ಕುಶಾಲನಗರ, ಮೇ 14: ಕುಶಾಲನಗರದಲ್ಲಿ ನಡೆಯುತ್ತಿರುವ ಕಾವೇರಿ ನದಿ ನಿರ್ವಹಣೆ ಕಾಮಗಾರಿ ಸಂಬಂಧ ಸಾಧಕ-ಬಾಧಕಗಳ ಕುರಿತು ಪ್ರಮುಖರ ಸಭೆಯಲ್ಲಿ ಚರ್ಚೆ ನಡೆಯಿತು.
ಕಾವೇರಿ ನೀರಾವರಿ ನಿಗಮದ ಮೂಲಕ ರೂ. 88 ಲಕ್ಷ ವೆಚ್ಚದಲ್ಲಿ ಕುಶಾಲನಗರ ಪಟ್ಟಣ ವ್ಯಾಪ್ತಿಯ 4 ಕಡೆಗಳಲ್ಲಿ ಕಾವೇರಿ ನದಿಯಲ್ಲಿ ಬೆಳೆದಿರುವ ಗಿಡಗಂಟಿಗಳ ತೆರವು ಕಾಮಗಾರಿಗೆ ಜಿಲ್ಲಾಧಿಕಾರಿಗಳು ಆಡಳಿತಾತ್ಮಕ ಅನುಮೋದನೆ ನೀಡಿ ಕಾವೇರಿ ನಿಗಮ ಮೂಲಕ ಕಾಮಗಾರಿಗೆ ಆದೇಶ ನೀಡಿದ್ದರು. ಕುಶಾಲನಗರ ವ್ಯಾಪ್ತಿಯ ಬಡಾವಣೆಗಳ ಕಾವೇರಿ ನದಿ ಪ್ರವಾಹ ಸಂತ್ರಸ್ತರ ವೇದಿಕೆಯ ಒತ್ತಡದ ಹಿನ್ನೆಲೆ ಶಾಸಕರು ಇತ್ತೀಚೆಗೆ ಚಾಲನೆ ನೀಡಿದ್ದರು. ಈ ಕಾಮಗಾರಿ ಅವೈಜ್ಞಾನಿಕವಾಗಿದ್ದು ನದಿ ಪರಿಸರಕ್ಕೆ ಧಕ್ಕೆ ಉಂಟಾಗಲಿದೆ. ಕಾಮಗಾರಿ ವೇಳೆ ನದಿಯಿಂದ ಹೊರ ತೆಗೆಯುವ ಮರಳು ಮತ್ತು ಕಾಮಗಾರಿಗೆ ಬಿಡುಗಡೆಗೊಂಡ ಅನುದಾನ ದುರುಪಯೋಗವಾಗಿದೆ ಎಂಬ ಅಪಸ್ವರಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರತೊಡಗಿತು.
ಈ ಹಿನ್ನೆಲೆ ಸ್ಥಳೀಯ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಸಭೆಯಲ್ಲಿ ಕಾಮಗಾರಿಯ ಸಾಧಕ ಬಾಧಕಗಳ ಕುರಿತು ಚರ್ಚೆ ನಡೆಯಿತು. ಜಿ.ಪಂ. ಸದಸ್ಯೆ ಕೆ.ಪಿ. ಚಂದ್ರಕಲಾ, ಮಾಜಿ ಸದಸ್ಯ ವಿ.ಪಿ. ಶಶಿಧರ್, ಕುಶಾಲನಗರ ವಕೀಲರ ಸಂಘದ ಅಧ್ಯಕ್ಷ ಆರ್.ಕೆ. ನಾಗೇಂದ್ರಬಾಬು, ಕುಶಾಲನಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಟಿ.ಆರ್. ಶರವಣಕುಮಾರ್, ಎಂ.ಡಿ. ರಂಗಸ್ವಾಮಿ ಮತ್ತಿತರ ಪ್ರಮುಖರು ಮತ್ತು ಕಾವೇರಿ(ಮೊದಲ ಪುಟದಿಂದ) ನದಿ ಸಂತ್ರಸ್ತರ ವೇದಿಕೆಯ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್, ಕಾರ್ಯಾಧ್ಯಕ್ಷ ಎಂ.ಎಂ. ಚರಣ್, ಉಪಾಧ್ಯಕ್ಷ ತೋರೇರ ಉದಯಕುಮಾರ್, ಪ್ರಧಾನ ಕಾರ್ಯದರ್ಶಿ ವರದ, ಖಜಾಂಚಿ ಕೊಡಗನ ಹರ್ಷ ಮತ್ತು ಕುಶಾಲನಗರ ಪಟ್ಟಣದ ಬಡಾವಣೆಗಳ ಪ್ರತಿನಿಧಿಗಳು ಮಾಹಿತಿ ವಿನಿಮಯ ನಡೆಸಿದರು.
ಯಾವುದೇ ತೊಡಕಿಲ್ಲದೆ ಕೆಲಸ ಮುಂದುವರೆಯುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸುವಂತೆ ಸಭೆಯಲ್ಲಿ ಒಮ್ಮತದ ನಿರ್ಧಾರ ಮೂಡಿಬಂತು. ಕಾವೇರಿ ನದಿ ನಿರ್ವಹಣೆ ಬಗ್ಗೆ ಗೊಂದಲ ಮೂಡಿಸುವ ಹೇಳಿಕೆಗಳ ಬೆನ್ನಲ್ಲೇ ಕುಶಾಲನಗರ ಕೊಪ್ಪ ಸೇತುವೆ ಬಳಿ ನಡೆಯುತ್ತಿದ್ದ ಕಾಮಗಾರಿ ಸ್ಥಗಿತಗೊಂಡಿರುವುದು ಕಂಡುಬಂದಿದೆ. ಇದರಿಂದ ಕುಶಾಲನಗರ ಪ್ರವಾಹ ಸಂತ್ರಸ್ತರ ವೇದಿಕೆಯ ಸದಸ್ಯರು ಅಸಮಾಧಾನ ವ್ಯಕ್ತಪಡಿಸುತ್ತಿದ್ದುದು ಗೋಚರಿಸಿತು.
ದೂರು-ಪ್ರತಿದೂರು: ಕಾಮಗಾ ರಿಗೆ ಸಂಬಂಧಿಸಿದಂತೆ ಬಸವಣ್ಣ ಬನ ಸಮಿತಿಯ ಪದಾಧಿಕಾರಿಗಳಾದ ಸಿ.ಪಿ. ಮುತ್ತಣ್ಣ, ಬಿ.ಸಿ. ನಂಜಪ್ಪ ನದಿ ಕಾಮಗಾರಿ ನಡೆಸುತ್ತಿರುವುದು ಕಾನೂನು ಬಾಹಿರವಾಗಿದೆ ಎಂದು ಕುಶಾಲನಗರ ಪೊಲೀಸ್ ಠಾಣೆಗೆ ಶಾಸಕ ಅಪ್ಪಚ್ಚು ರಂಜನ್, ವೇದಿಕೆಯ ಅಧ್ಯಕ್ಷ ಚಂದ್ರಮೋಹನ್, ಕಾರ್ಯಾಧ್ಯಕ್ಷ ಚರಣ್, ಗುತ್ತಿಗೆದಾರ ಮತ್ತು ಇಂಜಿನಿಯರ್ ಮೇಲೆ ದೂರು ನೀಡಿದ್ದಾರೆ. ಇದೇ ಸಂದರ್ಭ ವೇದಿಕೆ ಪ್ರಮುಖರು ಮತ್ತು ಬಡಾವಣೆಗಳ ಪ್ರತಿನಿಧಿಗಳು ಸಿ.ಪಿ. ಮುತ್ತಣ್ಣ ಮತ್ತು ಬಿ.ಸಿ. ನಂಜಪ್ಪ ಅವರುಗಳ ಮೇಲೆ ಕುಶಾಲನಗರ ಠಾಣೆಗೆ ಪ್ರತಿದೂರು ಸಲ್ಲಿಸಿದ್ದು ಕಾಮಗಾರಿಗೆ ಅಡ್ಡಿಪಡಿಸುವುದರೊಂದಿಗೆ ಮುಂದಿನ ದಿನಗಳಲ್ಲಿ ಉಂಟಾಗುವ ನಷ್ಟಕಷ್ಟಗಳಿಗೆ ಇವರೇ ಹೊಣೆಗಾರರಾಗುತ್ತಾರೆ ಎಂದು ದೂರುವುದರೊಂದಿಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.