ಸೂಕ್ತ ವರದಿಗೆ ನಿರ್ದೇಶನ ಮಡಿಕೇರಿ, ಮೇ 14: ಕೊಡಗು ಜಿಲ್ಲೆಯಲ್ಲಿ ನೂತನವಾಗಿ ಘೋಷಣೆಯಾಗಿರುವ ಪೊನ್ನಂಪೇಟೆ ತಾಲೂಕಿನ ಕುರಿತಾಗಿ ಅಂತಿಮ ಅಧಿಸೂಚನೆ ಹೊರಡಿಸುವ ನಿಟ್ಟಿನಲ್ಲಿ ಸ್ಪಷ್ಟ ಅಭಿಪ್ರಾಯದೊಂದಿಗೆ ಸರಕಾರಕ್ಕೆ ವರದಿ ಸಲ್ಲಿಸುವಂತೆ ಕಂದಾಯ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿಗಳು ಕೊಡಗು ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದಾರೆ.
ಈ ಕುರಿತಾಗಿ ಕಂದಾಯ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ (ಭೂಮಾಪನ) ವಿ.ಟಿ. ರಾಜ್ಯಶ್ರೀ ಅವರು ತಾ. 12 ರಂದು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ನೂತನವಾಗಿ ಘೋಷಣೆಯಾಗಿರುವ ಪೊನ್ನಂಪೇಟೆ ತಾಲೂಕಿಗೆ ಗ್ರಾಮಗಳನ್ನು ಸೇರ್ಪಡೆ ಮಾಡಿ ಗಡಿಗಳನ್ನು ಗುರುತಿಸಿ ಉಲ್ಲೇಖಿತ ಅಧಿಸೂಚನೆಯಲ್ಲಿ ಪ್ರಾಥಮಿಕ ಅಧಿಸೂಚನೆಯನ್ನು ಈಗಾಗಲೇ ಹೊರಡಿಸಿದ್ದು, 19.3.2020ರ ರಾಜ್ಯ ಪತ್ರದಲ್ಲಿ ಪ್ರಕಟಿಸಲಾಗಿದೆ. ರಾಜ್ಯ ಪತ್ರದಲ್ಲಿ ಪ್ರಕಟಗೊಂಡ ಒಂದು ತಿಂಗಳ ಒಳಗಾಗಿ ಸ್ವೀಕೃತವಾಗುವ ಆಕ್ಷೇಪಣೆ, ಸಲಹೆಗಳನ್ನು ಪರಿಶೀಲಿಸಿ ಅಂತಿಮ ಅಧಿಸೂಚನೆ ಹೊರಡಿಸಲು (ಮೊದಲ ಪುಟದಿಂದ) ಕ್ರಮಕೈಗೊಳ್ಳಬೇಕಾಗಿದೆ. ಈ ಹಿನ್ನೆಲೆಯಲ್ಲಿ ಪ್ರಾಥಮಿಕ ಅಧಿಸೂಚನೆ ರಾಜ್ಯಪತ್ರದಲ್ಲಿ ಪ್ರಕಟಗೊಂಡ ದಿನಾಂಕದಿಂದ ಒಂದು ತಿಂಗಳ ಅವಧಿಯಲ್ಲಿ ಸ್ವೀಕೃತವಾಗಿರುವ ಆಕ್ಷೇಪಣೆ - ಸಲಹೆಗಳನ್ನು ಪರಿಶೀಲಿಸಿ ತಮ್ಮ ಸ್ಪಷ್ಟ ಅಭಿಪ್ರಾಯದೊಂದಿಗೆ ಸರಕಾರಕ್ಕೆ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗಿದೆ.