ಮಡಿಕೇರಿ, ಮೇ 12: ಮಡಿಕೇರಿ ಕೋಟೆಯೊಳಗಿನ ಲೋಕೋಪಯೋಗಿ ಕಚೇರಿಯನ್ನು ನ್ಯಾಯಾಲಯದ ನಿರ್ದೇಶನದಂತೆ, ತರಾತುರಿಯಲ್ಲಿ ಇಲ್ಲಿನ ಮಂಗಳೂರು ರಸ್ತೆಯಲ್ಲಿರುವ ಪ್ರವಾಸಿ ಮಂದಿರಕ್ಕೆ ಇತ್ತೀಚೆಗೆ ಸ್ಥಳಾಂತರಿಸಲಾಗಿದೆ. ಇಲ್ಲಿ ತೀರಾ ಇಕ್ಕಟ್ಟು ನಡುವೆ ದೈನಂದಿನ ಕೆಲಸ ಕಾರ್ಯವನ್ನು ನಿರ್ವಹಿಸಲಾಗುತ್ತಿದೆ. ಹೀಗಾಗಿ ನಗರದ ಕಾನ್ವೆಂಟ್ ಬಡಾವಣೆಯಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಕಟ್ಟಡಕ್ಕೆ ಜೂನ್ ಅಂತ್ಯದೊಳಗೆ ಕಚೇರಿ ಕೆಲಸ ಮಾರ್ಪಾಡುಗೊಳಿಸಲಾಗುವದು ಎಂದು ಇಲಾಖೆಯ ಕಾರ್ಯಪಾಲಕ ಅಭಿಯಂತರ ಮದನ್‍ಮೋಹನ್ ಅಭಿಪ್ರಾಯಪಟ್ಟಿದ್ದಾರೆ.

ಈಗಾಗಲೇ ರೂ. 4.51 ಕೊಟಿ ವೆಚ್ಚದಲ್ಲಿ ಎರಡು ಅಂತಸ್ತಿನ ಕಟ್ಟಡದೊಂದಿಗೆ ತಲಾ ಹತ್ತು ಕೊಠಡಿಗಳಂತೆ, ಇಲಾಖೆಯ ವಿವಿಧ ಶಾಖೆಗಳ ಕಾರ್ಯನಿರ್ವಣೆಗಾಗಿ ಒಟ್ಟು 20 ಕೊಠಡಿಗಳನ್ನು ಇಲ್ಲಿ ನಿರ್ಮಾಣ ಗೊಳಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಮುಂಗಾರು ಮಳೆಗೆ ಮುಂಚಿತವಾಗಿ ಕಾಮಗಾರಿ ಪೂರೈಸುವಂತೆ ಗುತ್ತಿಗೆದಾರರಿಗೆ ಕೇಳಿಕೊಂಡಿದ್ದು, ಈಗಾಗಲೇ ಕಟ್ಟಡಕ್ಕೆ ಟೈಲ್ಸ್ ಇತ್ಯಾದಿ ಕೆಲಸ ಸಾಗುತ್ತಿದೆ. ಇನ್ನು ಕಟ್ಟಡ ಸುತ್ತ ಆವರಣ ಗೋಡೆ ಹಾಗೂ ಕಾಂಕ್ರೀಟ್ ರಸ್ತೆಯೊಂದಿಗೆ ಸಂಪರ್ಕ ವ್ಯವಸ್ಥೆ, ಇನ್ನಿತರ ಸಣ್ಣಪುಟ್ಟ ಕೆಲಸಗಳನ್ನು ನಿರ್ವಹಿಸಲಾಗುತ್ತಿದೆ ಎಂದು ಅವರು ತಿಳಿಸಿದರು.ಮುಖ್ಯವಾಗಿ ಸಾರ್ವಜನಿಕ ಕೆಲಸ ಕಾರ್ಯಗಳಿಗೆ ಸಮರ್ಪಕ ಕಚೇರಿಯ ಕೊರತೆಯಿಂದ ಕಳೆದ ಮೂರ್ನಾಲ್ಕು ತಿಂಗಳಿನಿಂದ ಸಮಸ್ಯೆ ಎದುರಾಗಿದ್ದು, ಆ ದಿಸೆಯಲ್ಲಿ ಆದಷ್ಟು ಬೇಗನೆ ನೂತನ ಕಚೇರಿ ಕೆಲಸ ಆರಂಭಿಸುವ ಸಲುವಾಗಿ ಪ್ರಯತ್ನ ನಡೆದಿದೆ ಎಂದು ಮದನ್ ಮೋಹನ್ ನೆನಪಿಸಿದರು.

ಅಲ್ಲದೆ ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ ರಸ್ತೆ, ಸೇತುವೆ, ಇತರ ಕಾಮಗಾರಿಗಳನ್ನು ಸಾಧ್ಯವಿರುವ ಮಟ್ಟಿಗೆ ಮಳೆಗಾಲ ಅಡಿಯಿಡುವ ಮುನ್ನ ಪೂರೈಸಲು ಪ್ರಯತ್ನಿಸಲಾಗುತ್ತಿದೆ ಎಂದು ಭರವಸೆಯ ನುಡಿಯಾಡಿದರು.