ನವದೆಹಲಿ, ಮೇ 12: ಕೊರೊನಾ ತಡೆಗೆ ದೇಶಾದ್ಯಂತ 3.0 ಲಾಕ್ ಡೌನ್ ಚಾಲ್ತಿಯಲ್ಲಿರುವಾಗಲೇ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿದ್ದು ಆತ್ಮ ನಿರ್ಭರ ಭಾರತ ಅಭಿಯಾನವನ್ನು ಘೋಷಣೆ ಮಾಡಿದ್ದಾರೆ. ಭಾರತ ಆತ್ಮ ನಿರ್ಭರ ದೇಶ ಆಗಬೇಕು. ಸ್ವಾವಲಂಬಿ ಭಾರತ ಎಂಬುದನ್ನು ನಾವು ತೋರಿಸಬೇಕು ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ ಬಡ- ಮಧ್ಯಮ ವರ್ಗಕ್ಕೆ ಸಹಕಾರಿಯಾಗುವ ನಿಟ್ಟಿನಲ್ಲಿ ರೂ. 20 ಲಕ್ಷ ಕೋಟಿ ರೂಪಾಯಿ ಆರ್ಥಿಕ ಪ್ಯಾಕೇಜ್ ಅನ್ನು ಘೋಷಿಸಿದ್ದಾರೆ. ಆತ್ಮ ನಿರ್ಭರ ಭಾರತ ನಮ್ಮೆಲ್ಲರ ಧ್ಯೇಯವಾಗಲಿ, ಭಾರತ ಸ್ವಾವಲಂಬಿ ಎಂಬುದನ್ನು ತೋರಿಸಬೇಕಿದೆ . ಕೋವಿಡ್ ಸಂಕಟ ಶುರುವಾದ ಸಂದರ್ಭದಲ್ಲಿ ಭಾರತದಲ್ಲಿ ಪಿಪಿಇ ಕಿಟ್ ತಯಾರಾಗುತ್ತಿರಲಿಲ್ಲ, ಎನ್ 95 ಮಾಸ್ಕ್‍ಗಳು ಕೆಲವು ಸಂಖ್ಯೆಯಲ್ಲಿ ಮಾತ್ರವೇ ಉತ್ಪಾದನೆಯಾಗುತ್ತಿತ್ತು. ಈಗ ಭಾರತ ದಿನಂಪ್ರತಿ 2 ಲಕ್ಷ ಪಿಪಿಇ ಕಿಟ್ ಹಾಗೂ ಎನ್ 95 ಮಾಸ್ಕ್ ಗಳನ್ನು ತಯಾರಿಸುತ್ತಿದೆ. ವಿಶ್ವವೇ ಒಂದು ಕುಟುಂಬ ಎಂಬುದು ನಮ್ಮ ಸಂಸ್ಕೃತಿಯಾಗಿದ್ದು ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಇದು ಸಾಬೀತುಗೊಂಡಿದೆ ಎಂದು ಮೋದಿ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿರುವ ಆರ್ಥಿಕ ಪ್ಯಾಕೇಜ್ ದೇಶದ ಜಿಡಿಪಿಯ ಶೇ.10 ರಷ್ಟು ಇರಲಿದೆ. ಈ ಆರ್ಥಿಕ ಪ್ಯಾಕೇಜ್ ದೇಶದ ಶ್ರಮಿಕರು, ಕಾರ್ಮಿಕರು, ದೇಶದ ರೈತರು, ತೆರಿಗೆಯನ್ನು ಪ್ರಾಮಾಣಿಕವಾಗಿ ಪಾವತಿಸಿ, ದೇಶದ ಅಭಿವೃದ್ಧಿಗೆ ಸಹಕರಿಸುವ ಮಧ್ಯಮ ವರ್ಗಕ್ಕಾಗಿ ಘೋಷಿಸಲಾಗಿದೆ. ಈ ಬಗ್ಗೆ ಹಣಕಾಸು ಸಚಿವರು ಬುಧವಾರ ಇನ್ನಷ್ಟು ವಿವರಣೆ ನೀಡಲಿದ್ದಾರೆ ಎಂದು ಮೋದಿ ಹೇಳಿದ್ದಾರೆ. ಇದೇ ವೇಳೆ ಸ್ವಾವಲಂಬಿ ಭಾರತ ಆಗಬೇಕಾದರೆ ದೇಶದ ಜನತೆ ಖಾದಿ, ಹ್ಯಾಂಡ್ ಲೂಮ್ ರೀತಿಯ ಸ್ಥಳೀಯ ಉತ್ಪನ್ನಗಳನ್ನು ಖರೀದಿಸಿ ಅದನ್ನು ಹೆಚ್ಚು ಪ್ರಚಾರ ಮಾಡುವಂತೆ ಕರೆ ನೀಡಿದ್ದಾರೆ
ಕೊರೊನಾ ಸಾಂಕ್ರಾಮಿಕ ವೈರಸ್ ವಿರುದ್ಧ ಹೋರಾಟದಲ್ಲಿ ಭಾರತ ಮುಂಚೂಣಿಯಲ್ಲಿದೆ. ಕೊರೊನಾ ವಿರುದ್ಧ ನಾವು ಹೋರಾಟ ಮಾಡಬೇಕು, ಜತೆಗೆ ಉಳಿಯಬೇಕು. ಭಾರತ ಸ್ವಾವಲಂಬಿಯಾಗಬೇಕು ಎಂದು ಕರೆ ನೀಡಿದರು.
ಕೊರೊನಾ ವಿರುದ್ಧದ ಹೋರಾಟ ಈಗ ನಾಲ್ಕನೇ ತಿಂಗಳಿಗೆ ಕಾಲಿಟ್ಟಿದೆ. ಇಡೀ ವಿಶ್ವವನ್ನು ಈ ಮಹಾಮಾರಿ ವೈರಸ್ ಆವರಿಸಿಕೊಂಡಿದೆ. ಲಕ್ಷಾಂತರ ಮಂದಿ ಮೃತಪಟ್ಟಿದ್ದಾರೆ. ಭಾರತದಲ್ಲೂ ಕೊರೊನಾ ಸಾಕಷ್ಟು ಸಂಕಷ್ಟ ಉಂಟು ಮಾಡಿದೆ. ಭಾರತದಲ್ಲಿ ಹಲವಾರು ಮಂದಿ ಮೃತಪಟ್ಟಿದ್ದಾರೆ. ಆ ಕುಟುಂಬದ ಸದಸ್ಯರೆಲ್ಲರಿಗೂ ನನ್ನ ಸಂತಾಪಗಳು.
ಮಾನವ ಕುಲಕ್ಕೆ ಇದು ಕಲ್ಪನಾತೀತ ಪರಿಸ್ಥಿತಿ. ಈ ಹೋರಾಟದಲ್ಲಿ ನಾವು ಇನ್ನಷ್ಟು ಧೈರ್ಯದಿಂದ ಎದುರಿಸಬೇಕಾಗಿದೆ. ಭಾರತ ಆತ್ಮ ನಿರ್ಭರ ದೇಶ ಆಗಬೇಕು. ಸ್ವಾವಲಂಬಿ ಭಾರತ ಎಂಬುದನ್ನು ನಾವು ತೋರಿಸಬೇಕು.ವಿಶ್ವವೇ ಒಂದು ಪರಿವಾರ ಎಂದು ನಾವು ಅಂದುಕೊಂಡಿದ್ದೇವೆ. ಇದು ಭಾರತದ ಸಂಸ್ಕೃತಿ, ಸಂಸ್ಕಾರವಾಗಿದೆ. ಎಲ್ಲರಿಗೂ ಸುಖ-ಸಮೃದ್ಧಿ ಸಿಗಲಿ ಎಂದು ಆಶಿಸುವವರೇ ಭಾರತೀಯರು.
ಗುಲಾಮಿ ಮನಸ್ಥಿತಿಯಿಂದ ಈಗ ಹೊರ ಬಂದಿದ್ದೇವೆ. ಕ್ಷಯ, ಪೊಲಿಯೋ, ಅಪೌಷ್ಟಿಕತೆ ಸಮಸ್ಯೆಗಳನ್ನು ಮೆಟ್ಟಿನಿಂತು ಭಾರತ ಯಶಸ್ವಿಯಾಗಿದೆ. ಈ ಶತಮಾನದ ಆರಂಭದಲ್ಲಿ ಇಡೀ ವಿಶ್ವಕ್ಕೆ ವೈ2ಕೆ (2000) ಸಂಕಷ್ಟ ಎದುರಾದಾಗ ನಮ್ಮ ಭಾರತೀಯ ತಂತ್ರಜ್ಞರು ಇಡೀ ವಿಶ್ವಕ್ಕೆ ಪರಿಹಾರ ಕಂಡುಹಿಡಿದುಕೊಟ್ಟರು.
ಕೊರೊನಾ ವೈರಸ್ ವಿರುದ್ಧ ಹೋರಾಡಲು ಹಲವು ರಾಷ್ಟ್ರಗಳು ವಿಫಲವಾಗಿವೆ. ಭಾರತದಲ್ಲಿ ಘೋಷಣೆಯಾಗಿರುವ ಆರ್ಥಿಕ ಪ್ಯಾಕೇಜ್ ಮುಂದಿನ ದಿನಗಳಲ್ಲಿ ಎಲ್ಲ ವಲಯಗಳಿಗೆ ಪೂರಕವಾಗಲಿದೆ. ಲಾಕ್‍ಡೌನ್ 4.0 ಹೊಸ ರೂಪದೊಂದಿಗೆ ಬರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮೇ 18ಕ್ಕೂ ಮೊದಲು ಹೊಸ ಲಾಕ್‍ಡೌನ್ ನಿಯಮಗಳನ್ನು ಘೋಷಿಸಲಿದ್ದೇವೆ ಎಂದು ಮೋದಿ ತಿಳಿಸಿದ್ದಾರೆ. ಇಡೀ ವಿಶ್ವವೇ ಸಂಕಷ್ಟದಲ್ಲಿದೆ. ನಾವೆಲ್ಲರೂ ಜನರ ಜೀವವನ್ನು ಉಳಿಸಿ, ಮುನ್ನಡೆಯಬೇಕಾಗಿದೆ. ಒಂದೇ ಒಂದು ವೈರಸ್ ಇಡೀ ಜಗತ್ತನ್ನೇ ನಲುಗುವಂತೆ ಮಾಡಿದೆ. ಇಡೀ ಪ್ರಪಂಚ ಜೀವ ಉಳಿಸಿಕೊಳ್ಳಲು ಹೋರಾಡುತ್ತಿದೆ. ಇಂತಹ ಪರಿಸ್ಥಿತಿಯನ್ನು ನಾವು ಇದುವರೆಗೂ ಕೇಳಿಲ್ಲ, ನೋಡಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಕೊರೊನಾ ನಿಯಂತ್ರಿಸಲು ಭಾರತದ ಔಷಧಗಳು ವಿಶ್ವದಲ್ಲಿ ಭಾರತದ ಬಗ್ಗೆ ವಿಶ್ವಾಸ ಹೆಚ್ಚುವಂತೆ ಮಾಡುತ್ತಿವೆ. ಸ್ವಾವಲಂಬನೆಯಿಂದ ಮಾತ್ರ ಅಭಿವೃದ್ಧಿ ಸಾಧ್ಯ. ಭಾರತಕ್ಕೆ ಭೂಮಿಯೇ ತಾಯಿ. 21ನೇ ಶತಮಾನ ಭಾರತದ್ದು ಎಂಬುದನ್ನು ಗಮನದಲ್ಲಿಟ್ಟುಕೊಂಡು ನಾವು ಮುನ್ನುಗ್ಗಬೇಕಿದೆ. ಭಾರತದಲ್ಲಿ ಇರುವಷ್ಟು ಪ್ರತಿಭಾವಂತರು ಬೇರೆಲ್ಲೂ ಇಲ್ಲ. ಭಾರತ ಎಂತಹ ಸಮಸ್ಯೆ, ಸವಾಲುಗಳನ್ನು ಬೇಕಾದರೂ ಎದುರಿಸಬಲ್ಲದು. ತಂತ್ರಜ್ಞಾನವನ್ನು ಬಳಸಿಕೊಂಡು ನಾವು ಇನ್ನಷ್ಟು ಪ್ರಬಲವಾಗಿ ಬೆಳೆಯಬೇಕಾಗಿದೆ.
ನಮ್ಮ ಸಂಕಲ್ಪವು ಬಿಕ್ಕಟ್ಟುಗಳಿಗಿಂತ ದೊಡ್ಡದಾಗಿದೆ. ನಾವು ನಮ್ಮನ್ನು ಉಳಿಸಿಕೊಳ್ಳಬೇಕು ಮತ್ತು ನಮ್ಮ ಹೋರಾಟವನ್ನು ಮುಂದುವರಿಸಬೇಕು. ನಾವು ಸೋಲನ್ನು ಸ್ವೀಕರಿಸುವುದಿಲ್ಲ.
ಈ ಬಿಕ್ಕಟ್ಟು ಭಾರತಕ್ಕೆ ಒಂದು ಪ್ರಮುಖ ಅವಕಾಶ ತಂದಿದೆ. ಈ ಹೋರಾಟದಲ್ಲಿ ನಾವು ನಿರ್ಣಾಯಕ ಘಟ್ಟದಲ್ಲಿದ್ದೇವೆ. ಸ್ವಾವಲಂಬಿ ಭಾರತವೇ ನಮ್ಮ ಮುಂದಿನ ದಾರಿ. ನಾವು ಕೋವಿಡ್ ನಂತರದ ವಿಶ್ವ ಕ್ರಮಾಂಕದಲ್ಲಿ ಭಾರತವನ್ನು ಶ್ರೇಷ್ಠರನ್ನಾಗಿ ಮಾಡಬೇಕಾಗಿದೆ.
21 ನೇ ಶತಮಾನವು ಭಾರತದದ್ದಾಗಿರುತ್ತದೆ ಎಂದು ನಾವು ಕೇಳಿದ್ದೇವೆ. ಇಡೀ ಜಗತ್ತು ಸಾವು ಮತ್ತು ಬದುಕಿನೊಂದಿಗೆ ಹೋರಾಡುತ್ತಿದೆ. ಈ ನಡೆಯಿಂದ ಭಾರತ ಜಗತ್ತಿನಾದ್ಯಂತ ಪ್ರಶಂಸೆಗೆ ಒಳಗಾಗಲಿದೆ. ಇದು ಪ್ರತಿಯೊಬ್ಬ ಭಾರತೀಯನ ಹೆಮ್ಮೆ.