ಲಾಕ್‍ಡೌನ್ ಸೃಷ್ಟಿಸಿ ರುವ ಸಂಕಷ್ಟಗಳಿಂದ ನಲುಗಿರುವವರಲ್ಲಿ ಕೊಡಗಿನ ಚಿತ್ರ ಮಂದಿರ ಗಳ ಮಾಲೀಕರೂ ಇದ್ದಾರೆ. ಸಾವಿರಾರು ಪ್ರೇಕ್ಷಕರಿಗೆ ಮನರಂಜನೆ ನೀಡುತ್ತಿದ್ದ ಚಿತ್ರಮಂದಿರ ಮಾಲೀಕರು ಮಾತ್ರ ಈಗ ನೋವಿನಲ್ಲಿದ್ದಾರೆ. ಕನಸು ಮತ್ತು ಭ್ರಮಾಲೋಕದಲ್ಲಿ ಸಾವಿರಾರು ಪ್ರೇಕ್ಷಕರನ್ನು ದಿನನಿತ್ಯ ತೇಲಿಸುತ್ತಿದ್ದ ಸಿನಿಮಾ ಮಂದಿರಗಳೂ ಲೌಕ್‍ಡೌನ್‍ನಿಂದಾಗಿ ಪರದೆ ಎಳೆದುಕೊಂಡು ಬಿಟ್ಟಿವೆ. ಪ್ರತಿ ಪ್ರದರ್ಶನಕ್ಕೂ ಸಂಭ್ರಮದಿಂದ ಬರುತ್ತಿದ್ದ ಪ್ರೇಕ್ಷಕರನ್ನು ಕಾಣದೇ ಚಿತ್ರಮಂದಿರಗಳ ಸಿಬ್ಬಂದಿಗಳು ಬೇಸತ್ತಿದ್ದಾರೆ. ಹಾಡು, ಫೈಟಿಂಗ್, ಪ್ರೀತಿ, ಪ್ರಣಯ, ದ್ವೇಷ, ಅಸೂಯೆ, ರೋಷಾವೇಶ, ಭಾವನಾತ್ಮಕತೆ ಗಳ ವೈವಿಧ್ಯಮಯ ದೃಶ್ಯಗಳನ್ನು ರಂಗುರಂಗಾಗಿ ವಿಶಾಲ ಪರದೆಯಲ್ಲಿ ಪ್ರದರ್ಶಿಸುತ್ತಿದ್ದ ಸಿನಿಮಂದಿರಗಳಲ್ಲಿ ಈಗ ಗೋಳಿನ ಕಥೆಯ ದರ್ಶನ ಆಗುತ್ತಿದೆ. ಮುಂದಿನ ದಿನಗಳಲ್ಲಿ ಸಿನಿಮಾ ವೀಕ್ಷಿಸಲು ಪರಸ್ಪರರ ನಡುವೆ ಮಧ್ಯ ಅಂತರ ಇರಬೇಕು ಎಂಬ ನಿಯಮ ಬರಲಿದೆ. ಹೀಗಾಗಿ ಲಾಕ್‍ಡೌನ್ ಸಂದರ್ಭದ ಈಗಿನ ಮಧ್ಯಂತರ, ಸಿನಿಮಾಮಂದಿರ ಗಳಿಗೆ ನಿಜವಾದ ಅರ್ಥದಲ್ಲಿಯೂ ಮಧ್ಯ-ಅಂತರ ಎಂಬಂತಾಗಲಿದೆ.

ಕೊಡಗಿನ ಸಿನಿಮಾ ಕಥೆ ನೋಡುವುದಾದರೆ....

ಮಡಿಕೇರಿಯಲ್ಲಿ ಕೊಡಗಿನ ಮೊದಲ ಚಿತ್ರಮಂದಿರವಾಗಿ ಬಸಪ್ಪ ಥಿಯೇಟರ್‍ನ್ನು 1972 ರ ಮೇ 28 ರಂದು ಭಾರತದ ಉಪರಾಷ್ಟ್ರಪತಿ ಬಿ.ಡಿ.ಜತ್ತಿ ಉದ್ಘಾಟಿಸಿದ್ದರು. ಪಾರ್ವತಮ್ಮ ಬಸಪ್ಪ ಮಾಲೀಕತ್ವದ ಈ ಚಿತ್ರಮಂದಿರದಲ್ಲಿ ಮೊದಲ ಚಿತ್ರವಾಗಿ ಡಾ. ರಾಜ್‍ಕುಮಾರ್ ಅಭಿನಯದ ಬಂಗಾರದ ಮನುಷ್ಯ ತೆರೆಕಂಡಿತ್ತು. ಅದಕ್ಕಿಂತಲೂ ಮೊದಲು ಮಡಿಕೇರಿಯ ಈಗಿನ ಸರ್ಕಾರಿ ಬಸ್ ಸ್ಟಾಂಡ್ ಬಳಿಯಲ್ಲಿ ಕೊಹಿನೂರ್ ಮತ್ತು ವಿಜಯಲಕ್ಷ್ಮಿ ಎಂಬ ಟೆಂಟ್ ಸಿನಿಮಾಗಳು ಪ್ರೇಕ್ಷಕರ ಮನರಂಜಿಸುತ್ತಿದ್ದವು. ಬಸಪ್ಪ ಚಿತ್ರಮಂದಿರ ಜನರಿಗೆ ಕಟ್ಟಡದೊಳಗೆ ವಿಶಾಲವಾದ ಪರದೆಯಲ್ಲಿ ಚಿತ್ರವೀಕ್ಷಿಸುವ ಅನುಭವ ನೀಡಿತ್ತು. ನಂತರ ಅದೇ ವರ್ಷ ನವೆಂಬರ್ 17 ರಂದು ಕಾವೇರಿ ಮಹಲ್ ಚಿತ್ರಮಂದಿರವನ್ನು ಸಿದ್ದಾಪುರ ಮೂಲದ ಮಂಡೇಪಂಡ ಚಿಣ್ಣಪ್ಪ, ಅಪ್ಪಯ್ಯ, ಚಂಗಪ್ಪ ಸಹೋದರರು ಪ್ರಾರಂಭಿಸಿದರು. ಕುಲಗೌರವ ಮೊದಲ ಚಿತ್ರವಾಗಿತ್ತು. ಶಿವಮೊಗ್ಗದಲ್ಲಿ ಪಂಚಾಕ್ಷರಪ್ಪ ಎಂಬ ಚಿತ್ರೋದ್ಯಮಿ ಇದ್ದರು. ಅವರ ಕುಟುಂಬದ ಮುಖ್ಯ ವಹಿವಾಟೇ ಚಿತ್ರ ಪ್ರದರ್ಶನವಾಗಿತ್ತು ಅವರ ಮಕ್ಕಳಾದ ಬಸವರಾಜಪ್ಪ, ಪಾಲಾಕ್ಷಪ್ಪ ಅವರು ಮಡಿಕೇರಿಯ ಬಸಪ್ಪ ಮತ್ತು ಕಾವೇರಿ ಮಹಲ್‍ಗಳನ್ನು ನಿರ್ವಹಿಸುತ್ತಿದ್ದರು. ಕೊಡಗಿನಲ್ಲಿ 15-16 ವರ್ಷಗಳ ಹಿಂದಿನವರೆಗೂ 17 ಚಿತ್ರಮಂದಿರಗಳು ಸಾವಿರಾರು ವೀಕ್ಷಕರ ಮನತಣಿಸುತ್ತಿದ್ದವು. ಸುಂಟಿಕೊಪ್ಪದ ಗಣೇಶ್, ಕುಶಾಲನಗರದ ವೆಂಕಟೇಶ್ವರ, ಆಂಜನೇಯ, ಗೋಣಿಕೊಪ್ಪಲುವಿನ ಮಮತಾ, ನಯನ, ಸಿದ್ದಾಪುರದ ವುಡ್‍ಲ್ಯಾಂಡ್, ಸೋಮವಾರಪೇಟೆಯ ಮನಸ್ವಿ, ಲಕ್ಷ್ಮಿ, ಶನಿವಾರಸಂತೆಯ ಯಶಸ್ವಿ, ವೀರಾಜಪೇಟೆಯ ಶಾಂತ, ರಾಜರಾಜೇಶ್ವರಿ ಇದರೊಂದಿಗೆ ಕುಟ್ಟ, ಕೊಪ್ಪ, ಗುಡುಗಳಲೆಯಲ್ಲಿಯೂ ಟೆಂಟ್ ಚಿತ್ರಮಂದಿರ ಗಳಿದ್ದವು. ಈ ಸಿನಿಮಾಮಂದಿರಗಳು ಭೇದಭಾವವಿಲ್ಲದೇ ತೋಟ ಮಾಲೀಕರು ಮತ್ತು ತೋಟಕಾರ್ಮಿಕರಿಗೆ ಒಟ್ಟಾಗಿ ಕೂತು ಮನರಂಜನೆ ಪಡೆಯುವ ಸ್ಥಳವಾಗಿದ್ದವು. ಬಹುತೇಕ ಸಿನಿಮಾಮಂದಿರಗಳು ಕೊಡಗಿನಲ್ಲಿ ಭರ್ಜರಿ ಚಿತ್ರಪ್ರದರ್ಶನಗಳಿಗೆ ಕಾರಣವಾಗಿದ್ದವು. 2010ರಲ್ಲಿ ಮಡಿಕೇರಿಯ ಬಸಪ್ಪ ಚಿತ್ರಪ್ರದರ್ಶನ ಸ್ಥಗಿತಗೊಳಿಸಿತ್ತು. ಸಿದ್ದಾಪುರ, ಶನಿವಾರಸಂತೆ ಹೊರತು ಪಡಿಸಿದಂತೆ ಕೊಡಗಿನ ಬಹುತೇಕ ಚಿತ್ರಮಂದಿರಗಳು ಪರದೆಗಳನ್ನು ಶಾಶ್ವತವಾಗಿ ಎಳೆದುಕೊಂಡು ಬಿಟ್ಟವು. 2015ರಲ್ಲಿ ಕುಶಾಲನಗರದಲ್ಲಿ ಕೂರ್ಗ್ ಸಿನಿಪ್ಲೆಕ್ಸ್ ಮೂಲಕ ಕೊಡಗಿನ ಮೊದಲ ಮಲ್ಟಿಪ್ಲೆಕ್ಸ್ ಚಿತ್ರಮಂದಿರ ಪ್ರಾರಂಭವಾಯಿತು. ಸಿದ್ದಾಪುರದಲ್ಲಿಯೂ ವುಡ್‍ಲ್ಯಾಂಡ್ ಚಿತ್ರಮಂದಿರ ಎರಡು ವರ್ಷಗಳ ಹಿಂದೆ ನವೀಕರಣ ವಾಯಿತು. 3 ತಿಂಗಳ ಹಿಂದೆಯಷ್ಟೆ ಸುಂಟಿಕೊಪ್ಪದಲ್ಲಿ ರಾಜ್ಯ ಸರ್ಕಾರದ ಜನತಾ ಚಿತ್ರಮಂದಿರ ಯೋಜನೆಯಂತೆ ಗಣೇಶ್ ಥಿಯೇಟರ್ ಪುನರಾರಂಭವಾಯಿತು. ಮಡಿಕೇರಿಯ ಏಕೈಕ ಚಿತ್ರಮಂದಿರ ಕಾವೇರಿ ಮಹಲ್ ಮತ್ತೆ ವೀಕ್ಷಕರಿಂದ ಭರ್ತಿಯಾಗುತ್ತಿತ್ತು. ಆಗಲೇ ಲಾಕ್‍ಡೌನ್ ಈ ಚಿತ್ರಮಂದಿರಗಳ ಪಾಲಿಗೆ ಶಾಪವಾಯಿತು. ಕೊಡಗಿನ 5 ಚಿತ್ರಮಂದಿರಗಳಲ್ಲಿ ಅಂದಾಜು 1,600 ಆಸನಗಳಿದೆ. ಸುಮಾರು 50 ಸಿಬ್ಬಂದಿಗಳಿದ್ದಾರೆ. ಕೊಡಗಿನಲ್ಲಿ ಪ್ರತೀ ವಾರ ಕನಿಷ್ಟ 5-6 ಸಾವಿರ ಪ್ರೇಕ್ಷಕರು ಸಿನಿಮಾ ವೀಕ್ಷಿಸುತ್ತಾರೆ. ಇಷ್ಟ್ಟೂ ಪ್ರೇಕ್ಷಕರನ್ನು ಚಿತ್ರಮಂದಿರಗಳಿಂದ ಲಾಕ್‍ಡೌನ್ ದೂರ ಮಾಡಿದೆ. ರಾಜ್ಯದಲ್ಲಿ ಬಾಕಿ ಉಳಿದಿರುವ 320 ಚಿತ್ರಮಂದಿರಗಳ ಪಾಲಿಗೆ ಏಪ್ರಿಲ್ ಮೇ ತಿಂಗಳು ಭರ್ಜರಿ ಕಲೆಕ್ಷನ್ ನೀಡುವ ತಿಂಗಳು. ಈ ವರ್ಷ ಪುನೀತ್ ನಟನೆಯ ಯುವರತ್ನ, ದರ್ಶನ್ ನಟನೆಯ ರಾಬರ್ಟ್ ಸುದೀಪ್ ನಾಯಕನಾಗಿದ್ದ ಕೋಟಿಗೊಬ್ಬ-3, ಧ್ರುವಸರ್ಜಾ ನಟನೆಯ ಪೆÇಗರು, ತಮಿಳಿನ ವಿಜಯ್ ನಾಯಕನಾಗಿರುವ ಮಾಸ್ಟರ್, ಅಕ್ಷಯ್ ಕುಮಾರ್ ನಾಯಕನಾಗಿದ್ದ ಸೂರ್ಯವಂಶ ತೆರೆಕಾಣಬೇಕಿತ್ತು. ಆದರೆ ಕೊರೊನಾ ಲಾಕ್‍ಡೌನ್ ಎಲ್ಲಾ ಚಿತ್ರಗಳಿಗೆ ಮಧ್ಯಂತರವಾಯಿತು.

ಚಿತ್ರಮಂದಿರದ ಬಾಡಿಗೆಕಟ್ಟಿ, ಸಿಬ್ಬಂದಿಗಳ ವೇತನ ಕೊಟ್ಟು, ಸಿನಿಮಾ ವಿತರಕರಿಗೆ ಹಣ ನೀಡಿ, ಕಟ್ಟಡದ ಬಾಡಿಗೆ, ತೆರಿಗೆ ಕಟ್ಟಿ, ಜನರೇಟರ್ ವೆಚ್ಚ, ವಿದ್ಯುತ್ ಶುಲ್ಕ ನೀಡಲು ಪ್ರತಿನಿತ್ಯಕ್ಕೆ ಕನಿಷ್ಟ 12 ಸಾವಿರ ರೂ. ಅಗತ್ಯವಿದೆ. ಹೀಗಾಗಿ ಪ್ರತೀ ಪ್ರದರ್ಶನದ ಚಿತ್ರ ವೀಕ್ಷಿಸಲು ಕನಿಷ್ಟ 50-60 ಪ್ರೇಕ್ಷಕರು ಬೇಕೇಬೇಕು. ಮುಂದೇನು ಎಂಬ ಚಿಂತೆ ಪ್ರಾರಂಭವಾಗಿದೆ ಎಂದು ಕುಶಾಲನಗರದ ಸಿನಿಫ್ಲೆÉ್ಲಕ್ಸ್‍ನ ಮೋಹನ್ ಹೇಳಿದರು. ಕೇಬಲ್ ಟಿವಿಗಳಲ್ಲಿ ದಿನಕ್ಕೆ ಏನಿಲ್ಲವೆಂದರೂ 150 ಚಿತ್ರಗಳು ಪ್ರದರ್ಶಿತವಾಗುತ್ತಿದೆ. ಇದರ ಜತೆಗೆ ಲಾಕ್‍ಡೌನ್‍ನಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಜನರು ಅಮೆಜಾನ್ ವಿಡಿಯೋ, ನೆಟ್‍ಫ್ಲಿಕ್ಸ್, ಹಾಟ್‍ಸ್ಟಾರ್, ವೂಟ್‍ನಂಥ ಮನರಂಜನಾ ಮಾಧ್ಯಮಗಳಿಗೆ ಪರಿಚಯಿಸಿಕೊಂಡಿದ್ದಾರೆ. ಹೀಗೂ ಸಿನಿಮಾ ನೋಡಬಹುದು ಎಂದು ಜನರಿಗೆ ಗೊತ್ತಾಗಿಬಿಟ್ಟಿದೆ ಮೊಬೈಲ್‍ನಲ್ಲಿಯೇ ಮನರಂಜನೆ ಕುಳಿತಲ್ಲಿಗೆ ಜನರಿಗೆ ದೊರಕು ವಂತಾಗಿದೆ. ಹೀಗಿರುವಾಗ ಸಿನಿಮಾ ಉದ್ಯಮವೇ ಸಂಕಷ್ಟದಲ್ಲಿದೆ. ಚಿತ್ರಮಂದಿರ ಗಳ ಭವಿಷ್ಯ ನಿರ್ಧರಿಸಲೇ ಕನಿಷ್ಟ 5-6 ತಿಂಗಳು ಬೇಕಾದೀತು ಎಂದು ಕಾವೇರಿ ಮಹಲ್‍ನ ಪಾಲಾಕ್ಷಪ್ಪ ಅವರ ಮಗ ಚಿತ್ರೋದ್ಯಮ ಕುಟುಂಬದ ಮೂರನೇ ತಲೆಮಾರಿನ ನಿರ್ವಾಹಕ ರಜತ್ ಹೇಳಿದರು. ಮಳೆಗಾಲದಲ್ಲಿ ಹಲವು ದಿನ ಪ್ರದರ್ಶನವೇ ಇರುವುದಿಲ್ಲ ವರ್ಷದಲ್ಲಿ 8 ತಿಂಗಳು ಪ್ರದರ್ಶ ಕಂಡರೆ ಹೆಚ್ಚು ಎಂಬ ಸ್ಥಿತಿಯಿದೆ. ಇದೀಗ ಲಾಕ್‍ಡೌನ್‍ನಿಂದಾಗಿ ಮಾಲೀಕರಿಗೆ ಉಂಟಾಗಿರುವ ನಷ್ಟದ ಪ್ರಮಾಣ ಲಕ್ಷಗಟ್ಟಲೆ ಇದೆ ಎಂಬುದು ಇವರ ಅಳಲು. ಚಿತ್ರಮಂದಿರ ಗಳನ್ನು ನಷ್ಟದಲ್ಲಿಯೇ ನಿರ್ವಹಿಸುವುದಕ್ಕಿಂತ ಬೇರೆ ವಹಿವಾಟಿಗೆ ಹೋಗುವುದೇ ಕ್ಷೇಮ ಎಂದು ರಾಜ್ಯದ ಅನೇಕ ಚಿತ್ರಮಂದಿರಗಳ ಮಾಲೀಕರು ನಿರ್ಧರಿಸಿದ್ದಾರೆ. ಸಿನಿಮಾ ಉದ್ಯಮವೇ ಹಿಂದೆಂದೂ ಕಾಣದಷ್ಟು ನಷ್ಟದಲ್ಲಿದೆ. ಸದ್ಯಕ್ಕೆ ಸಿನಿಮಾ ಬಿಡುಗಡೆ ಯಾದರೂ ಜನರು ಚಿತ್ರವೀಕ್ಷಿಸಲು ಬರುತ್ತಾರೆ ಎಂಬ ನಿರೀಕ್ಷೆಯಂತೂ ಇಲ್ಲ. ಹೀಗಾಗಿ ಸ್ಟಾರ್ ನಾಯಕರ ಚಿತ್ರಗಳು 3-4 ತಿಂಗಳು ಬಿಡುಗಡೆಯಾಗುವುದಿಲ್ಲ. ಅಕ್ಟೋಬರ್ ನಲ್ಲಿ ತೆರೆಕಾಣಲಿ ರುವ ಯಶ್ ನಟನೆಯ ಕೆಜಿಎಫ್ 2 ಮೇಲೆ ಚಿತ್ರರಂಗ ಅಪಾರ ನಿರೀಕ್ಷೆ ಹೊಂದಿದೆ. ಉಳಿದ ಸಣ್ಣ ಪುಟ್ಟ ಚಿತ್ರಗಳು ಅಷ್ಟಕಷ್ಟೆ ಎಂದು ವಿಶ್ಲೇಷಿಸಿದರು ರಜತ್.

ಕೊನೆ ಹನಿ

ಹೀರೋ, ಹೀರೋಯಿನ್ ಎಂಟ್ರಿ ಕೊಟ್ಟಾಗ ಕೇಳುತ್ತಿದ್ದ ವಿಶಲ್ ಸದ್ದಿಲ್ಲ... ವಿಲನ್ ಆರ್ಭಟವಿಲ್ಲ ಕಾಮಿಡಿಯನ್ ಡೈಲಾಗ್ ಕೇಳಿ ಹೊಮ್ಮುತ್ತಿದ್ದ ನಗುವಿನ ಅಲೆಯಿಲ್ಲ, ಮಾದಕತೆಯ ಹಿರೋಯಿನ್ ಇಲ್ಲ, ಹತ್ತಾರು ರೌಡಿಗಳನ್ನು ಕ್ಷಣಮಾತ್ರದಲ್ಲಿ ಚಚ್ಚಿ ಬೀಳಿಸುತ್ತಿದ್ದ ಹೀರೋ ಕೂಡ ಪತ್ತೆಯಿಲ್ಲ. ಚಿತ್ರಮಂದಿರ ಗಳಲ್ಲಿ ಈಗ ಉಳಿದಿರುವುದು ಕತ್ತಲಕೂಪದಲ್ಲಿನ ಗಾಢ ಮೌನ, ಖಾಲಿ ಕುರ್ಚಿಗಳು, ಮಂಕಾದ ಪರದೆಗಳು. ತಮ್ಮ ಲಾಕ್‍ಡೌನ್ ಗೋಳಿನ ಕಥೆಗಳನ್ನು ಹೇಳಿಕೊಳ್ಳುತ್ತಿವೆ.