ಮಡಿಕೇರಿ, ಮೇ 13: ಸರಕಾರದಿಂದ ಕಾಲ ಕಾಲಕ್ಕೆ ಜಾರಿಗೊಳ್ಳುವ ಯೋಜನೆಗಳೊಂದಿಗೆ, ವಿವಿಧ ಕಚೇರಿ ಕೆಲಸ ಕಾರ್ಯಗಳನ್ನು ಇಲಾಖಾವಾರು ಅಧಿಕಾರಿಗಳು ಮತ್ತು ಸಿಬ್ಬಂದಿ ಕಡೆಗಣಿಸಿದರೆ ಅಥವಾ ಲಂಚ ಬಯಸುವದು ಸೇರಿದಂತೆ, ವಿನಾಃ ಕಾರಣ ವಿಳಂಬ ಮಾಡಿದರೆ, ನೊಂದ ಸಾರ್ವಜನಿಕರು ನೇರವಾಗಿ ಲೋಕಾಯುಕ್ತಕ್ಕೆ ದೂರು ಸಲ್ಲಿಸಬಹುದು ಎಂದು ಕೊಡಗು ಜಿಲ್ಲೆಯ ನೂತನ ಲೋಕಾಯುಕ್ತ ಉಪ ಅಧೀಕ್ಷಕ ಎಂ.ಎಸ್. ಪವನ್‍ಕುಮಾರ್ ಸಲಹೆ ನೀಡಿದ್ದಾರೆ.ಕಳೆದ ಐದು ವರ್ಷಗಳಿಂದ ಖಾಲಿಯಿದ್ದ ಈ ಹುದ್ದೆಗೆ ರಾಜ್ಯ ಸರಕಾರದಿಂದ ನೇಮಕಗೊಂಡು, ಅಧಿಕಾರ ವಹಿಸಿಕೊಂಡಿರುವ ಅವರು, ‘ಶಕ್ತಿ’ ಸಂದರ್ಶನದಲ್ಲಿ ಮಾತನಾಡುತ್ತಿದ್ದರು. ಪ್ರಸ್ತುತ ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿಗಳಾದ ಪಿ. ವಿಶ್ವನಾಥ ಶೆಟ್ಟಿ ಹಾಗೂ ಎಡಿಜಿಪಿ ಎ.ಎಸ್.ಎನ್. ಮೂರ್ತಿ ಅವರುಗಳ ನಿರ್ದೇಶನದಲ್ಲಿ, ರಾಜ್ಯದೆಲ್ಲೆಡೆ ಜಿಲ್ಲಾವಾರು ಘಟಕಗಳು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದು, ಲೋಕಾಯುಕ್ತ ‘ಹಲ್ಲು ಕಿತ್ತ ಹಾವಿನಂತೆ’ ಎಂಬ ಅಭಿಪ್ರಾಯ ಸಲ್ಲದೆಂದು ಅವರು ‘ಶಕ್ತಿ’ಯ ಪ್ರಶ್ನೆಗೆ ಪ್ರತಿಕ್ರಿಯಿಸಿದರು.ಒಂದೊಮ್ಮೆ ಮಾರುಕಟ್ಟೆಯಲ್ಲಿ ಈರುಳ್ಳಿ ಅಭಾವ ಸೃಷ್ಟಿಸಿ ಕಾಳಸಂತೆ ಮಾರಾಟದಿಂದ ಗ್ರಾಹಕರ ಸುಲಿಗೆಗೆ ಯತ್ನಿಸಿದ ವೇಳೆಯಲ್ಲೂ ಲೋಕಾಯುಕ್ತ ಮಧ್ಯಪ್ರವೇಶಿಸಿ, ನ್ಯಾಯ ಬೆಲೆಗೆ ಈರುಳ್ಳಿ ಲಭಿಸಲು ಪ್ರಯತ್ನಿಸಿದಾಗಿ ಬೊಟ್ಟು ಮಾಡಿದ ಅವರು, ವಿಧವಾವೇತನ, ವಿಶೇಷ ಚೇತನರ ಸಂಭಾವನೆ, ವೃದ್ಧಾಪ್ಯ ಇನ್ನಿತರ ಮಾಸಾಸನಗಳಲ್ಲಿ ಸಮಸ್ಯೆ ಇದ್ದರೆ ಅಂತಹವರಿಗೆ ಆದ್ಯತೆ ಮೇರೆಗೆ ನೆರವಿಗೆ ಲೋಕಾಯುಕ್ತ ಸಿದ್ಧವೆಂದು ನುಡಿದರು.ದುರಾಡಳಿತಕ್ಕೆ ತಡೆ : ಮುಖ್ಯವಾಗಿ ಲೋಕಾಯುಕ್ತವು ಸಕ್ಷಮ ಪ್ರಾಧಿಕಾರದ ಸುತ್ತೋಲೆ ಮೇರೆಗೆ, ಯಾವದೇ ದುರಾಡಳಿತಕ್ಕೆ ಅವಕಾಶ ಕೊಡುವದಿಲ್ಲವೆಂದು ಸ್ಪಷ್ಟಪಡಿಸಿದ ಪವನ್‍ಕುಮಾರ್, ಸಾರ್ವಜನಿಕ ಹಿತ

(ಮೊದಲ ಪುಟದಿಂದ) ಕಾಪಾಡಲು ಮಹೋನ್ನತ ಉದ್ದೇಶದಿಂದ ಕರ್ತವ್ಯ ನಿರ್ವಹಿಸಲಿದೆ ಎಂದು ಭರವಸೆ ನೀಡಿದರು.

ಕೊರೊನಾ ತುರ್ತು ಸೇವೆ : ಪ್ರಸ್ತುತ ಕೊರೊನಾ ನಡುವೆ ಸಮಸ್ಯೆಯಲ್ಲಿ ಸಿಲುಕುವವರ ಕುರಿತಾಗಿಯೂ ಮಾಹಿತಿ ಸಂಗ್ರಹಿಸಿ, ಸಂದರ್ಭ ಅನುಸಾರ ಸರಕಾರ ಹಾಗೂ ಜಿಲ್ಲಾಡಳಿತಕ್ಕೆ ಸಂದೇಶ ರವಾನಿಸುವದರೊಂದಿಗೆ, ಹೊರ ರಾಜ್ಯ ಕಾರ್ಮಿಕರಿಗೂ ಅಗತ್ಯವಾಗಿ ತುರ್ತು ಸೇವೆ ಕಲ್ಪಿಸಲು ಲೋಕಾಯುಕ್ತ ಶ್ರಮಿಸಲಿದೆ ಎಂದು ಅವರು ವಿವರಿಸಿದರು. ಈ ಇಲಾಖೆಯು ಪರಿಣಾಮಕಾರಿ ಸೇವೆ ನೀಡಲು ಕೊಡಗಿನ ಸಾರ್ವಜನಿಕರು ಅಗತ್ಯ ಸಹಕಾರದೊಂದಿಗೆ, ದುರಾಡಳಿತ ತಡೆಗೆ ಕೈಜೋಡಿಸುವಂತೆ ಅವರು ಸಲಹೆ ನೀಡಿದರು.

ಕಾಳಸಂತೆಗೂ ತಡೆ : ಜನತೆಗೆ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ನ್ಯಾಯಬೆಲೆ ದೊರಕದೆ, ಕಾಳಸಂತೆ ದಂಧೆಯ ಮಾಹಿತಿ ಲಭಿಸಿದರೂ ಸಾರ್ವಜನಿಕ ದೂರಿನ ಮೇರೆಗೆ ಅಗತ್ಯ ಕ್ರಮ ಜರುಗಿಸಲು ಲೋಕಾಯುಕ್ತ ಗಮನ ಹರಿಸಲಿದೆ ಎಂದು ಅವರು ನೆನಪಿಸಿದರು. ಹೆಚ್ಚಿನ ಮಾಹಿತಿಗಾಗಿ ಸಾರ್ವಜನಿಕರು 08272- 229097 ಅಥವಾ 9448133007 ಸಂಖ್ಯೆಗೆ ಕಚೇರಿ ಸಮಯದಲ್ಲಿ ಸಂಪರ್ಕಿಸುವಂತೆ ಸಲಹೆ ನೀಡಿದರು.