ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮ ಪರಿಶಿಷ್ಟ ಜಾತಿಯ ಕಾಲೋನಿಯಲ್ಲಿ ವಾಸವಿರುವ ಯೋಗೇಶ್ ಮಂಜುಳ ದಂಪತಿಯ ಮೊದಲ ಪುತ್ರ ಕಳೆದ 16 ವರ್ಷಗಳಿಂದ ಮಲಗಿದಲ್ಲೇ ಮಲಗಿದ್ದು, ತನ್ನ ತಾಯಿಯ ಪೋಷಣೆಯಲ್ಲಿ ರಕ್ಷಿಸಲ್ಪಟ್ಟಿದ್ದಾನೆ.

ಕಳೆದ 16 ವರ್ಷಗಳ ಹಿಂದೆ ಕೂಡಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಿಬ್ಬಂದಿಗಳು ಪಲ್ಸ್ ಪೋಲಿಯೊ ಕಾರ್ಯಕ್ರಮದ ಅಡಿಯಲ್ಲಿ ಈ ಮಗುವಿನ ಮನೆಗೆ ಹೋಗಿ ಹನಿ ಹಾಕುವ ಸಂದರ್ಭದಲ್ಲಿ ಆತನಿಗೆ ಮೆದುಳಿನಲ್ಲಿ ನೀರು ತುಂಬಿಕೊಳ್ಳುವ ರೋಗ ಪತ್ತೆಯಾಗಿತ್ತು. ಈ ಮಗು ಅಂದಿನಿಂದ ಇಂದಿನವರೆಗೆ ಮಲಗಿದಲ್ಲೇ ಮಲಗಿರುತ್ತಾನೆ. ಈ ಮಗುವಿನ ಲಾಲನೆ-ಪಾಲನೆ, ಮತ್ತು ಅವನ ಎಲ್ಲಾ ಕೆಲಸವನ್ನು ಮಲಗಿದ ಕಡೆಯೇ ತಾಯಿ ಸೇವೆ ಮಾಡುತ್ತಾ ಬಂದಿದ್ದಾರೆ.

ಈ ಮಗುವಿನ ಮನೆಯವರು ವೈದ್ಯಾಧಿಕಾರಿಗಳ ಸಲಹೆಯಂತೆ ರಾಜ್ಯದ ಎಲ್ಲಾ ಪ್ರತಿಷ್ಠಿತ ಆಸ್ಪತ್ರೆಗಳಿಗೆ ಅಲೆದು ಸುಸ್ತಾಗಿದ್ದಾರೆ. ಈ ಕಾಯಿಲೆಯ ಮಕ್ಕಳು ಜನನವಾದ ನಂತರ ಒಂದು ವರ್ಷಗಳು ಬದುಕುವುದೆ ಆಶ್ಚರ್ಯವಾಗಿರುತ್ತದೆ. ಆದರೆ ಈ ಕಾಯಿಲೆಗೆ ಆಪರೇಶನ್ ಮಾಡಿ ತಲೆಯಿಂದ ನೀರು ತೆಗೆದರೆ ಕೆಲ ಕಾಲ ಬದುಕಿಸಬಹುದು ಅಲ್ಲದೆ ತಲೆಯಿಂದ ನೀರು ಹೊಟ್ಟೆಯ ಹೊಕ್ಕಳದ ಮೂಲಕ ಹೊರಗೆ ಹೋಗುವ ವ್ಯವಸ್ಥೆಯನ್ನು ಆಪರೇಷನ್ ಮೂಲಕ ಮಾಡಬಹುದು. ಅದರಂತೆ ಮಗುವಿನ ಪೋಷಕರು ಎಲ್ಲಾ ಆಸ್ಪತ್ರೆಗಳನ್ನು ಸುತ್ತಿ, ಎಲ್ಲಾ ದೇವಾಲಯಗಳನ್ನು ಸುತ್ತಿ ಸಾಕಾಗಿದ್ದಾರೆ. ‘‘ಅವನು ಇರುವವರೆಗೆ ಅವನನ್ನು ಪೋಷಣೆ ಮಾಡುತ್ತೇನೆ’’ ಎಂದು ಅವನ ತಾಯಿ ತನ್ನ ಮನದಾಳದ ಅಳಲನ್ನು ತೋಡಿಕೊಂಡಿದ್ದಾರೆ. ವಿಷಾದನೀಯ ಬೆಳವಣಿಗೆಯೆಂದರೆ ಇಂತಹ ಬಾಧೆ ಕಾಡುತ್ತಿರುವ ಬಾಲಕನಿಗೆ ಅಂಗವಿಕಲ ಮಾಸಾಶನ ಕಳೆದ ಜನವರಿ ತಿಂಗಳಿನಿಂದ ಬಂದಿಲ್ಲ ಎನ್ನುವದು. ಈ ಬಾಲಕನ ದೇಹಭಾಗ ಅತಿ ಸಣ್ಣ ಮಗುವಿನ ಆಕಾರದಲ್ಲಿದ್ದು, ತಲೆ ಮಾತ್ರ ದಪ್ಪವಾಗಿದೆ ತಾಯಿಯ ಆರೈಕೆ ಆತನನ್ನು ಉಳಿಸಿದೆ.

-ಕೆ.ಕೆ. ನಾಗರಾಜಶೆಟ್ಟಿ.