ಗೋಣಿಕೊಪ್ಪಲು, ಮೇ 12: ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ ನಿಯಂತ್ರಣ ಮತ್ತು ಅಭಿವೃದ್ಧಿ ಆದಿನಿಯಮ 1966ರಲ್ಲಿ ಆರಂಭಗೊಂಡಿದ್ದು ರೈತನು ಬೆಳೆದ ಕೃಷಿ ಒಟ್ಟುವಳಿಯನ್ನು ಮಾರುಕಟ್ಟೆ ಪ್ರಾಗಂಣದಲ್ಲಿ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಸರ್ಕಾರ ವರ್ತಕರನ್ನು ನಿಯಂತ್ರಣದಲ್ಲಿಟ್ಟು ವ್ಯವಹಾರ ನಡೆಸುತ್ತಿತ್ತು.ರೈತರ ಹಿತದೃಷ್ಟಿಯಿಂದ ಈ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಮಾರ್ಪಾಡು ತರುವ ಮೂಲಕ ಎಪಿಎಂಸಿ ಚುಟುವಟಿಕೆಗಳು ಇನ್ನು ಮುಂದೆ ಆ ಪ್ರಾಂಗಣಕ್ಕೆ ಸೀಮಿತಗೊಳಿಸುವಂತೆ ಮಾಡಿದೆ.2017ರ ಎಪಿಎಂಸಿ ಆ್ಯಕ್ಟ್‍ನ ಪ್ರಮುಖ 9 ಬದಲಾವಣೆಗಳಲ್ಲಿ 8ನ್ನು ರಾಜ್ಯ ಸರಕಾರ ಜಾರಿಗೆ ತಂದಿತ್ತಾದರೂ, ಎಪಿಎಂಸಿಯ ಚಟುವಟಿಕೆಗಳನ್ನು ಆವರಣಕ್ಕೆ ಮಾತ್ರ ಸೀಮಿತಗೊಳಿಸುವ ಬಗ್ಗೆ ರಾಜ್ಯ ನಿರ್ಧಾರ ಕೈಗೊಂಡಿರಲಿಲ್ಲ. ಈ ಬಗ್ಗೆ ಕೇಂದ್ರ ಕೃಷಿ ಸಚಿವಾಲಯದ ಕಾರ್ಯದರ್ಶಿ ಸಂಜಯ್ ಅಗರ್‍ವಾಲ್ ತಾ. 5 ರಂದು ರಾಜ್ಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ನಾಗಾಂಬಿಕಾ ದೇವಿ ಅವರಿಗೆ ಪತ್ರ ಬರೆದು ಈ ಬಗ್ಗೆ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಕೋವಿಡ್-19ರ ಪ್ರಸ್ತುತ ಸವಾಲಿನ ಸಮಯದಲ್ಲಿ ಮಂಡಿಯ ಭೌತಿಕ ಗಡಿಗಳಲ್ಲಿ ಮಾರುಕಟ್ಟೆ ನಿಯಮಗಳನ್ನು ಸೀಮಿತಗೊಳಿಸುವ ಮೂಲಕ ಬಾಗಿಲಿನ ಹೆಜ್ಜೆಯಲ್ಲಿ ಮಾರುಕಟ್ಟೆ ಪ್ರವೇಶವನ್ನು ಪಡೆಯಲು ಸಾಧ್ಯವಿರುವ ಎಲ್ಲಾ ರೀತಿಯಲ್ಲಿ ರೈತರುಗಳಿಗೆ ಅನುಕೂಲ ಕಲ್ಪಿಸುವ ಅವಶ್ಯಕತೆಯಿದೆ. ಕರ್ನಾಟಕ ರಾಜ್ಯವು ರೈತರು ಮತ್ತು ಉತ್ಪಾದಕರ ಹಿತ ದೃಷ್ಟಿಯಿಂದ ಸುಗ್ರೀವಾಜ್ಞೆ ಮೂಲಕ ತುರ್ತಾಗಿ ಅಳವಡಿಸಿಕೊಳ್ಳಲು ನಿರ್ದೇಶನ ನೀಡಲಾಗಿದೆ. ಈ ಸಮಯದಲ್ಲಿ ಉತ್ತಮ ಸಂಭಾವನೆ ದರಗಳಿಗೆ ರೈತರ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಪ್ರವೇಶವನ್ನು ಪಡೆಯಲು ಸಾಧ್ಯವಾಗಲಿದೆ.
ಈ ಬಗ್ಗೆ ಮುಖ್ಯಮಂತ್ರಿಗಳ ಗಮನ ಸೆಳೆಯುವಂತೆಯೂ ಹೊಸ ಆದೇಶದ ಪ್ರತಿಯನ್ನು ಕೇಂದ್ರ ಕೃಷಿ ಸಚಿವಾಲಯಕ್ಕೆ
(ಮೊದಲ ಪುಟದಿಂದ) ಕಳುಹಿಸುವಂತೆಯೂ ಸೂಚಿಸಲಾಗಿದೆ. ಕೇಂದ್ರ ಸರಕಾರದ ಆದೇಶದಂತೆ ರಾಜ್ಯ ಸರಕಾರ ಸುಗ್ರೀವಾಜ್ಞೆ ಮೂಲಕ ಹೊಸ ಕಾನೂನು ತರಲು ಯತ್ನಿಸಿದ್ದು, ರಾಜ್ಯಪಾಲರಿಗೆ ಕಳುಹಿಸಿದೆ.
ಈ ಆದೇಶವನ್ನು ಹೊರ ತರಲು ರಾಜ್ಯಪಾಲರ ಅಂಕಿತವಷ್ಟೆ ಬಾಕಿಯಿದೆ. ಇದರಿಂದ ರೈತರು ಬೆಳೆದ ಬೆಳೆಗಳಿಗೆ ಉತ್ತಮ ಬೆಂಬಲ ಬೆಲೆ ಸಿಗುವ ಆಶಾ ಭಾವನೆ ವ್ಯಕ್ತವಾಗಿದೆ. ಎಪಿಎಂಸಿ ಮೂಲಕ ಸಂಗ್ರಹಿಸುತ್ತಿದ್ದ ಶೇ. ಒಂದೂವರೆ ಮಾರುಕಟ್ಟೆ ಸೆಸ್‍ಗೆ ನಿಯಂತ್ರಣ ಬಿದ್ದಿದೆ.