2 ದಿನ ಭಾರೀ ಮಳೆ ಸಾಧ್ಯತೆ

ನವದೆಹಲಿ, ಮೇ 12: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಪರಿಣಾಮ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಎರಡು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆಂಧ್ರಪ್ರದೇಶ, ಒಡಿಶಾ, ತಮಿಳುನಾಡು, ಕರ್ನಾಟಕ ಹಾಗೂ ಕೇರಳ ರಾಜ್ಯಗಳ ಕರಾವಳಿ ಭಾಗಗಳಲ್ಲಿ ತಾ. 15, 16 ರಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ. ಗಂಟೆಗೆ 100 ಕಿ.ಮೀ.ಗೂ ಹೆಚ್ಚು ವೇಗದಲ್ಲಿ ಬೀಸುವ ಗಾಳಿಯು ದಕ್ಷಿಣದ ರಾಜ್ಯಗಳ ಕರಾವಳಿ ಪ್ರದೇಶವನ್ನು ಅಪ್ಪಳಿಸಲಿದೆ ಎಂದೂ ಇಲಾಖೆ ಹೇಳಿದೆ.

ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ಆಕ್ಷೇಪ

ಬೆಂಗಳೂರು, ಮೇ 12: ಎಪಿಎಂಸಿ ಕಾಯಿದೆಯ ತಿದ್ದುಪಡಿಗಾಗಿ ಕೊರೊನಾ ಸಮಯದಲ್ಲಿ ಸರ್ಕಾರ ತರಾತುರಿಯಲ್ಲಿ ಸುಗ್ರೀವಾಜ್ಞೆ ತರುವ ಅವಶ್ಯಕತೆ ಇದೆಯೇ ಎಂದು ಸರ್ಕಾರವನ್ನು ಪ್ರಶ್ನಿಸಿರುವ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ. ಕುಮಾರಸ್ವಾಮಿ, ಈ ಕಾಯಿದೆ ಜಾರಿಯಿಂದ ರೈತರು ಉದ್ಧಾರವಾಗುವುದಿಲ್ಲ ಎಂದು ಟೀಕಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರು ಉಳಿಯಬೇಕಾದರೆ ಈ ಕಾಯಿದೆ ತಿದ್ದುಪಡಿಯ ವಿರುದ್ಧ ರೈತರೇ ಹೋರಾಟ ಮಾಡಬೇಕು. ಸಹಕಾರ ಸಚಿವ ಎಸ್.ಟಿ. ಸೋಮಶೇಖರ್, ಪ್ರಧಾನಿಗಳ ಆದೇಶದ ಮೇರೆಗೆ ಕಾಯಿದೆ ಜಾರಿ ಮಾಡಲಾಗಿದೆ. ತಿದ್ದುಪಡಿ ಮಾಡುವುದರಿಂದ ಸರ್ಕಾರಕ್ಕೆ 600 ಕೋಟಿ ನಷ್ಟವಾಗುತ್ತದೆ ಎಂದಿದ್ದಾರೆ. ದೊಡ್ಡ ದೊಡ್ಡ ಕಂಪೆನಿಗಳಿಗೆ ಅನುಕೂಲ ಮಾಡಲು ಈ ಕಾನೂನು ತರಲು ಮುಂದಾಗಿದ್ದಾರೆ. ಕಾಯಿದೆ ಜಾರಿಗೂ ಮುನ್ನ ಸರ್ಕಾರ ವಿಧಾನಮಂಡಲ ಅಧಿವೇಶನ ಕರೆದು ಚರ್ಚೆ ಮಾಡಲಿ. ತರಾತುರಿಯಲ್ಲಿ ಕಾಯಿದೆ ಜಾರಿಗೆ ತರುವುದು ಬೇಡ ಎಂದು ಆಗ್ರಹಿಸಿದರು.

ಧಾನ್ಯ ವಿತರಣೆಗೆ ರೂ. 2351 ಕೋಟಿ ವೆಚ್ಚ

ಬೆಂಗಳೂರು, ಮೇ 12: ಬೆಂಗಳೂರು ಪ್ರಧಾನ ಮಂತ್ರಿ ಗರಿಬ್ ಕಲ್ಯಾಣ ಅನ್ನ ಯೋಜನೆ ಅಡಿಯಲ್ಲಿ ಏಪ್ರಿಲ್‍ನಿಂದ ಜೂನ್ 2020 ರವರೆಗೆ 3 ತಿಂಗಳ ಕಾಲ 4.01 ಕೋಟಿ ರಾಷ್ಟ್ರೀಯ ಆಹಾರ ಭದ್ರತಾ ಯೋಜನಾ ಕಾಯ್ದೆಯಡಿ (ಎನ್.ಎಫ್.ಎಸ್.ಎ.) ಅರ್ಹ ಫಲಾನುಭವಿಗಳಿಗೆ ಉಚಿತವಾಗಿ ಆಹಾರ ಧಾನ್ಯ ವಿತರಿಸಲು 2351 ಕೋಟಿ ರೂಪಾಯಿಗಳ ವೆಚ್ಚವನ್ನು ಕೇಂದ್ರ ಸರ್ಕಾರ ಭರಿಸುತ್ತಿದ್ದು, ಕಳೆದ ಮೇ 7ರವರೆಗೆ ರಾಜ್ಯ ಸರ್ಕಾರ 1735 ಕೋಟಿ ಮೌಲ್ಯದ 4.45 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯದ ಎತ್ತುವಳಿ ಮಾಡಿದೆ. ಲಾಕ್‍ಡೌನ್ ಸಮಯದಲ್ಲಿ 302 ರೈಲು ರೇಕ್ ಲೋಡ್ ಅಂದರೆ 8.03 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯಗಳನ್ನು ಕರ್ನಾಟಕ ರಾಜ್ಯಕ್ಕೆ ನೀಡಿರುವುದಾಗಿ ಭಾರತ ಆಹಾರ ನಿಗಮದ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಿ.ವಿ. ಪ್ರಸಾದ್ ತಿಳಿಸಿದ್ದಾರೆ. ಭಾರತೀಯ ಆಹಾರ ನಿಗದಮ ಕರ್ನಾಟಕ ವಿಭಾಗ, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ (ಪಿಎಂಜಿಕೆಎವೈ) ಮತ್ತು ರಾಷ್ಟ್ರೀಯ ಆಹಾರ ಭದ್ರತಾ ಯೋಜನಾ ಕಾಯ್ದೆಯಡಿ (ಎನ್‍ಎಫ್‍ಎಸ್‍ಎ) ರಾಜ್ಯದ ಆಹಾರ ಧಾನ್ಯದ ಅಗತ್ಯತೆಗಳನ್ನು ಪೂರೈಸಲು ಇದುವರೆಗೆ ಪ್ರತಿನಿತ್ಯ 7.48 ಲಕ್ಷ ಚೀಲ ಆಹಾರ ಧಾನ್ಯಗಳನ್ನು ಕೇಂದ್ರದಿಂದ ಸ್ವೀಕರಿಸಿ ರಾಜ್ಯದಲ್ಲಿ ವಿತರಿಸಲಾಗಿದೆ.

ಚೀನಾದಿಂದ ಆಕ್ರಮಣಕಾರಿ ಕೃತ್ಯ

ಲಡಾಖ್, ಮೇ 12: ಕೊರೊನಾ ಮಹಾಮಾರಿಯನ್ನು ಬಿಟ್ಟಿದ್ದಲ್ಲದೆ ಚೀನಾ ಮತ್ತೊಮ್ಮೆ ಆಕ್ರಮಣಕಾರಿ ಕೃತ್ಯದಲ್ಲಿ ಭಾಗಿಯಾಗಿದೆ. ಇತ್ತೀಚಿಗೆ ಸಿಕ್ಕಿಂನ ನಾಕು ಲಾ ಪಾಸ್ ವಲಯದಲ್ಲಿ ಭಾರತೀಯ ಸೇನೆಯೊಂದಿಗೆ ಘರ್ಷಣೆಗೆ ಇಳಿದಿದ್ದ ಚೀನಾ ಪಡೆಗಳು, ಮತ್ತೊಮ್ಮೆ ಪ್ರಚೋದಾನಾತ್ಮಕ ಕೃತ್ಯ ನಡೆಸಿವೆ. ವಾಸ್ತವ ಗಡಿ ರೇಖೆಯ ಅತಿ ಸಮೀಪದಲ್ಲಿ ಲಡಾಕ್ ವಾಯು ಪ್ರದೇಶಗಳ ಮೇಲೆ ಚೀನಾ ಸೇನಾ ಹೆಲಿಕಾಪ್ಟರ್‍ಗಳು ಹಾರಾಟ ನಡೆಸಿವೆ. ಇದನ್ನು ಗಮನಿಸಿದ ಕೂಡಲೇ ಜಾಗೃತಗೊಂಡ ಭಾರತೀಯ ವಾಯುಪಡೆ ತನ್ನ ಯುದ್ಧ ವಿಮಾನಗಳನ್ನು ತಕ್ಷಣ ಗಸ್ತಿಗೆ ರವಾನಿಸಿದೆ. ಈ ಘಟನೆ ಕಳೆದ ವಾರ ನಡೆದಂತೆ ಕಂಡುಬರುತ್ತಿದೆ. ಗಡಿ ರೇಖೆ (ಎಲ್‍ಎಸಿ) ಬಳಿ ಚೀನಾದ ಸೇನಾ ಹೆಲಿಕಾಪ್ಟರ್‍ಗಳು ಹಾರಾಡಿದ ತಕ್ಷಣ ಭಾರತ ವಾಯುಪಡೆ ಕೂಡಲೇ ಸ್ಪಂದಿಸಿದೆ. ಕೂಡಲೇ ಯುದ್ಧ ವಿಮಾನಗಳನ್ನು ಗಸ್ತಿಗೆ ರವಾನಿಸಿರುವುದು ಇದೇ ಮೊದಲ ಬಾರಿ ಎಂದು ರಕ್ಷಣಾ ತಜ್ಞರು ಹೇಳುತ್ತಿದ್ದಾರೆ. ಸುಖೋಯ್ 30 ಏಮ್‍ಕೆಐ ಫೈಟರ್ ಏರ್ ಕ್ರಾಷ್ಟರ್‍ಗಳ ಮೂಲಕ ಗಸ್ತು ನಡೆಸುವ ಮೂಲಕ ಭಾರತೀಯ ವಾಯುಪಡೆ ಚೀನಾ ಸೇನೆಗೆ ಬಲಿಷ್ಠ ಪ್ರತ್ಯುತ್ತರ ನೀಡಿದೆ.

ರೂ. 5.95 ಲಕ್ಷ ಕೋಟಿ ಸಾಲ ಮಂಜೂರು

ನವದೆಹಲಿ, ಮೇ 12: ಲಾಕ್‍ಡೌನ್‍ನಿಂದಾಗಿ ತೀವ್ರ ಸಂಕಷ್ಟದಲ್ಲಿರುವ ಸಣ್ಣ ಮತ್ತು ಮದ್ಯಮ ಉದ್ಯಮಗಳಿಗೆ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್‍ಗಳು ರೂ. 5.95 ಲಕ್ಷ ಕೋಟಿ ಸಾಲ ಮಂಜೂರು ಮಾಡಿವೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಮಾರ್ಚ್ 1 ರಿಂದ ಮೇ 8 ರವರೆಗೆ ಕಂಪೆನಿ ಕಾಯ್ದೆಯಡಿ ನೋಂದಣಿಯಾಗಿರುವ ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳು ಸಹ 1.18 ಲಕ್ಷ ಕೋಟಿ ರೂಪಾಯಿ ಸಾಲ ಒದಗಿಸಿವೆ ಎಂದಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ನಿರ್ಮಲಾ ಸೀತಾರಾಮನ್, ಶೇ. 97 ರಷ್ಟು ಅರ್ಹ ಸಾಲಗಾರರಿಗೆ 65 ಸಾವಿರದ 879 ಕೋಟಿ ರೂಪಾಯಿ ಮೊತ್ತದ ತುರ್ತು ಸಾಲ ಮತ್ತು ದುಡಿಯುವ ಬಂಡವಾಳ ಒದಗಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಈ ಮಧ್ಯೆ ಕೇಂದ್ರ ಹಣಕಾಸು ಸಚಿವಾಲಯ 14 ರಾಜ್ಯಗಳಿಗೆ 15ನೇ ಹಣಕಾಸು ಆಯೋಗದಡಿ 6 ಸಾವಿರದ 195 ಕೋಟಿ ರೂಪಾಯಿ ಹಣವನ್ನು ಬಿಡುಗಡೆ ಮಾಡಿದೆ.

ಮಾಜಿ ಪ್ರಧಾನಿ ಡಾ. ಸಿಂಗ್ ಗುಣಮುಖ

ನವದೆಹಲಿ, ಮೇ 12: ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಗುಣಮುಖರಾಗಿದ್ದಾರೆ. ಭಾನುವಾರ ಸಂಜೆ ಎದೆನೋವು ಕಾಣಿಸಿಕೊಂಡಿದ್ದ ಕಾರಣ ಸಿಂಗ್‍ರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ವಿಶೇಷ ವಾರ್ಡಿನಲ್ಲಿ ಚಿಕಿತ್ಸೆ ನೀಡಿದ ಬಳಿಕ ಸಿಂಗ್ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಏಮ್ಸ್ ವೈದ್ಯರು ಪ್ರಕಟಣೆ ನೀಡಿದ್ದರು.

ಬಾಯ್ಲರ್ ಸ್ಫೋಟ : ಇಬ್ಬರ ಸಾವು

ನವದೆಹಲಿ, ಮೇ 12: ಕಳೆದ ವಾರ ಎನ್‍ಎಲ್‍ಸಿ ಇಂಡಿಯಾದ ಥರ್ಮಲ್ ಪ್ಲಾಂಟ್‍ನಲ್ಲಿ ಸಂಭವಿಸಿದ್ದ ಬಾಯ್ಲರ್ ಸ್ಫೋಟದಲ್ಲಿ ಗಾಯಗೊಂಡಿದ್ದ ಎಂಟು ಕಾರ್ಮಿಕರ ಪೈಕಿ ಇಬ್ಬರು ಕಾರ್ಮಿಕರು ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮೃತಪಟ್ಟಿದ್ದಾರೆ ಎಂದು ಕಂಪೆನಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಕುಮಾರ್ ತಿಳಿಸಿದ್ದಾರೆ. ಉಳಿದ ಆರು ಗಾಯಾಳುಗಳ ಪೈಕಿ ಒಬ್ಬ ಕಾರ್ಮಿಕನ ಸ್ಥಿತಿ ಗಂಭೀರವಾಗಿದ್ದು, ನಾಲ್ವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಮೃತರು ಖಾಯಂ ಉದ್ಯೋಗಿ ಅಥವಾ ಗುತ್ತಿಗೆ ನೌಕರರೆ ಆಗಿರಲಿ ಅವರ ಕುಟುಂಬಕ್ಕೆ ಕನಿಷ್ಟ ರೂ. 15 ಲಕ್ಷ ಪರಿಹಾರ ನೀಡುವಂತೆ ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಶಿ ಅವರು ಆದೇಶಿಸಿದ್ದಾರೆ. ಪರಿಹಾರದ ಜೊತೆಗೆ, ಕಂಪೆನಿಯು ಮೃತರ ರಕ್ತ ಸಂಬಂಧಿಗಳಿಗೆ ಖಾಯಂ ಉದ್ಯೋಗವನ್ನು ನೀಡುತ್ತದೆ ಎಂದು ಅವರು ತಿಳಿಸಿದ್ದಾರೆ.

ಬುಡಕಟ್ಟು ಜನಾಂಗದವರ ನೆರವಿಗೆ ಮನವಿ

ಬೆಂಗಳೂರು, ಮೇ. 12: ಕೊರೊನಾದಿಂದ ಪರಿಶಿಷ್ಟ ಪಂಗಡ ಹಾಗೂ ಬುಡಕಟ್ಟು ಸಮುದಾಯದವರು ಸಂಕಷ್ಟದಲ್ಲಿದ್ದು, ಅವರಿಗೆ ಜೀವನೋಪಾಯ ಹಾಗೂ ಆರ್ಥಿಕ ಸ್ವಾವಲಂಭನೆಗಾಗಿ ರೂ. 155 ಕೋಟಿ ವೆಚ್ಚದ ವಿವಿಧ ಯೋಜನೆಗಳ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಈ ಪ್ರಸ್ತಾವನೆಯನ್ನು ಶೀಘ್ರವಾಗಿ ಮಂಜೂರು ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಉಪಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ಮನವಿ ಮಾಡಿದರು. ಇವರಿಂದ ಕಿರು ಅರಣ್ಯ ಉತ್ಪನ್ನಗಳನ್ನು ಹೆಚ್ಚಿನ ಬೆಂಬಲ ಬೆಲೆಯೊಂದಿಗೆ ಖರೀದಿಸಬೇಕು. ಬೆಂಬಲ ಬೆಲೆ ಹೆಚ್ಚಳಕ್ಕೆ ರೂ. 7 ಕೋಟಿ, ತಲಾ ರೂ. 2 ಕೋಟಿ ವೆಚ್ಚದ 7 ಕಿರು ಅರಣ್ಯ ಉತ್ಪನ್ನ ಸಂಸ್ಕರಣಾ ಘಟಕಗಳನ್ನು ಸಿಆರ್ಟಿಆರೈ ಮೂಲಕ ಸ್ಥಾಪಿಸಿ ತಾಂತ್ರಿಕ ಸಹಕಾರದೊಂದಿಗೆ ಅನುಷ್ಟಾನಗೊಳಿಸಬೇಕು. 355 ಇ-ಕಾರ್ಟ್‍ಗಳ ಒದಗಿಸಬೇಕು. ರೂ. 41 ಕೋಟಿ ವೆಚ್ಚದ ಕುರಿ ಮತ್ತು ಮೇಕೆ ಘಟಕಗಳ ಸ್ಥಾಪನೆ, ನೀರಾವರಿ ಸೌಲಭ್ಯ, ಶಿಥಿಲಗೊಂಡ ಆಶ್ರಮ ಶಾಲೆಗಳ ದುರಸ್ತಿಗೊಳಿಸುವ ಪ್ರಸ್ತಾವನೆ ಸೇರಿದಂತೆ ಒಟ್ಟು ರೂ. 155 ಕೋಟಿ ವೆಚ್ಚದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಅವರು ವಿವರಿಸಿದರು.