ನವದೆಹಲಿ,ಮೇ 14: ರೈತರಿಗೆ ನಬಾರ್ಡ್ ಮೂಲಕ 30,000 ಕೋಟಿ ರೂ. ಹೆಚ್ಚುವರಿ ತುರ್ತು ಬಂಡವಾಳ ನಿಧಿಯನ್ನು ಕೇಂದ್ರ ಹಣಕಾಸು ಸಚಿವರು ಗುರುವಾರ ಘೋಷಿಸಿದ್ದಾರೆ. ಬುಧವಾರ ಪ್ರಕಟಿಸಿದ್ದ ಕೇಂದ್ರÀ ಸರಕಾರದ ವಿಶೇಷ ಪ್ಯಾಕೇಜ್‍ನ ಮುಂದುವರಿದ ಭಾಗವಾಗಿ ದ್ವಿತೀಯ ಹಂತದ ಯೋಜನೆಯನ್ನು ಅವರು ಇಂದು ಪ್ರಕಟಿಸಿದರು. ಹಾಗೆಯೇ ಕಿಸಾನ್ ಕ್ರೆಡಿಟ್ ಕಾರ್ಡ್‍ಗಳ ಮೂಲಕ 2.5 ಕೋಟಿ ರೈತರಿಗೆ 2 ಲಕ್ಷ ಕೋಟಿ ರೂ.ಗಳ ರಿಯಾಯಿತಿ ಸಾಲವನ್ನು ನೀಡಲಾಗುವುದು. ಸಕಾಲದಲ್ಲಿ ಸಾಲ ಮರುಪಾವತಿಸಿರುವ ರೈತರಿಗೆ ಮೇ 31ರವರೆಗೆ ಬಡ್ಡಿ ರಿಯಾಯಿತಿ ನೀಡಲಾಗುವುದು ಎಂದರು. ಕಡಿಮೆ ಬಡ್ಡಿ ದರದಲ್ಲಿ ಸಾಲ ಮಂಜೂರು ಮಾಡುವ ವ್ಯವಸ್ಥೆ ರೂಪಿಸಲಾಗುವುದು.

ಸಣ್ಣ ರೈತರಿಗೆ 4 ಲಕ್ಷ ರೂಪಾಯಿ ವರೆಗೆ ಸಾಲ ಸೌಲಭ್ಯ ಕಲ್ಪಿಸಲು ನಿರ್ಧರಿಸಲಾಗಿದೆ. ಹೊಸದಾಗಿ 25 ಲಕ್ಷ ಕಿಸಾನ್ ಕ್ರೆಡಿಟ್ ಕಾರ್ಡುಗಳನ್ನು ಮಂಜೂರು ಮಾಡಲಾಗುವುದು ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು.

ಪಿಎಂ ಕಿಸಾನ್ ಕ್ರೆಡಿಟ್ ಕಾರ್ಡ್‍ಗಳಿಗೆ ಮೀನುಗಾರರು ಮತ್ತು ಪಶು ಸಂಗೋಪನೆ ನಡೆಸುವವರನ್ನು ಸೇರಿಸಲಾಗುವುದು ಎಂದು ತಿಳಿಸಿದರು. ಕೊರೊನಾ ವೈರಸ್ ಮತ್ತು ಲಾಕ್ ಡೌನ್ ಹಿನ್ನೆಲೆಯಲ್ಲಿ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ರೈತರು, ವಲಸೆ ಕಾರ್ಮಿಕರು ಮತ್ತು ಸಣ್ಣ ವ್ಯಾಪಾರಿಗಳಿಗಾಗಿ ಅವರು ಗುರುವಾರ ಈ ಪರಿಹಾರ ಪ್ಯಾಕೇಜ್ ಪ್ರಕಟಿಸಿದ್ದಾರೆ.

ವಲಸೆ ಕಾರ್ಮಿಕರಿಗೆ ಅನುದಾನ

ವಲಸೆ ಕಾರ್ಮಿಕರು ಸುರಕ್ಷಿತವಾಗಿ ಮನೆ ತಲುಪಲು ಕೇಂದ್ರ ಸರ್ಕಾರ ಈಗಾಗಲೇ ಕ್ರಮ ಕೈಗೊಂಡಿದ್ದು, ಈಗಾಗಲೇ ಅವರಿಗೆ ಎರಡು ತಿಂಗಳ ಉಚಿತ ರೇಷನ್ ನೀಡುವ ಘೋಷಣೆ ಮಾಡಲಾಗಿದೆ. ಮುಂದಿನ 2 ತಿಂಗಳು ಉಚಿತ ದಿನಸಿ ಪೂರೈಕೆ ಮಾಡಲಾಗುವದು ಎಂದರು. 2021ರ ಮಾರ್ಚ್ ವೇಳೆಗೆ ದೇಶದ ಎಲ್ಲ ನ್ಯಾಯಬೆಲೆ ಅಂಗಡಿಗಳು ಡಿಜಿಟಲೀಕರಣಗೊಳ್ಳಲಿದ್ದು, ಮುಂದಿನ ಮೂರು ತಿಂಗಳೊಳಗಾಗಿ ಒಂದು ದೇಶ, ಒಂದು ರೇಷನ್ ಕಾರ್ಡ್ ವ್ಯವಸ್ಥೆ ಜಾರಿಗೆ ತರಲಾಗುವುದು. ಇದರಡಿ ಯಾವುದೇ ರಾಜ್ಯಗಳಲ್ಲಿ ವಲಸೆ ಕಾರ್ಮಿಕರು ಆಹಾರ ಧಾನ್ಯ ಪಡೆಯಬಹುದಾಗಿದೆ. 23 ರಾಜ್ಯಗಳಲ್ಲಿ 67 ಕೋಟಿ ಫಲಾನುಭವಿಗಳು ಇದರ ಅನುಕೂಲ ಪಡೆಯಲಿದ್ದಾರೆ ಎಂದು ಸಚಿವೆ ಸೀತಾರಾಮನ್ ತಿಳಿಸಿದರು.

5 ಕೆಜಿ ಅಕ್ಕಿ ಅಥವಾ ಗೋದಿ, 1 ಕೆಜಿ ಬೇಳೆ ಕಾಳುಗಳು ಸೇರಿದಂತೆ ಉಚಿತ ರೇಷನ್ ನೀಡಲಾಗುತ್ತಿದ್ದು, ಇದರಿಂದ 8 ಕೋಟಿ ವಲಸೆ ಕಾರ್ಮಿಕರಿಗೆ ಅನುಕೂಲವಾಗಿದೆ ಎಂದರು. ವಲಸೆ ಕಾರ್ಮಿಕರಿಗಾಗಿ 11 ಸಾವಿರ ಕೋಟಿ ರೂಪಾಯಿ ಹಂಚಿಕೆ ಮಾಡಲಾಗುವುದು. ಬೀದಿ ಬದಿಯ ವ್ಯಾಪಾರಿಗಳಿಗಾಗಿ ಪ್ರತ್ಯೇಕ ಪ್ಯಾಕೇಜ್ ಪ್ರಕಟಿಸಲಾಗುವುದು. ಗ್ರಾಮೀಣ ಪ್ರದೇಶಗಳಲ್ಲಿ ಮೂಲಭೂತ ಸೌಲಭ್ಯಕ್ಕಾಗಿ ರೂ. 4,200 ಕೋಟಿ ಹಂಚಿಕೆ ಮಾಡಲಾಗುವುದು. ವಲಸೆ ಕಾರ್ಮಿಕರಿಗೆ ಎಲ್ಲ ರೀತಿಯಲ್ಲೂ ನೆರವಾಗಲು ಪ್ರಯತ್ನ ನಡೆಸಲಾಗು ವುದು. ಪಟ್ಟಣ ಪ್ರದೇಶಗಳಲ್ಲಿ ಬಡ ಕಾರ್ಮಿಕರಿಗಾಗಿ 3 ಕೋಟಿ ಮುಖಗವುಸು ಪೂರೈಸಲಾಗುವುದು. ವಲಸೆ ಕಾರ್ಮಿಕರಿಗೆ ಮೂರು ಹೊತ್ತು ಆಹಾರ ಒದಗಿಸಲು ಎಲ್ಲ ರೀತಿಯ ಪ್ರಯತ್ನಗಳನ್ನು ನಡೆಸಲಾಗುವುದು. ಈ ಸಂಬಂಧ ನೆರವು ಶಿಬಿರ ಆಯೋಜಿಸ ಲಾಗುವುದು. ವಲಸೆ ಕಾರ್ಮಿಕರು ಈಗ ಇರುವಲ್ಲಿಯೇ ಹೊಸದಾಗಿ ಹೆಸರು ನೋಂದಣಿ ಮಾಡಿಕೊಂಡು ಉಪಯೋಗ ಪಡೆಯಬಹುದು. ಅವರಿಗೆ ಉದ್ಯೋಗ ಕಲ್ಪಿಸಲು ಕೂಡ ಕ್ರಮ ಕೈಗೊಳ್ಳಲಾಗುವುದು ಎಂದರು.

ನಗರ ಪ್ರದೇಶಗಳ ಕಾರ್ಮಿಕರಿಗೆ ವ್ಯವಸ್ಥೆ ಮಾಡಿರುವ ವಸತಿ ಶಿಬಿರಗಳಲ್ಲಿ ಮೂರು ಹೊತ್ತು ಭೋಜನ ಒದಗಿಸಲಿದ್ದೇವೆ. ದೇಶಾದ್ಯಂತ ಒಂದೇ ಮಾದರಿ ಕೂಲಿ ದರ ಇರುವಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಎಲ್ಲ ವಲಸೆ ಕಾರ್ಮಿಕರಿಗೂ ವೈದ್ಯಕೀಯ ಪರೀಕ್ಷೆ ನಡೆಸಲಾಗುವುದು, ಅವರೆಲ್ಲರಿಗೂ ವಿಮಾ ಸೌಲಭ್ಯ ಕಲ್ಪಿಸಲಾಗುವುದು. ಬುಡಕಟ್ಟು ಪ್ರದೇಶಗಳಲ್ಲಿ ಉದ್ಯೋಗ ಸೃಷ್ಟಿಸಲು ವಿಶೇಷ ಕಾರ್ಯಕ್ರಮ ರೂಪಿಸ ಲಾಗುವುದು ಎಂದು ಪ್ರಕಟಿಸಿದ್ದಾರೆ

ದಿನಗೂಲಿ ಏರಿಕೆ

ಕೊರೊನಾ ವೈರಸ್ ಸಮಸ್ಯೆಯಿಂದಾಗಿ ಕಾರ್ಮಿಕರು ಈಗ ರಾಜ್ಯಗಳಿಂದ ರಾಜ್ಯಗಳಿಗೆ ವಲಸೆ ಹೋಗುತ್ತಿರುವುದು ಕಂಡುಬಂದಿದೆ. ಈ ನಿಟ್ಟಿನಲ್ಲಿ ವಲಸೆ ಕಾರ್ಮಿಕರಿಗೆ ಕೂಡ ನರೇಗಾ ಯೋಜನೆಯಡಿ ಕೆಲಸ ನೀಡಲಾಗುವುದು. ಪ್ರಮುಖ ವಾಗಿ ನರೇಗಾ ಯೋಜನೆಯಡಿ ದಿನಗೂಲಿ ಹೆಚ್ಚಳ ಮಾಡಲಾಗಿದೆ. ಪ್ರಸಕ್ತವಾಗಿ ನರೇಗಾ ಯೋಜನೆಯಡಿ ಕಾರ್ಮಿಕರಿಗೆ ದಿನಗೂಲಿಯನ್ನು ರೂ. 182 ರೂ.ಗಳಿಂದ. 202ಕ್ಕೆ ಹೆಚ್ಚಿಸಲಾಗಿದೆ. ಇದರಿಂದ 2.33 ಕೋಟಿ ಕಾರ್ಮಿಕರಿಗೆ ನೆರವಾಗಲಿದೆ ಎಂದು ಸಚಿವರು ವಿವರಿಸಿದರು.