ಕೆಮ್ಮುವಾಗ ಅಥವಾ ಸೀನುವಾಗ ಮುಖವನ್ನು ಕರವಸ್ತ್ರ ಬಳಸಿ ಮುಚ್ಚಿಕೊಳ್ಳಿ. ಸೋಂಕು ಇರುವ ವ್ಯಕ್ತಿಯಿಂದ ಕನಿಷ್ಟ 6 ಅಡಿ ದೂರವಿರಿ. ತಣ್ಣಗಿರುವ ಪದಾರ್ಥಗಳನ್ನು ಸೇವಿಸದಿರಿ. ಹೀಗೆ ಹಲವಷ್ಟು ಸಂದೇಶಗಳು ಇತರರಿಗೆ ಫೋನ್ ಮಾಡುವಾಗ ಕೇಳಿರಬಹುದು. ಕೊರೊನಾದ ಆರಂಭದಲ್ಲಿ, ರೋಗದ ಬಗ್ಗೆ ಹೆಚ್ಚು ಮಾಹಿತಿ ಇಲ್ಲದಿದ್ದಾಗ, ಈ ಸಂದೇಶಗಳನ್ನು ಕೇಳುವುದು ಉಪಯೋಗಕರವಾಗಿತ್ತು.
ಆದರೆ ಇದೀಗ ಕೊರೊನಾ ಎಂಬುದು ಮನೆಮಾತಾಗಿ ಬಿಟ್ಟಿದೆ. ದಿನ ಬೆಳಿಗ್ಗೆ ದೂರದರ್ಶನದಲ್ಲೂ ಕೊರನಾದ ಸುದ್ದಿ, ಸಾಮಾಜಿಕ ಜಾಲತಾಣಗಳಲ್ಲಂತೂ ಕೊರೊನಾದ್ದೆ ಮಾತು. ಲಾಕ್ಡೌನ್ ಇರುವ ಕಾರಣ ಸ್ವಲ್ಪ ತಡವಾಗಿ ಏಳಬೇಕೆಂದಿದ್ದರೆ, ನಗರಸಭೆಯ ಕಸದ ಟ್ರ್ಯಾಕ್ಟರ್ ಕೂಡಾ ಕೊರೊನಾದ ಪದ್ಯಗಳನ್ನು ಜೋರಾಗಿ ಹಾಕಿ ಜನರಿಗೆ ಜಾಗೃತಿ ಮೂಡಿಸುತ್ತಿದೆ. ಪದ್ಯಗಳು ಇಂಪಾಗಿದ್ದರೆ ಸರಿ, ‘ನೀವೂ ಸಾಯ್ತೀರಾ....., ಮನೆಯವ್ರ್ನೂ ಕೊಲ್ತೀರಾ.....’ ಎಂದೆಲ್ಲಾ ಬೆಳ್ಳಂಬೆಳಿಗ್ಗೆ ಅರಚಿದಾಗ ಒಮ್ಮೆಲೆ ಕೆಟ್ಟ ಕನಸ್ಸು ಬಂದಂತೆ ಎಚ್ಚರವಾಗಿಬಿಡುತ್ತೆ. ಇವುಗಳನ್ನೆಲ್ಲಾ ಸಹಿಸಿಕೊಂಡು ಸಾರ್ವಜನಿಕರು ಸುಮ್ಮನಿದ್ದಾರೆ! ಆದರೆ ತುರ್ತು ಸಂದರ್ಭ ಯಾರಿಗಾದರೂ ಕರೆ ಮಾಡಲು ಹೊರಟಾಗಲೂ, ಕೊರೊನಾ ಸಂದೇಶ ! 30 ಸೆಕೆಂಡುಗಳ ಕಾಲ ಟೆಲಿಕಾಮ್ ಕಂಪನಿಗಳಿಂದ, ಮನೆಯಲ್ಲೇ ಇದ್ದು ಫೋನ್ ರೀಚಾರ್ಜ್ ಮಾಡಿ ಎಂಬ ಸಂದೇಶದ ನಂತರ ಇನ್ನೂ 30 ಸೆಕೆಂಡುಗಳು ‘ಕೊರೊನಾ ಅದು..., ಕೊರೊನಾ ಇದು.....’ ಎಂದು ಹೇಳಿದ್ದನ್ನೇ ಹೇಳುತ್ತಾರೆ. ಮಿತ್ರರೊಬ್ಬರು ಅವರಿಗೆ ಆದ ಅನುಭವ ಹಂಚಿಕೊಂಡರು. ತಮಗೆ ಪರಿಚಯವಿರುವವರೊಬ್ಬರು ಅಂಗಡಿಯಿಂದ ಏನೋ ತೆಗೆದುಕೊಂಡು ಬರಲು ಹೇಳಿದ್ದರು. ತಾವು ಅಂಗಡಿಗೆ ತಲುಪಿದ ನಂತರ, ಏನು ಬೇಕೆಂದು ಕೇಳಲು ಕರೆ ಮಾಡಿದಾಗ ಕೊರೊನಾದ ಸಂದೇಶ ಭಾಷಣ ಶುರುವಾಯಿತು. ಬಹಳ ಸಿಟ್ಟಿನಿಂದ ‘ಏನ್ ಕರ್ಮ ಇವರದ್ದು’ ಎಂದು ಕೊರೊನಾದ ಸಂದೇಶಕ್ಕೆ ಬೈಯ್ದರು. ಇದೇ ಕ್ಷಣದಲ್ಲಿ, ಸಾಮಗ್ರಿ ತರಲು ಹೇಳಿದವರು ಕರೆ ಸ್ವೀಕರಿಸಿ ಬಿಟ್ಟರು. ಕರೆ ಸ್ವೀಕರಿಸಿದ ತಕ್ಷಣ ಅವರಿಗೆ ‘ಏನ್ ಕರ್ಮ ಇವರದ್ದು‘ ಎಂಬ ವಾಕ್ಯ ಕೇಳಿ ಎದೆ ಬಡಿತ ಹೆಚ್ಚಾಗಿದ್ದಿರಬಹುದು. ಸಾಮಗ್ರಿ ತರಲು ಹೇಳಿದ್ದೇ ದೊಡ್ಡ ತಪ್ಪಾಯಿತೇ, ಎಂದು ಅನಿಸಿರಬಹುದು. ಮಿತ್ರರು ಇದಕ್ಕೆ ಕ್ಷಮೆಯಾಚಿಸಿ, ಅದು ನಿಮಗಲ್ಲ, ಕೊರೊನಾದ ಸಂದೇಶಗಾರ್ತಿಗೆ ಬೈಯ್ದದ್ದು ಎಂದು ಸ್ಪಷ್ಟೀಕರಿಸಿದರು.
ಜಾಗೃತಿ ಸಂದೇಶಗಳು ಬೇಕು, ಮಿತಿಮೀರಬಾರದಷ್ಟೆ.
-ಪ್ರಜ್ವಲ್ ಜಿ.ಆರ್.