ಮಡಿಕೇರಿ, ಮೇ 12 : ನಗರದ ಮಹದೇವಪೇಟೆಯಲ್ಲಿ ಇತ್ತೀಚೆಗೆ ನಡೆದ ಗರ್ಭಿಣಿಯ ಸಾವಿನ ಪ್ರಕರಣದ ಬಗ್ಗೆ ಆಕೆಯ ತಾಯಿ ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ. ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿ ತಮ್ಮ ಮಗಳನ್ನು ಆಕೆಯ ಪತಿ ಹಾಗೂ ಮನೆಯವರು ಕೊಲೆ ಮಾಡಿರುವ ಶಂಕೆ ಇದೆ ಎಂದು ಆರೋಪಿಸಿರುವ ಮೃತಳ ತಾಯಿ ವಿ.ಯಶೋಧ, ಪೊಲೀಸರು ಸೂಕ್ತ ತನಿಖೆ ನಡೆಸಿ ಸತ್ಯವನ್ನು ಬಯಲಿಗೆಳೆಯಬೇಕೆಂದು ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುತ್ರಿ ಭಾಗ್ಯಶ್ರೀ (18) ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು, ಪತಿ ಮನೆಯವರಿಂದ ಕಿರುಕುಳ ಇರುವ ಬಗ್ಗೆ ಹೇಳಿಕೊಂಡಿದ್ದಳು ಎಂದು ತಿಳಿಸಿದರು. ಮತಾಂತರಕ್ಕಾಗಿ ನನ್ನ ಮಗಳನ್ನು ಕೇರಳಕ್ಕೆ ಕಳುಹಿಸಿದ ಪತಿ ಶಾಹುಲ್ ಹಮೀದ್, ಮಡಿಕೇರಿಗೆ ಬಂದ ನಂತರ ಹಲ್ಲೆ ನಡೆಸುತ್ತಿದ್ದ ಎಂದು ಬೇಸರ ವ್ಯಕ್ತಪಡಿಸಿದರು.
ಕೆಲವು ತಿಂಗಳುಗಳ ಹಿಂದೆ ಪ್ರೀತಿ, ಪ್ರೇಮದ ಹೆಸರಿನಲ್ಲಿ ಮನೆಯವರ ವಿರೋಧದ ನಡುವೆ ವಿವಾಹ ಮಾಡಿಕೊಂಡಿದ್ದ ಆತ ಆಕೆಯನ್ನು ಕೆಲವೇ ದಿನಗಳಲ್ಲಿ ಒತ್ತಾಯಪೂರ್ವಕವಾಗಿ ಕೇರಳದ ಪೊನ್ನಾಣಿ ಎಂಬಲ್ಲಿಗೆ ಕರೆದುಕೊಂಡು ಹೋಗಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿರುವುದಾಗಿ ಆರೋಪಿಸಿದರು.
ಮದುವೆಯಾದ ಒಂದೆರೆಡು ವಾರದಿಂದಲೇ ಶಾಹುಲ್ ಹಮೀದ್ ಹಾಗೂ ಆತನ ಮನೆಯವರಿಂದ ಕಿರುಕುಳವಾಗಿದ್ದು, ತನಗೆ ಕರೆ ಮಾಡಿ ನನ್ನನ್ನು ಹಿಂಸಿಸುತ್ತಿರುವುದಾಗಿ ಮಗಳು ತಿಳಿಸಿದ್ದಳು; ರಾತ್ರಿ ಹೊತ್ತು ಮನೆಯಲ್ಲಿಲ್ಲದೆ ಬೆಳಗ್ಗಿನ ಜಾವ ಬರುತ್ತಿದ್ದ ಎಂದು ಹೇಳಿಕೊಂಡಿದ್ದಳು ಎಂದರು.
ಭಾಗ್ಯಶ್ರೀ ಗರ್ಭಿಣಿಯೆಂದು ಲೆಕ್ಕಿಸದೆ ಹಿಂಸಿಸಿದ್ದಾರೆ, ಅಲ್ಲದೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ. ಸಾಯುವ ಮೊದಲು ನನ್ನೊಂದಿಗೆ ಕರೆ ಮಾಡಿ ಮಾತನಾಡಿದ್ದ ಮಗಳು ಕೆಲವು ಗಂಟೆಗಳ ಬಳಿಕ ಅಂಗಾತ ಮಲಗಿದ ಸ್ಥಿತಿಯಲ್ಲಿ ಸಾವಿಗೀಡಾಗಲು ಹೇಗೆ ಸಾಧ್ಯ ಎಂದು ಯಶೋಧ ಪ್ರಶ್ನಿಸಿದರು.
ಈ ಪ್ರಕರಣದ ಬಗ್ಗೆ ಪೊಲೀಸ್ ಇಲಾಖೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಯಶೋಧ ಎಚ್ಚರಿಕೆ ನೀಡಿದರು. ಸುದ್ದಿ ಗೋಷ್ಠಿಯಲ್ಲಿ ಸಹೋದರ ವಿ. ಆಕಾಶ್ ಉಪಸ್ಥಿತರಿದ್ದರು.