ಮಡಿಕೇರಿ, ಮೇ 13: ಇತ್ತೀಚೆಗೆ ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ನಡೆದ ರೂ. 5.18 ಲಕ್ಷ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿ ನಗದು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಪತ್ರಿಕಾ ಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಅವರು ಮಾಹಿತಿ ನೀಡಿದರು.ಸುಂಟಿಕೊಪ್ಪ ಠಾಣಾ ಸರಹದ್ದಿನ ಹರದೂರು ಗ್ರಾಮದ ಗುಂಡುಕುಟ್ಟಿ ಎಸ್ಟೇಟ್‍ನಲ್ಲಿ ನಡೆದ ಸುಲಿಗೆ ಪ್ರಕರಣವನ್ನು ಭೇದಿಸುವಲ್ಲಿ ಕುಶಾಲನಗರ ವೃತ್ತ ನಿರೀಕ್ಷಕರ ತಂಡ ಹಾಗೂ ಜಿಲ್ಲಾ ಅಪರಾಧ ಪತ್ತೆದಳ ತಂಡದವರು ಯಶಸ್ವಿಯಾಗಿದ್ದಾರೆ ಎಂದು ವಿವರಿಸಿದರು.

ತಾ. 2ರಂದು ಗುಂಡುಕುಟ್ಟಿ ಎಸ್ಟೇಟಿನ ಮಾಲೀಕ ನಿವೃತ್ತ ಕರ್ನಲ್ ಕುಮಾರ್ ಅವರು ತಮ್ಮ ಕೆಲಸದವರಿಗೆ ವೇತನ ಬಟವಾಡೆ ಮಾಡಲು ಹಣ ತರುವಂತೆ ರೈಟರ್ ವಿಜಯಕುಮಾರ್ ಅವರಿಗೆ ಚೆಕ್ಕುಗಳನ್ನು ನೀಡಿ ಕಳುಹಿಸಿದ್ದು, ವಿಜಯಕುಮಾರ್ ಸುಂಟಿಕೊಪ್ಪದ ಕೆನರಾ ಬ್ಯಾಂಕಿನಿಂದ ಹಣವನ್ನು ತೆಗೆದುಕೊಂಡು ಎಸ್ಟೇಟ್ ಪ್ರವೇಶಿಸುತ್ತಿದ್ದ ಸಂದರ್ಭ ಗೇಟಿನ ಬಳಿ ಅವರನ್ನು ದುಷ್ಕರ್ಮಿಗಳು ತೆಡೆದು ಅವರಿಗೆ ಬೆದರಿಕೆ ಹಾಕಿ ಹಲ್ಲೆ ಮಾಡಿ ನಗದು ರೂ. 5.18 ಲಕ್ಷವನ್ನು ದೋಚಿದ ಬಗ್ಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಕೃತ್ಯ ನಡೆದ ಸ್ಥಳಕ್ಕೆ ಎಸ್ಪಿ ಭೇಟಿ ನೀಡಿ ಕುಶಾಲನಗರ ವೃತ್ತ ನಿರೀಕ್ಷಕರಿಗೆ ಸೂಚನೆಗಳನ್ನು ನೀಡಿದ್ದರು. ಡಿವೈಎಸ್ಪಿ ನೇತೃತ್ವದಲ್ಲಿ ತಂಡವನ್ನು ರಚಿಸಿದ್ದು, ತಂಡದಲ್ಲಿ ಅಪರಾಧ ಪತ್ತದಳದ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಸಹ ನೇಮಕ ಮಾಡಲಾಗಿತ್ತು. (ಮೊದಲ ಪುಟದಿಂದ) ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಿದ ತಂಡ ಗುಂಡುಕುಟ್ಟಿ ಎಸ್ಟೇಟಿನಲ್ಲಿ ಈ ಮೊದಲು ರೈಟರ್ ಆಗಿ ಕೆಲಸ ನಿರ್ವಹಿಸಿದ್ದ ಕಾವೇರಪ್ಪ ಎಂಬಾತನನ್ನು ವಶಕ್ಕೆ ಪಡೆದು ತೀವ್ರವಾಗಿ ವಿಚಾರಣೆಗೆ ಒಳಪಡಿಸಲಾಗಿತ್ತು. ಈ ವೇಳೆ ಆರೋಪಿಯು ತನ್ನ ಸ್ನೇಹಿತರಾದ ಹರೀಶ್ ಹಾಗೂ ಕುಮರೇಶ್ ರೊಂದಿಗೆ ಸೇರಿಕೊಂಡು ಸಂಚು ರೂಪಿಸಿ ಬ್ಯಾಂಕ್‍ನಿಂದ ಹಣವನ್ನು ತರುತ್ತಿದ್ದ ವಿಜಯಕುಮಾರ್ ಅವರಿಂದ ಹಣ ದೋಚಿರುವ ಬಗ್ಗೆ ಒಪ್ಪಿಕೊಂಡಿದ್ದ.

ಆರೋಪಿಗಳ ವಿವರ : ಆರೋಪಿ ಟಿ.ವಿ. ಹರೀಶ್ (57) ಹಂದಿ ಸಾಕಾಣಿಕೆಯೊಂದಿಗೆ ಬಸವೇಶ್ವರ ನಗರ, ಬೆಣಗಾಲ್, ಕೊಪ್ಪ ನಿವಾಸಿಯಾಗಿದ್ದಾನೆ. ಇನ್ನೋರ್ವ ಆರೋಪಿ ಕುಮರೇಶ್ ಯು.ಬಿ. (42) ವಿಜಯನಗರ ಮೊದಲನೆ ಕ್ರಾಸ್ ಸುಂಟಿಕೊಪ್ಪ ನಿವಾಸಿಯಾಗಿದ್ದಾನೆ. ಜೆ.ಪಿ. ಕಾವೇರಪ್ಪ (56) ಮಾದಾಪುರ ಇಗ್ಗೋಡ್ಲು ನಿವಾಸಿಯಾಗಿದ್ದಾನೆ.

ಪ್ರಕರಣ ಸಂಬಂಧ ಸುಲಿಗೆ ಮಾಡಿದ ಹಣದಲ್ಲಿ 5.02 ಲಕ್ಷ ಹಣವನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ. ಪ್ರಕರಣವನ್ನು ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ., ಡಿವೈಎಸ್ಪಿ ಹೆಚ್.ಎಂ. ಶೈಲೇಂದ್ರ ಮಾರ್ಗದರ್ಶನದಲ್ಲಿ ಕುಶಾಲನಗರ ವೃತ್ತ ನಿರೀಕ್ಷಕ ಎಂ. ಮಹೇಶ್ ನೇತೃತ್ವದಲ್ಲಿ ಮಡಿಕೇರಿ ಗ್ರಾಮಾಂತರ ಉಪನಿರೀಕ್ಷಕ ಚಂದ್ರಶೇಖರ್, ಸುಂಟಿಕೊಪ್ಪ ಠಾಣಾ ಉಪನಿರೀಕ್ಷಕ ತಿಮ್ಮಪ್ಪ, ಸಿಬ್ಬಂದಿಗಳಾದ ಹಮೀದ್, ಎಎಸ್‍ಐ ವೆಂಕಟೇಶ್, ಯೋಗೇಶ್, ನಿರಂಜನ್, ವಸಂತ್, ಶರತ್, ಅನಿಲ್, ಸಜಿ, ದಯಾನಂದ, ಪ್ರಕಾಶ್, ನಂದೇಶ್, ಸಂಪತ್, ಲೋಕೇಶ್, ಚಾಲಕರಾದ ಗಣೇಶ, ಶಶಿಕುಮಾರ್ ಹಾಗೂ ಸಿ.ಡಿ.ಆರ್. ಸೆಲ್‍ನ ಸಿಬ್ಬಂದಿಗಳಾದ ರಾಜೇಶ್ ಮತ್ತು ಗಿರೀಶ್ ಪ್ರಕರಣವನ್ನು ಭೇದಿಸಿದ್ದು, ಪೊಲೀಸ್ ಅಧೀಕ್ಷಕರು ಕಾರ್ಯಾ ಚರಣೆ ತಂಡಕ್ಕೆ ನಗದು ಬಹುಮಾನ ನೀಡಿ ಶ್ಲಾಘಿಸಿದ್ದಾರೆ.