* ಕೊಡ್ಲಿಪೇಟೆ, ಮೇ 14: ಜಿಲ್ಲೆಯ ಗಡಿ ಹೋಬಳಿಯಾದ ಕೊಡ್ಲಿಪೇಟೆ ಸಮೀಪದ ಕ್ಯಾತೆ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ. ಕಳೆದ ಒಂದು ವಾರದಿಂದ ಈ ಭಾಗದಲ್ಲಿ ಚಿರತೆ ಓಡಾಡುತ್ತಿದ್ದು, ಸಾರ್ವಜನಿಕರು ನಡೆದಾಡಲೂ ಸಹ ಭಯಗೊಳ್ಳುತ್ತಿದ್ದಾರೆ. ಇದರೊಂದಿಗೆ ಗದ್ದೆ, ತೋಟಗಳಲ್ಲಿ ಕೆಲಸ ನಿರ್ವಹಿಸಲೂ ಸಹ ಆತಂಕವಾಗುತ್ತಿದೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.
ನಿನ್ನೆ ದಿನ ಕ್ಯಾತೆ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದವರೆಗೆ ಚಿರತೆ ಬಂದಿದ್ದು, ದೇವಸ್ಥಾನದ ಸುತ್ತಮುತ್ತ ಹೆಜ್ಜೆ ಗುರುತುಗಳು ಕಂಡುಬಂದಿವೆ. ನೆರೆಯ ಹಾಸನ ಜಿಲ್ಲೆಯ ಯಸಳೂರು ಹೋಬಳಿ ವ್ಯಾಪ್ತಿಯ ಕಲ್ಲೂರು ಅರಣ್ಯದಿಂದ ಚಿರತೆ ಆಗಮಿಸಿರುವ ಸಂಶಯವಿದ್ದು, ಜನಜೀವನಕ್ಕೆ ಆತಂಕ ತಂದೊಡ್ಡಿರುವ ಚಿರತೆಯನ್ನು ಸೆರೆಹಿಡಿಯಬೇಕೆಂದು ದೇವಾಲಯ ಸಮಿತಿ ಅಧ್ಯಕ್ಷ ಕ್ಯಾತೆ ಶಿವಕುಮಾರ್ ಆಗ್ರಹಿಸಿದ್ದಾರೆ.
ಇದೀಗ ಮಳೆ ಬೀಳುತ್ತಿದ್ದು, ಕೃಷಿ ಚಟುವಟಿಕೆ ಪ್ರಾರಂಭವಾಗುತ್ತಿದೆ. ಈ ಸಮಯದಲ್ಲಿ ಚಿರತೆಯ ಓಡಾಟ ಸಾರ್ವಜನಿಕರ ನೆಮ್ಮದಿ ಕೆಡಿಸಿದೆ. ತಕ್ಷಣ ಈ ಭಾಗದಲ್ಲಿ ಬೋನು ಅಳವಡಿಸಿ ಚಿರತೆಯ ಸೆರೆಗೆ ಕ್ರಮ ವಹಿಸಬೇಕೆಂದು ಸ್ಥಳೀಯರು ಅರಣ್ಯ ಇಲಾಖೆಗೆ ಆಗ್ರಹಿಸಿದ್ದಾರೆ.
ಸ್ಥಳಕ್ಕೆ ಅರಣ್ಯ ಇಲಾಖೆಯ ಫಾರೆಸ್ಟರ್ ಸಂತೋಷ್, ಗಾರ್ಡ್ ಶಿವರಾಜ್ ಅವರುಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿರತೆಯನ್ನು ಸೆರೆಹಿಡಿಯಲು ಕ್ರಮ ವಹಿಸಲಾಗುವದು ಎಂದು ರೇಂಜರ್ ಕೊಟ್ರೇಶಿ ಅವರು ಭರವಸೆ ನೀಡಿದ್ದು, ತಕ್ಷಣ ಕಾರ್ಯರೂಪಕ್ಕೆ ಇಳಿಯಬೇಕೆಂದು ಶಿವಕುಮಾರ್ ಒತ್ತಾಯಿಸಿದ್ದಾರೆ.