ಮಡಿಕೇರಿ, ಮೇ 14: ನಿವೃತ್ತ ಸರಕಾರಿ ಅಧಿಕಾರಿಯೊಬ್ಬರು ನಗರದ ಕೋಟೆಯಲ್ಲಿರುವ ಅರಮನೆ ನವೀಕರಣಕ್ಕೆ ಕೋರಿ; ರಾಜ್ಯ ಉಚ್ಚನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ ಮೇರೆಗೆ; ನ್ಯಾಯಾಲಯವು ರಾಜ್ಯ ಸರಕಾರಕ್ಕೆ ನಿರ್ದೇಶನದೊಂದಿಗೆ ಕೈಗೊಂಡಿದ್ದ ಕಾಮಗಾರಿಗೆ ಪ್ರಸ್ತುತ ಕೊರೊನಾ ಸೋಂಕು ತೊಡಕಾಗಿ ಪರಿಣಮಿಸಿದೆ. ಹೀಗಾಗಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ ಆರಂಭಗೊಂಡಿದ್ದ ನವೀಕರಣ ಕೆಲಸ ಇದೀಗ ನಿಂತು ಹೋಗಿದೆ.ಕೊಡಗು ಜಿಲ್ಲಾಡಳಿತ ಹಾಗೂ ಭಾರತೀಯ ಪುರಾತತ್ವ ಅಧಿಕಾರಿಗಳ ಉಸ್ತುವಾರಿಯಲ್ಲಿ; ಸರಕಾರದಿಂದ ತುರ್ತು ಕೆಲಸಕ್ಕೆ ಬಿಡುಗಡೆಯಾಗಿದ್ದ ರೂ. 52 ಲಕ್ಷ ಮೊತ್ತದಲ್ಲಿ ಮೊದಲ ಹಂತದ ದುರಸ್ತಿ ಕಾರ್ಯಕ್ಕೆ ಚಾಲನೆ ಲಭಿಸಿತ್ತು. ಈ ಸಂಬಂಧ ಪುರಾತತ್ವ ಇಲಾಖೆಯ ಇಂಜಿನಿಯರ್ ನೇತೃತ್ವದಲ್ಲಿ 12 ಮಂದಿ ಸಿಬ್ಬಂದಿ, ಕಳಚಿ ಬೀಳುತ್ತಿರುವ ಅರಮನೆಯ ಮೇಲ್ಚಾವಣಿ ಹೆಂಚುಗಳನ್ನು ಈಗಾಗಲೇ ತೆರವುಗೊಳಿಸಿದ್ದಾಗಿದೆ.ಮಾತ್ರವಲ್ಲದೆ ಹೊಸತಾಗಿ ಮರದ ಬಾರಿಪಟ್ಟಿ, ತಗಡು ಸೀಟುಗಳನ್ನು ತಂದಿರಿಸಿ; ಮಳೆಗಾಲದಲ್ಲಿ ಅರಮನೆಯ ಸೋರುವಿಕೆ ತಡೆಯಲು ತುರ್ತು ಕೆಲಸ ಆರಂಭಿಸಲಾಗಿತ್ತು. ಈ ನಡುವೆ ಕೊರೊನಾ ತಡೆಗಾಗಿ ವಿಧಿಸಲಾಗಿರುವ ನಿರ್ಬಂಧದ ಕಾರಣ; ಕಾರ್ಮಿಕರು ತಮ್ಮ ತಮ್ಮ ಊರಿಗೆ ಹಿಂತೆರಳಿದ್ದಾಗಿದೆ. ಪರಿಣಾಮ ತಂದಿರಿಸಿರುವ ಕಟ್ಟಡ ಕಾಮಗಾರಿ ಸಾಮಗ್ರಿ ಕೂಡ ಕೋಟೆಯೊಳಗೆ ದಾಸ್ತಾನಿರಿಸಲಾಗಿದೆ.ಹೀಗಾಗಿ ಕೊರೊನಾ ಹರಡುವಿಕೆ ತಡೆ ನಿರ್ಬಂಧದ ಕಾರಣ; ಅರಮನೆಯ ನವೀಕರಣ ಕೆಲಸ ಮುಂದುವರಿಸಲಾಗದೆ; ಇದೀಗ 24 ಗಂಟೆಯೂ ಕಾವಲು ಸಿಬ್ಬಂದಿ ನೇಮಿಸಲಾಗಿದೆ. ಗರ್ವಾಲೆ ಮೂಲದ ಸಿ. ರಾಮಪ್ಪ ನೇತೃತ್ವದಲ್ಲಿ ಮೂವರು ಶಸ್ತ್ರಸಜ್ಜಿತರಾಗಿ ಮತ್ತು ಇತರ ಮೂವರು ಗಾರ್ಡ್‍ಗಳ ಸಹಿತ ಪ್ರತಿ 8 ಗಂಟೆಗಳಿಗೆ ಇಬ್ಬರಂತೆ ಈ ಆರು ಮಂದಿ ಪಾಳಿಯಲ್ಲಿ ಕೆಲಸ ನಿರತರಾಗಿದ್ದಾರೆ. ಅಲ್ಲದೆ, ಕೊರೊನಾ ಭಯದ ನಡುವೆ ಕೊಡಗಿನಲ್ಲಿ ಮುಂದಿನ ದಿನಗಳಲ್ಲಿ ಎದುರಾಗಲಿ ರುವ ಮಳೆಗಾಲವೂ ಈ ಅರಮನೆ ಕೆಲಸಕ್ಕೆ ಅಡ್ಡಿಯಾಗುವ ಆತಂಕವೂ ಸಂಬಂಧಪಟ್ಟವರನ್ನು ಕಾಡುವಂತಾಗಿದೆ. -ಶ್ರೀಸುತ