ಗೋಣಿಕೊಪ್ಪಲು, ಮೇ 14: ದೈನಂದಿನಂತೆ ಕೂಲಿ ಕೆಲಸಕ್ಕೆ ತೆರಳಿದ ಸಂದರ್ಭ ಕಾಫಿ ತೋಟದಲ್ಲಿ ಹುಲಿಯೊಂದು ಪ್ರತ್ಯಕ್ಷವಾದ ಹಿನ್ನೆಲೆಯಲ್ಲಿ ಗಾಬರಿಗೊಂಡ ಕೂಲಿ ಕಾರ್ಮಿಕರು ದಿಕ್ಕಾಪಾಲಾಗಿ ತೋಟದ ಮಾಲೀಕನ ಮನೆ ಸೇರಿದ ಘಟನೆ ದ.ಕೊಡಗಿನ ಪೊನ್ನಪ್ಪಸಂತೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನಲ್ಲೂರು ಗ್ರಾಮದಲ್ಲಿ ವರದಿಯಾಗಿದೆ.ನಲ್ಲೂರು ಗ್ರಾಮದ ಕಾಫಿ ಬೆಳೆಗಾರರಾದ ಪುಚ್ಚಿಮಾಡ ಲಾಲಾ ಪೂಣಚ್ಚ ತೋಟದಲ್ಲಿ ಕಾರ್ಮಿಕರಾಗಿ ರುವ ಕೆಲವು ಮಂದಿ ಗುರುವಾರ ಮುಂಜಾನೆ ಎಂದಿನಂತೆ ಕೂಲಿ ಕೆಲಸಕ್ಕೆ ತೆರಳಿದ್ದಾರೆ. ಮಾಲೀಕರಿಗೆ ಮಾಹಿತಿ ನೀಡಿದ ನಂತರ ಕಾರ್ಮಿಕರು ತೋಟದತ್ತ ಹೆಜ್ಜೆ ಹಾಕಿದ್ದಾರೆ. ಈ ಸಂದರ್ಭ ಕಾರ್ಮಿಕರನ್ನು ಕಂಡ ಹುಲಿಯು ಘರ್ಜಿಸಿ ತೋಟದಲ್ಲಿ ಮಾಯವಾ ಗಿದೆ. ಈ ದೃಶ್ಯವನ್ನು ಅತ್ಯಂತ ಸಮೀಪದಿಂದ ಕಂಡ ಕಾರ್ಮಿಕರು ಕೆಲಸವನ್ನು ನಿಲ್ಲಿಸಿ ವಾಪಾಸ್ಸು ಮಾಲೀಕರ ಮನೆಗೆ ದೌಡಾಯಿಸಿ ಘಟನೆಯ ಬಗ್ಗೆ ವಿವರಿಸಿದ್ದಾರೆ. ಮಾಲೀಕರಾದ ಪುಚ್ಚಿಮಾಡ ಲಾಲಾ ಪೂಣಚ್ಚ ಕಾರ್ಮಿಕರಿಗೆ ಧೈರ್ಯ ತುಂಬಿ ಇಂದು ಕೆಲಸ ನಿರ್ವಹಿಸದಂತೆ ಸೂಚನೆ ನೀಡಿದರು. ಕೂಡಲೇ ತಿತಿಮತಿ ವಲಯದ ಎಸಿಎಫ್ ಶ್ರೀಪತಿಯವರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಮಾಹಿತಿ ಒದಗಿಸಿದರು. ಪೊನ್ನಂಪೇಟೆ ವಲಯ ಅರಣ್ಯಾಧಿಕಾರಿ ತೀರ್ಥರವರೊಂದಿಗೆ ಎಸಿಎಫ್ ಶ್ರೀಪತಿ ಹಾಗೂ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಈ ಸಂದರ್ಭ ಹುಲಿಯು ಕಾಡು ಹಂದಿಯನ್ನು ತೋಟದಲ್ಲಿ ಬೇಟೆಯಾಡಿ ತಿಂದಿದ್ದು, ಉಳಿದ ಅರ್ಧ ಭಾಗವು ಗೋಚರಿಸಿತು. ಅರಣ್ಯ ಇಲಾಖೆಯ 14 ಸಿಬ್ಬಂದಿಗಳು ತೋಟವನ್ನು ಸುತ್ತುವರೆದು ಹುಲಿಯ ಹೆಜ್ಜೆ ಪರಿಶೀಲನೆ ನಡೆಸಿದರು.
(ಮೊದಲ ಪುಟದಿಂದ) ಮೇಯಲು ಬಿಟ್ಟಿದ್ದ ಮಾಲೀಕರ ಹಸು ಹಾಗೂ ಎಮ್ಮೆಗಳನ್ನು ಹುಲಿಯ ಭಯದಿಂದ ವಾಪಾಸ್ಸು ಕರೆ ತಂದು ಕೊಟ್ಟಿಗೆಯಲ್ಲಿ ಕಟ್ಟಲಾಯಿತು. ಈ ಭಾಗದಲ್ಲಿ ಹುಲಿಯು ಮತ್ತೆ ಪ್ರತ್ಯಕ್ಷವಾಗುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಹುಲಿ ಸೆರೆಗೆ ಬೋನನ್ನು ಅಳವಡಿಸಿದ್ದಾರೆ. ಈ ವ್ಯಾಪ್ತಿಯಲ್ಲಿ ಅರಣ್ಯ ಸಿಬ್ಬಂದಿಗಳು ಮೊಖಾಂ ಹೂಡಿದ್ದು ಹುಲಿಯ ಸಂಚಾರದ ಬಗ್ಗೆ ಹೆಚ್ಚಿನ ನಿಗಾ ವಹಿಸಿದ್ದಾರೆ.