ವೀರಾಜಪೇಟೆ, ಮೇ 14 : ವೀರಾಜಪೇಟೆ ಪಟ್ಟಣ ಪಂಚಾಯಿತಿ ಕಚೇರಿಗೆ ಮದ್ಯ ಸೇವಿಸಿ ಯಾವುದೇ ಕಾರಣವಿಲ್ಲದೆ ಅಕ್ರಮ ಪ್ರವೇಶ ಮಾಡಿ ಅಧಿಕಾರಿಗಳು, ಸಿಬ್ಬಂದಿಗಳ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ ಆರೋಪದ ಮೇರೆ ನಗರ ಪೊಲೀಸರು ಪಟ್ಟಣ ಪಂಚಾಯಿತಿಯ ಇಬ್ಬರು ನೌಕರರು ಸೇರಿದಂತೆ 5 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ತಾ. 12 ರಂದು ಅಪರಾಹ್ನ 4.30 ಗಂಟೆಗೆ ಪಟ್ಟಣ ಪಂಚಾಯಿತಿ ಕಚೇರಿಗೆ ಬಂದ ಅಲ್ಲಿನ ಖಾಯಂ ನೌಕರ ಎಚ್.ಆರ್.ಆರ್ಮುಗಂ, ದಿನಗೂಲಿ ನೌಕರ ಸನ್ನುಕುಮಾರ್ ಸಂಗಡಿಗರಾದ ವಿವೇಕ್ ರೈ, ರಾಜಪ್ಪ, ಹಾಗೂ ಪುರುಷೊತ್ತಮ್ ಇವರುಗಳು ಮದ್ಯ ಸೇವಿಸಿ ಕಚೇರಿಯೊಳಗೆ ಬಂದು ಸಹಾಯಕ ಅಭಿಯಂತರ ಎನ್.ಪಿ.ಹೇಮ್‍ಕುಮಾರ್ ಅವರನ್ನು ನಿಂದಿಸಿ ಬೆದರಿಕೆ ಹಾಕಿ ಕಚೇರಿಯಲ್ಲಿದ್ದ ಮಹಿಳಾ ಸಿಬ್ಬಂದಿಗಳಿಗೂ ನಿಂದಿಸಿದಾಗ ಮಹಿಳಾ ಸಿಬ್ಬಂದಿಗಳು ಹೆದರಿ ಕಚೇರಿಯಿಂದ ಹೊರ ಬರ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಮುಖ್ಯಾಧಿಕಾರಿ ಎ.ಎಂ.ಶ್ರೀಧರ್ ಅವರು ಕಾರ್ಯ ನಿಮಿತ್ತ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು ಅವರು ಕಚೇರಿಗೆ ಬಂದ ನಂತರ ನಗರ ಪೊಲೀಸರಿಗೆ ದೂರು ನೀಡಲಾಗಿದೆ.