ಕುಶಾಲನಗರ, ಮೇ 12: ವಿವಾಹಿತ ವ್ಯಕ್ತಿಯೋರ್ವ ಮನೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿರುವ ಘಟನೆ ಕುಶಾಲನಗರದ ಕುವೆಂಪು ಬಡಾವಣೆಯಲ್ಲಿ ಸಂಭವಿಸಿದೆ.
ಜಿಲ್ಲೆಯ ಶ್ರೀಮಂಗಲದ ಕಾಕೂರು ನಿವಾಸಿ ಕಲ್ಲಂಗಡ ಪೂವಪ್ಪ (ಪ್ರವೀಣ್-42) ಮೃತ ವ್ಯಕ್ತಿ.
ಕಳೆದ ಮೂರು ತಿಂಗಳ ಹಿಂದೆ ಕುಶಾಲನಗರದ ಕುವೆಂಪು ಬಡಾವಣೆಯ ಕೆ.ಪಿ. ಸುಗುಣಕುಮಾರ್ ಎಂಬವರ ಮನೆಯಲ್ಲಿ ಪ್ರವೀಣ್ ಬಾಡಿಗೆಗೆ ವಾಸವಾಗಿದ್ದರು. ಮೃತ ಪ್ರವೀಣ್ ಭಾನುವಾರದಿಂದ ಮನೆಯಿಂದ ಹೊರಗೆ ಬಾರದ ಕಾರಣ ಮಂಗಳವಾರ ಬೆಳಿಗ್ಗೆ ಮನೆ ಮಾಲೀಕ ಪರಿಶೀಲಿಸಿದ ಸಂದರ್ಭ ನೆಲದ ಮೇಲೆ ರಕ್ತದ ಮಡುವಿನಲ್ಲಿ ಬಿದ್ದಿರುವ ಪ್ರವೀಣನ ಮೃತದೇಹ ಪತ್ತೆಯಾಗಿದೆ. ಕೂಡಲೇ ಪಟ್ಟಣ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್ ಅಧಿಕಾರಿಗಳು, ಬೆರಳಚ್ಚು ತಜ್ಞರು, ಶ್ವಾನ ತಂಡದವರು ಸ್ಥಳ ಪರಿಶೀಲನೆ ನಡೆಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಪಿ. ಸುಮನ್ ಸ್ಥಳಕ್ಕೆ ಆಗಮಿಸಿ, ಮಾಹಿತಿ ಪಡೆದುಕೊಂಡರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನುಮಾನಾಸ್ಪದ ರೀತಿಯಲ್ಲಿ ಮೃತದೇಹ ಕಂಡುಬಂದಿದ್ದು ದೇಹದಲ್ಲಿ ಅಲ್ಲಲ್ಲಿ ರಕ್ತದ ಕಲೆಗಳು ಕಂಡುಬಂದ ಕಾರಣ ಸಂಶಯ ಮೂಡಿದೆ. ಮೃತದೇಹವನ್ನು ಮಡಿಕೇರಿ ಶವಾಗಾರಕ್ಕೆ ಸ್ಥಳಾಂತರಿಸಿ ತಜ್ಞರ ಮೂಲಕ ಹೆಚ್ಚಿನ ರೀತಿಯ ತಪಾಸಣೆ ಕೈಗೊಂಡ ಬಳಿಕ ಸಾವಿಗೆ ನಿಖರ ಮಾಹಿತಿ ಲಭ್ಯವಾಗಲಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭ ಡಿವೈಎಸ್ಪಿ ಎಚ್.ಎಂ.ಶೈಲೇಂದ್ರ, ವೃತ್ತ ನಿರೀಕ್ಷಕ ಎಂ.ಮಹೇಶ್, ಕುಶಾಲನಗರ ಪೊಲೀಸ್ ಠಾಣಾಧಿಕಾರಿ ಗಣೇಶ್ ಇದ್ದರು.