತ್ತು. ಈ ಬಗ್ಗೆ ತಕ್ಷಣ ಸ್ಪಂದಿಸಿರುವ ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಅವರು ಹೆಚ್ಚುವರಿ ತೆರಿಗೆ ವಸೂಲಾತಿ ಮಾಡದಂತೆ ನಗರಸಭೆಗೆ ಇಂದು ಸೂಚನೆಯಿತ್ತಿದ್ದಾರೆ.ನಗರಸಭಾ ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿಯವರಿಗೆ ಈ ಕುರಿತು ತಿಳಿಸಿದ್ದು, ನಗರಸಭೆಯ ಪೌರಾಯುಕ್ತರಿಗೆ ಈ ಸಂಬಂಧಿತ ಸೂಚನೆ ನೀಡಿದ್ದಾಗಿ ‘ಶಕ್ತಿ’ಗೆ ತಿಳಿಸಿದ್ದಾರೆ.ಮಹಾಮಳೆಯಿಂದ ಸಂಕಷ್ಟದಲ್ಲಿದ್ದ ಮಡಿಕೇರಿ ನಾಗರಿಕರು ಇದೀಗ ಮತ್ತೆ ಲಾಕ್‍ಡೌನ್‍ನಿಂದಾಗಿ ತೀವ್ರ ಸಮಸ್ಯೆಯಲ್ಲಿದ್ದಾರೆ. ಹೀಗಿರುವಾಗ ಮತ್ತೆ ಹೆಚ್ಚಿನ ತೆರಿಗೆ ಹೊರೆ ಸರಿಯಲ್ಲ. ಜನರಿಂದ ಹೆಚ್ಚಿನ ತೆರಿಗೆ ಪಡೆಯುವುದನ್ನು ಕೂಡಲೇ ಸ್ಥಗಿತಗೊಳಿಸುವಂತೆ ಶಾಸಕ ರಂಜನ್ ಸೂಚನೆಯಿತ್ತಿದ್ದಾರೆ. ಅಲ್ಲದೆ ಈ ಸಂಬಂಧ ಪೌರಾಡಳಿತ ಸಚಿವರೊಂದಿಗೆ ತಾನು ಚರ್ಚಿಸಲಿರುವುದಾಗಿ ಶಾಸಕರು ಮಾಹಿತಿಯಿತ್ತಿದ್ದಾರೆ.‘ಶಕ್ತಿ’ಯಲ್ಲಿ ಇಂದು ವರದಿ ಪ್ರಕಟಗೊಂಡ ಹಿನ್ನೆಲೆಯಲ್ಲಿ ಹಲವರು ಈ ಕೆಳಗಿನಂತೆ ಪ್ರತಿಕ್ರಿಯಿಸಿದ್ದಾರೆ.
ಸಚಿವರೊಂದಿಗೆ ಚರ್ಚಿಸುವೆ ಸರಕಾರದ ಆದೇಶದಂತೆ ಮೂರು ವರ್ಷಕ್ಕೊಮ್ಮೆ ತೆರಿಗೆ ಜಾಸ್ತಿ ಮಾಡಬೇಕಿದ್ದರೂ ಈಗಿನ ಪರಿಸ್ಥಿತಿಯಲ್ಲಿ ಅದನ್ನು ತಡೆ ಹಿಡಿಯುವ ಬಗ್ಗೆ ನಗರಸಭಾ ಆಡಳಿತಾಧಿಕಾರಿ ಹಾಗೂ ಜಿಲ್ಲೆಗೆ ಆಗಮಿಸಲಿರುವ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ತಾವು ಚರ್ಚಿಸುವುದಾಗಿ ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ತಿಳಿಸಿದ್ದಾರೆ.
ಸರಕಾರ ಜನರ ರಕ್ಷಣೆ ಮಾಡಬೇಕು
ಸರಕಾರ ಪ್ರತಿಯೊಂದರ ಮೇಲೆ ತೆರಿಗೆ ಹೆಚ್ಚಳ ಮಾಡುತ್ತಿದೆ. ಗ್ರಾಹಕರ ಮೇಲೆ ಹೊರೆ ಹಾಕಲಾಗುತ್ತಿದೆ. ಪ್ಯಾಕೇಜ್‍ಗಳನ್ನು ಘೋಷಣೆ ಮಾಡುವುದರಿಂದ ಯಾರಿಗೆ ಪ್ರಯೋಜನ? ಜನರಿಗೆ ಪ್ರಯೋಜನವಾಗುವಂತೆ ಇರಬೇಕು. ಅವರುಗಳ ಖಜಾನೆ ತುಂಬಿಸಿಕೊಳ್ಳುವುದಕ್ಕಲ್ಲ ಎಂದು ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಪ್ರತಿಕ್ರಿಯಿಸಿದ್ದಾರೆ.
ಪ್ರಸ್ತುತ ಜನರು ತೊಂದರೆಯಲ್ಲಿದ್ದಾರೆ. ದೈನಂದಿನ ಕೆಲಸ-ಕಾರ್ಯಗಳೇ ಕಷ್ಟಕರವಾಗಿದೆ. ಇಂತಹ ಸಂದರ್ಭ ದಲ್ಲಿ ತೆರಿಗೆ ಹೆಚ್ಚಳ ಮಾಡಿರುವುದು ಯಾವ ಪುರುಷಾರ್ಥಕ್ಕೆ ಎಂದು ಪ್ರಶ್ನಿಸಿರುವ ಅವರು, ಸರಕಾರ ಜನರ ರಕ್ಷಣೆ ಮಾಡಬೇಕೇ ಹೊರತು ಹೊರೆ ಹೇರುವುದಲ್ಲ; ಇದರಿಂದ ಎಲ್ಲರಿಗೂ ತೊಂದರೆಯಾಗಲಿದೆ ಎಂದು ಹೇಳಿದ್ದಾರೆ.
(ಮೊದಲ ಪುಟದಿಂದ)
ಸಭೆ ನಡೆಸಿ ತೀರ್ಮಾನಿಸಲಿ
ಮೂರು ವರ್ಷದ ಹಿಂದೆಯಷ್ಟೇ ತೆರಿಗೆ ಹೆಚ್ಚಳ ಪ್ರಸ್ತಾಪ ಬಂದಿತ್ತು. ಆದರೆ ಪ್ರಕೃತಿ ವಿಕೋಪದಿಂದ ನಷ್ಟ ಉಂಟಾದ ಹಿನ್ನೆಲೆಯಲ್ಲಿ ಮಾಡಿರಲಿಲ್ಲ. ಇದೀಗ ಸ್ವಲ್ಪಮಟ್ಟಿಗೆ ಹೆಚ್ಚಳ ಮಾಡಬಹುದಿತ್ತು. ಶೇ. 18.9 ರಷ್ಟು ಹೆಚ್ಚಳ ಮಾಡಿರುವುದು ಸರಿಯಲ್ಲ. ಜನ ಕಷ್ಟದಲ್ಲಿದ್ದಾರೆ. ಈ ವರ್ಷ ಹೆಚ್ಚಿಗೆ ಮಾಡುವುದು ಬೇಡವಾಗಿತ್ತು ಎಂದು ನಗರಸಭೆ ಮಾಜಿ ಅಧ್ಯಕ್ಷೆ ಕೂಡಕಂಡಿ ಕಾವೇರಮ್ಮ ಸೋಮಣ್ಣ ಹೇಳಿದ್ದಾರೆ. ಕೆಲಸ, ವ್ಯಾಪಾರ-ವಹಿವಾಟು ಇಲ್ಲದೆ ಜನ ತೊಂದರೆಯಲ್ಲಿದ್ದಾರೆ. ಈ ನಿಟ್ಟಿನಲ್ಲಿ ಶಾಸಕರು, ಜನಪ್ರತಿನಿಧಿಗಳು, ಅಧಿಕಾರಿಗಳು ಸಭೆ ನಡೆಸಿ ತೀರ್ಮಾನ ಮಾಡುವುದೊಳಿತೆಂದು ಸಲಹೆ ಮಾಡಿದ್ದಾರೆ.
ಜನಪರ ತೀರ್ಮಾನವಾಗಲಿ
ಮೂರು ವರ್ಷಕ್ಕೊಮ್ಮೆ ತೆರಿಗೆ ಹೆಚ್ಚಳ ಮಾಡುವಂತೆ ಸರಕಾರದ ನಿರ್ದೇಶನವಿದ್ದು, ಅಗತ್ಯವೆನೆಸಿದರೆ ಮಾಡಬಹುದು. ಕಡ್ಡಾಯವೇನಿಲ್ಲ; ಪ್ರಸ್ತುತ ನಗರಸಭೆ ಆಡಳಿತ ಮಂಡಳಿ ಇಲ್ಲದ್ದರಿಂದ ಜಿಲ್ಲಾಧಿಕಾರಿಗಳು ಶೇ. 15 ರಷ್ಟು ತೆರಿಗೆ ಹೆಚ್ಚಳ ಮಾಡಿದ್ದಾರೆ. ಆದರೆ ಇಂದಿನ ಪರಿಸ್ಥಿತಿಗೆ ಇದು ಬೇಕಾಗಿರಲಿಲ್ಲ ಎಂದು ನಗರಸಭೆ ಮಾಜಿ ಅಧ್ಯಕ್ಷ ಹೆಚ್.ಎಂ. ನಂದಕುಮಾರ್ ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ಆಡಳಿತ ಮಂಡಳಿ ರಚನೆಯಾದ ಬಳಿಕ ತೀರ್ಮಾನ ಕೈಗೊಂಡು ಹೆಚ್ಚಳ ಮಾಡಬಹುದಿತ್ತು. ಅಧಿಕಾರಿಗಳಿಗೆ ಜನರ ಕಷ್ಟ ಗೊತ್ತಿರುವುದಿಲ್ಲ. ಇದನ್ನು ತಡೆಹಿಡಿದು ಮುಂದಿನ ಆಡಳಿತ ಮಂಡಳಿಯಲ್ಲಿ ತೀರ್ಮಾನ ಕೈಗೊಳ್ಳಲು ಅವಕಾಶವಿದೆ. ಅದರಿಂದ ಜನಪರ ತೀರ್ಮಾನವಾಗಲಿ. ಪ್ರಸ್ತುತ ಏರಿಕೆ ಮಾಡಿರುವುದನ್ನು ತಾತ್ಕಾಲಿಕವಾಗಿ ತಡೆಹಿಡಿಯುವಂತೆ ಮನವಿ ಮಾಡಿದ್ದಾರೆ.
ಮೂರು ವರ್ಷಕ್ಕೊಮ್ಮೆ ಆಗಲಿದೆ
ಪ್ರಸ್ತುತ ಶೇ. 15 ರಷ್ಟು ತೆರಿಗೆ ಹೆಚ್ಚಳ ಮಾಡಲಾಗಿದೆ. ಮೂರು ವರ್ಷಕ್ಕೊಮ್ಮೆ ಶೇ. 15 ರಿಂದ 30 ರಷ್ಟು ಹೆಚ್ಚಳ ಮಾಡುವಂತೆ ಸರಕಾರದ ನಿರ್ದೇಶನವಿದೆ. ಹೆಚ್ಚಳ ಮಾಡದಿದ್ದರೆ ಸರಕಾರದಿಂದ ಅನುದಾನ ಬರುವುದು ಕಡಿಮೆಯಾಗಲಿದೆ. ಹಾಗಾಗಿ ಸ್ವಯಂ ಚಾಲನೆಯಾಗಿ ಹೆಚ್ಚಳವಾಗಲಿದೆ ಎಂದು ನಗರಸಭೆ ಮಾಜಿ ಅಧ್ಯಕ್ಷ ಪಿ.ಡಿ. ಪೊನ್ನಪ್ಪ ಹೇಳಿದ್ದಾರೆ. ತಾವು ಅಧ್ಯಕ್ಷರಾಗಿದ್ದಾಗಲೇ ಹೆಚ್ಚಿಗೆ ಮಾಡುವಂತೆ ನಿರ್ದೇಶನ ಬಂದಿತ್ತು. ಆ ಸಂದರ್ಭದಲ್ಲಿ ಜನರಿಗೆ ತೊಂದರೆ ಆಗದಂತೆ ಶೇ. 15 ರಷ್ಟು ಹೆಚ್ಚಳ ಮಾಡಲಾಗಿದ್ದು, ಅದುವೇ ಮುಂದುವರಿದಿದೆ. ಅದಕ್ಕಿಂತ ಹೆಚ್ಚಿಗೆ ಮಾಡಿಲ್ಲ.
ಆಸ್ತಿ ದರ ಹಾಗೂ ಸ್ಥಳಗಳಿಗನುಗುಣವಾಗಿ ತೆರಿಗೆಯಲ್ಲಿ ವ್ಯಾತ್ಯಾಸಗಳಿರುತ್ತವೆ. ತೆರಿಗೆ ಹೆಚ್ಚಿಗೆ ಮಾಡದಿದ್ದಲ್ಲಿ ಆಸ್ತಿಗೆ ಬೆಲೆಯೇ ಇಲ್ಲದಂತಾಗುತ್ತದೆ ಎಂದು ಹೇಳಿರುವ ಅವರು, ಇಂತಹ ಸಂದರ್ಭದಲ್ಲಿ ಹೆಚ್ಚಿಗೆ ಮಾಡಿರುವುದು ಜನರಿಗೆ ಸ್ವಲ್ಪ ಕಷ್ಟಕರವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸದ್ಯಕ್ಕೆ ಹಿಂದಿನಂತೆಯೆ ಇರಲಿ
ಪ್ರಸ್ತುತ ಕೊರೊನಾ ಹಿನ್ನೆಲೆಯಲ್ಲಿ ಜನ ತೊಂದರೆಯಲ್ಲಿದ್ದಾರೆ. ಆದ್ದರಿಂದ ಆಸ್ತಿ ತೆರಿಗೆ ಈ ಹಿಂದೆ ಇದ್ದಂತೆಯೆ ಸದ್ಯಕ್ಕೆ ಮುಂದುವರೆಯಲಿ. ನಗರಸಭೆಗೆ ನೂತನ ಆಡಳಿತ ಮಂಡಳಿ ಬಂದ ಬಳಿಕ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ ನಂತರ ಆಸ್ತಿ ತೆರಿಗೆ ಹೆಚ್ಚಿಸುವ ಬಗ್ಗೆ ನಿರ್ಧರಿಸುವುದು ಒಳಿತು ಎಂದು ನಗರಸಭಾ ಮಾಜಿ ಉಪಾಧ್ಯಕ್ಷ ಟಿ.ಎಸ್. ಪ್ರಕಾಶ್ ಅಭಿಪ್ರಾಯಿಸಿದ್ದಾರೆ.
ಸರಿಪಡಿಸಲು ಅವಕಾಶವಿದೆ
ಇದು ಹಳೆಯ ಸುತ್ತೋಲೆಯಡಿ ಹೆಚ್ಚಿಗೆ ಮಾಡಲಾಗಿದೆ. ಹೊಸತಲ್ಲ. ತೆರಿಗೆ ಸಂಬಂಧಿತ ದಾಖಲೆಗಳು ಸಾಫ್ಟ್‍ವೇರ್‍ನಲ್ಲಿ ಅಡಕವಾಗಿದ್ದು, ಬೆಂಗಳೂರಿನಿಂದಲೇ ಸ್ವಯಂ ಚಾಲನೆ ಮೂಲಕ ಜಾರಿಯಾಗುತ್ತವೆ ಎಂದು ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಕೆ.ಎಸ್. ರಮೇಶ್ ಹೇಳಿದ್ದಾರೆ.
ಇಂತಹ ಸಮಯದಲ್ಲಿ ಹೆಚ್ಚಿಗೆ ಮಾಡುವುದು ಬೇಡವಾಗಿತ್ತು. ಆಯುಕ್ತರು ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಸರಿಪಡಿಸಬಹುದಿತ್ತು. ಇನ್ನು ಕೂಡ ಅವಕಾಶವಿದ್ದು, ಸರಿಪಡಿಸಲು ತೆರಿಗೆ ಯಥಾಸ್ಥಿತಿಯಾಗಿ ಮುಂದೂಡಲು ಅವಕಾಶವಿದೆ ಎಂದು ಅವರು ಹೇಳಿದ್ದಾರೆ.
ಪೌರಾಯುಕ್ತರ ಸ್ಪಷ್ಟನೆ
ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳು ಆಸ್ತಿ ತೆರಿಗೆಯನ್ನು ಕರ್ನಾಟಕ ಪೌರಸಭೆಗಳ ಅಧಿನಿಯಮ 1964 ಕಲಂ 102 ಎ ಮತ್ತು ಕರ್ನಾಟಕ ಮಹಾ ನಗರಪಾಲಿಕೆ ಅಧಿನಿಯಮ 1964 ಕಲಂ 109 ಎ ರೀತ್ಯಾ ಸ್ವತ್ತು ತೆರಿಗೆಯನ್ನು 2005-06ನೇ ಹಣಕಾಸು ವರ್ಷದಿಂದ ಪ್ರಾರಂಭಿಸಿ ಪ್ರತಿ ಮೂರು ವರ್ಷಕ್ಕೊಮ್ಮೆ ತೆರಿಗೆಯು ಶೇಕಡ 15-30 ರಷ್ಟು ಹೆಚ್ಚಿಸಲು ಸೂಚಿಸಿ, ಮಾನ್ಯ ನಿರ್ದೇಶಕರು, ಪೌರಾಡಳಿತ ನಿರ್ದೇಶನಾಲಯವು ದಿನಾಂಕ 02.09.2005 ರಲ್ಲಿ ಸುತ್ತೋಲೆ ಹೊರಡಿಸಿದೆ.
ಈ ಸುತ್ತೋಲೆಯಂತೆ 2005-06ನೇ ಆರ್ಥಿಕ ವರ್ಷದಿಂದ ಪ್ರತಿ ಮೂರು ವರ್ಷಕ್ಕೊಮ್ಮೆ ಆಸ್ತಿ ತೆರಿಗೆಯನ್ನು ಹೆಚ್ಚಿಸುವ ಕ್ರಮ ಇಡಲಾಗಿರುತ್ತದೆ. ಅದೇ ಪ್ರಕಾರ ಮಾನ್ಯ ನಿರ್ದೇಶಕರು, ಪೌರಾಡಳಿತ ನಿರ್ದೇಶನಾಲಯ, ಬೆಂಗಳೂರು ರವರ 27.11.2019ರ ಪತ್ರದ ಸೂಚನೆಯಂತೆ, ಆಸ್ತಿ ತೆರಿಗೆ ಪರಿಷ್ಕರಣೆ ಮಾಡಬೇಕಾದ ಹಿನ್ನೆಲೆಯಲ್ಲಿ ಮಡಿಕೇರಿ ನಗರಸಭೆ ವ್ಯಾಪ್ತಿಗೆ ಬರುವ ಆಸ್ತಿಗಳ ತೆರಿಗೆ ಪಾವತಿಯಲ್ಲಿ ಕನಿಷ್ಟ 15% ತೆರಿಗೆ ಹೆಚ್ಚಳ ಆಗಿದ್ದು, ಸಾಫ್ಟ್‍ವೇರ್‍ನಲ್ಲಿ ಈ ಕ್ರಮ ಅಪ್‍ಲೋಡ್ ಆಗಿರುತ್ತದೆ.
ಪ್ರತಿ ಮೂರು ವರ್ಷಕ್ಕೊಮ್ಮೆ ತೆರಿಗೆ ಹೆಚ್ಚಳಕ್ಕೆ ಕಾರಣ. ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿ ತೆರಿಗೆ ಲೆಕ್ಕಾಚಾರ ಮಾಡಲು ತೆಗೆದುಕೊಳ್ಳುವ ಸಬ್‍ರಿಜಿಸ್ಟರ್ಡ್ ಗೈಡೆನ್ಸ್ ವ್ಯಾಲಿವ್ಯೂ ಪ್ರತಿ ಮೂರು ವರ್ಷಕ್ಕೊಮ್ಮೆ ಪರಿಷ್ಕರಣೆ ಆಗುತ್ತದೆ. ಹೀಗೆ ಪರಿಷ್ಕøತವಾಗುವ ಹೊಸ ಗೈಡೆನ್ಸ್ ವ್ಯಾಲಿವ್ಯೂ ತೆಗೆದುಕೊಂಡಲ್ಲಿ ತೆರಿಗೆ ಪಾವತಿದಾರರಿಗೆ ಹೊರೆ ಆಗುವುದರಿಂದ ಸರ್ಕಾರ 2005-06ನೇ ಸಾಲಿನ ವ್ಯಾಲಿವ್ಯೂಗೆ ಸ್ಟಿಕಾನ್ ಆಗಲು ಸೂಚಿಸಿದೆ ಮತ್ತು ತೆರಿಗೆ ಪಾವತಿಯಲ್ಲಿ ಕಟ್ಟಡಕ್ಕೆ ಸವಕಳಿ ಸಹ ನೀಡಿದೆ. ಪ್ರತಿ ವರ್ಷ ಸವಕಳಿ ನಿಯಮದಂತೆ ಗಣನೀಯವಾಗಿ ತೆರಿಗೆ ಕಡಿಮೆ ಆಗಿ ಸ್ಥಳೀಯ ಸಂಸ್ಥೆ ಆದಾಯಕ್ಕೆ ದಕ್ಕೆ ಆಗುವುದನ್ನು ಸರಿದೂಗಿಸಲು 2005-06 ಆರ್ಥಿಕ ವರ್ಷದಿಂದ ಪ್ರತಿ ಮೂರು ವರ್ಷಕ್ಕೊಮ್ಮೆ ಆಸ್ತಿ ತೆರಿಗೆ ಹೆಚ್ಚಿಸುವುದು ಕಡ್ಡಾಯಗೊಳಿಸಲಾಗಿದೆ. ಅದರಂತೆ, 2020-21ನೇ ಸಾಲಿಗೆ ಕೂಡ ಆಸ್ತಿ ತೆರಿಗೆ ಹೆಚ್ಚಿಸುವ ಪ್ರಕ್ರಿಯೆ ನವೆಂಬರ್ 2019 ರಲ್ಲಿ ಪ್ರೊಸೆಸ್ ಆಗಿ ಆರ್ಥಿಕ ವರ್ಷದ ಪ್ರಾರಂಭದಿಂದಲೇ ಪ್ರಾಪರ್ಟಿ ಟ್ಯಾಕ್ಸ್ ಕ್ಯಾಲುಕುಲೇಟರ್ (Pಡಿoಠಿeಡಿಣಥಿ ಣಚಿx ಅಚಿಟಛಿuಟಚಿಣoಡಿ)ನಲ್ಲಿ ಅಪ್‍ಲೋಡ್ ಆಗಿರುತ್ತದೆ. ಇದು ಪಾಲಿಸಿ ಮ್ಯಾಟರ್ ಆಗಿದ್ದು, ಸಕ್ರಿಯವಾಗಿ ಪ್ರತಿ ಮೂರು ವರ್ಷಕ್ಕೊಮ್ಮೆ ಆಗುವ ಕ್ರಮ ಆಗಿರುತ್ತದೆ. ಈ ವರ್ಷ ಮೇ ಮಾಹೆಯಲ್ಲಿ ತೆರಿಗೆ ಪಾವತಿದಾರರಿಗೆ ಶೇಕಡ 5 ರಿಯಾಯಿತಿ ನೀಡಿರುವ ಅವಕಾಶ ಸದುಪಯೋಗ ಮಾಡಿಕೊಂಡು ಆಸ್ತಿ ತೆರಿಗೆ ಪಾವತಿಸಿ ನಗರದ ಅಭಿವೃದ್ಧಿಗೆ ಸಹಕರಿಸುವಂತೆ ಪೌರಾಯುಕ್ತ ಎಂ.ಎಲ್.ರಮೇಶ್ ಕೋರಿದ್ದಾರೆ.