ಸೋಮ ವಾರಪೇಟೆ, ಮೇ 14: ತಾಲೂಕಿನ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಬಾರಗಡಿಗೆ ಗ್ರಾಮದಲ್ಲಿ ಕೊರೊನಾ ಲಾಕ್‍ಡೌನ್ ನಡುವೆ ಮಗನ ಸ್ಥಿತಿಯನ್ನು ನೆನೆದು ತಂದೆಯೊಬ್ಬರು ದಿನನಿತ್ಯ ಕಣ್ಣೀರಾಕುತ್ತಿದ್ದಾರೆ.

ಮನೆಯ ಬಳಿ ಓಡಾಡಿಕೊಂಡಿದ್ದ 14 ವರ್ಷ ಪ್ರಾಯದ ಮಗ ಆಯತಪ್ಪಿ ಕೆಳಬಿದ್ದು, ಕಾಲಿನ ಮಂಡಿ ಭಾಗಕ್ಕೆ ಪೆಟ್ಟಾಗಿದ್ದು, ಸೂಕ್ತ ಚಿಕಿತ್ಸೆ ಲಭಿಸದೇ ಮನೆಯೊಳಗೆ ಮಲಗಿದ್ದಾನೆ. ಈತನ ಸ್ಥಿತಿಗೆ ಮರುಗುತ್ತಿರುವ ತಂದೆ ದಿನನಿತ್ಯ ಕಣ್ಣೀರಾಕುತ್ತಿದ್ದು, ಸಹಾಯಕ್ಕಾಗಿ ಎದುರು ನೋಡುತ್ತಿದ್ದಾರೆ.

ಕುಂಬಾರಗಡಿಗೆ ಗ್ರಾಮದ ಪೆಮ್ಮಯ್ಯ ಎಂಬವರ ಪುತ್ರ, ಪೊನ್ನಂಪೇಟೆ ಸಾಯಿಶಂಕರ ಶಾಲೆಯಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ದಿಲನ್ ಮನೆಯ ಬಳಿ ಓಡಾಡುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ಕೆಳಬಿದ್ದಿದ್ದಾನೆ. ಪರಿಣಾಮ ಆತನ ಎಡಕಾಲಿನ ಮಂಡಿ ಭಾಗದಲ್ಲಿ ಮೂಳೆ ಮುರಿದಿದ್ದು, ಮಡಿಕೇರಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಬ್ಯಾಂಡೇಜ್ ಮಾಡಿಸಲಾಗಿದೆ.

ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಅಥವಾ ಸುಳ್ಯಕ್ಕೆ ಕರೆದೊಯ್ಯುವಂತೆ ವೈದ್ಯರು ಸೂಚಿಸಿದ್ದಾರೆ. ಆದರೆ ಕೈಯಲ್ಲಿ ಬಿಡಿಗಾಸೂ ಇಲ್ಲದ ಪೆಮ್ಮಯ್ಯ ಅವರು ಮಗನನ್ನು ಕುಂಬಾರಗಡಿಗೆಗೆ ಕರೆತಂದು ಮಲಗಿಸಿದ್ದಾರೆ.

ಬೆಂಗಳೂರಿನ ಹೊಟೇಲ್‍ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಪೆಮ್ಮಯ್ಯ ಅವರು ಲಾಕ್‍ಡೌನ್ ಸಂದರ್ಭ ಕುಂಬಾರಗಡಿಗೆಗೆ ಬಂದಿದ್ದಾರೆ. ಇತ್ತ ಕೆಲಸವೂ ಇಲ್ಲದ್ದರಿಂದ ದೈನಂದಿನ ಬದುಕು ಸಾಗಿಸುವದೇ ದುಸ್ತರವಾಗಿದೆ. ಈ ನಡುವೆ ಮಗನ ಚಿಕಿತ್ಸೆಗೆ 40 ರಿಂದ 50 ಸಾವಿರ ಬೇಕಾಗಬಹುದು ಎಂದು ವೈದ್ಯರು ಹೇಳುತ್ತಿದ್ದಾರೆ.

ಮಡಿಕೇರಿಯಲ್ಲಿ ದಿಲನ್‍ನ ಕಾಲನ್ನು ಸ್ಕ್ಯಾನ್ ಮಾಡಲಾಗಿದ್ದು, ಆಪರೇಷನ್‍ನ ಅವಶ್ಯಕತೆ ಇದೆ. ಮಡಿಕೇರಿಯ ಸರ್ಕಾರಿ ಆಸ್ಪತ್ರೆಯಲ್ಲಿ ಆಪರೇಷನ್ ಮಾಡಲು ಸೂಕ್ತ ಸೌಲಭ್ಯಗಳಿಲ್ಲ. ಹಾಗಾಗಿ ಮೈಸೂರು ಅಥವಾ ಸುಳ್ಯದಲ್ಲಿ ಖಾಸಗಿ ಆಸ್ಪತ್ರೆಗೆ ಮಗನನ್ನು ಕರೆದುಕೊಂಡು ಹೋಗಿ ಎಂದು ಚಿಕಿತ್ಸೆ ನೀಡಿದ ಸರ್ಕಾರಿ ವೈದ್ಯರು ಸಲಹೆ ನೀಡಿದ್ದಾರೆ.

ಮೈಸೂರು ಅಥವಾ ಸುಳ್ಯಕ್ಕೆ ಹೋಗಿ ಚಿಕಿತ್ಸೆ ಕೊಡಿಸಬೇಕಾದರೆ ಕನಿಷ್ಟ 40 ರಿಂದ 50 ಸಾವಿರ ಖರ್ಚು ಆಗಲಿದೆ. ಕಳೆದ ಒಂದೂವರೆ ತಿಂಗಳಿನಿಂದ ಬಿಡಿಗಾಸೂ ಇಲ್ಲದೇ ಸಂಕಷ್ಟದಲ್ಲೇ ಜೀವನ ಸಾಗಿಸುತ್ತಿರುವ ಪೆಮ್ಮಯ್ಯ ಅವರಿಗೆ ಇದು ಅಸಾಧ್ಯವಾಗಿದೆ.

ತಾಲೂಕಿನ ಕುಗ್ರಾಮಗಳ ಪಟ್ಟಿಯಲ್ಲಿರುವ ಕುಂಬಾರಗಡಿಗೆಯಲ್ಲಿ ಈಗಂತೂ ವಾಹನದ ವ್ಯವಸ್ಥೆಯೂ ಇಲ್ಲ. ಗ್ರಾಮದಿಂದ ಹೊರಹೋಗ ಬೇಕಾದರೆ ಬಾಡಿಗೆ ವಾಹನ ಬೇಕೇ ಬೇಕು. ಒಂದು ಬಾರಿ ಮಡಿಕೇರಿಗೆ ಹೋಗಿ ಬರಲು ಕನಿಷ್ಟ 4 ರಿಂದ 5 ಸಾವಿರ ಬೇಕು. ಈ ಹಣವನ್ನು ಹೊಂದಿಸಲೂ ಪೆಮ್ಮಯ್ಯ ಅವರಿಂದ ಸಾಧ್ಯವಾಗುತ್ತಿಲ್ಲ. ಇನ್ನು ಹೊರಭಾಗದ ಆಸ್ಪತ್ರೆಗೆ ಮಗನನ್ನು ಕರೆದೊಯ್ಯುವದು ಹೇಗೆ? ಎಂಬ ಪ್ರಶ್ನೆ ಅವರನ್ನು ಕಾಡುತ್ತಿದೆ.ಯಾರಾದರೂ ಸಹಾಯ ಮಾಡಿದರೆ ಮಗನಿಗೆ ಸೂಕ್ತ ಚಿಕಿತ್ಸೆ ಕೊಡಿಸಿ ಆತನನ್ನು ಮೊದಲಿನಂತೆ ಮಾಡುತ್ತೇನೆ ಎಂದು ಸಹಾಯ ನೀಡುವ ಕೈಗಳಿಗಾಗಿ ಕಾಯುತ್ತಿದ್ದಾರೆ.

-ವಿಜಯ್