ಸೋಮವಾರಪೇಟೆ, ಮೇ 12: ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದು, ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿದೆ.

ಸಮೀಪದ ಬಜೆಗುಂಡಿ ಗ್ರಾಮದ ಬಾಡಿಗೆ ಮನೆಯಲ್ಲಿ ವಾಸವಿದ್ದ ಚಿನ್ನಸ್ವಾಮಿ-ಪಳನಿಯಮ್ಮ ಎಂಬವರ ಪುತ್ರ ಸುಬ್ರಮಣಿ (33) ಎಂಬಾತ ನಿನ್ನೆ ರಾತ್ರಿ 11.30ರ ಸುಮಾರಿಗೆ ತನ್ನ ಮನೆಯಲ್ಲಿ ಸೀಮೆಎಣ್ಣೆ ಸುರಿದುಕೊಂಡು ಬೆಂಕಿಯೊಂದಿಗೆ ಒದ್ದಾಡುತ್ತಿದ್ದ ಸಂದರ್ಭ ಸ್ಥಳೀಯರು ನೆರವಿಗೆ ಧಾವಿಸಿದ್ದಾರೆ.

ದೇಹಕ್ಕೆ ಅಂಟಿದ್ದ ಬೆಂಕಿಯನ್ನು ನಂದಿಸಿ, ಜೀವನ್ಮರಣದ ಸ್ಥಿತಿಯಲ್ಲಿ ಸುಬ್ರಮಣಿಯನ್ನು ತಕ್ಷಣ ಆಂಬ್ಯುಲೆನ್ಸ್ ಮೂಲಕ ಮಡಿಕೇರಿಯ ಆಸ್ಪತ್ರೆಗೆ ಸಾಗಿಸಲಾಗಿದೆ. ಬೆಂಕಿಯ ತೀವ್ರತೆಗೆ ಸುಬ್ರಮಣಿಯ ದೇಹ ಭಾಗಶಃ ಸುಟ್ಟುಹೋಗಿದ್ದರಿಂದ ನಡುರಾತ್ರಿ 2 ಗಂಟೆಯ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.

ಬಜೆಗುಂಡಿಯ ಬಾಡಿಗೆ ಮನೆಯಲ್ಲಿ ವಿವಾಹಿತ ಮಹಿಳೆ ವಿದ್ಯಾ ಎಂಬಾಕೆಯೊಂದಿಗೆ ವಾಸವಿದ್ದ ಸುಬ್ರಮಣಿ ಕೂಲಿ ಕೆಲಸ ಮಾಡಿಕೊಂಡಿದ್ದ. ನಿನ್ನೆ ರಾತ್ರಿ ವಿದ್ಯಾಳೊಂದಿಗೆ ಗಲಾಟೆ ಮಾಡಿದ್ದು, ಈ ಸಂದರ್ಭ ವಿದ್ಯಾ ನೆರೆಮನೆಗೆ ತೆರಳಿದ್ದಾಳೆ. ಮನೆಯಲ್ಲೇ ಉಳಿದ ಸುಬ್ರಮಣಿ ಸೀಮೆಎಣ್ಣೆ ಸುರಿದು ಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ ಎನ್ನಲಾಗಿದೆ.

ಈ ಬಗ್ಗೆ ಸುಬ್ರಮಣಿಯ ತಾಯಿ ಪಳನಿಯಮ್ಮ ಅವರು ಸೋಮವಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆದರೆ ಸುಬ್ರಮಣಿ ಆತ್ಮಹತ್ಯೆ ಮಾಡಿಕೊಂಡಿಲ್ಲ. ಆತನ ಸಾವಿನ ಬಗ್ಗೆ ಹಲವು ಸಂಶಯಗಳಿದ್ದು, ತನಿಖೆ ನಡೆಸುವಂತೆ ಸ್ಥಳೀಯರು ಪೊಲೀಸರಲ್ಲಿ ಮನವಿ ಮಾಡಿದ್ದು, ಅದರಂತೆ ಅಸ್ವಾಭಾವಿಕ ಸಾವು ಎಂಬ ಪ್ರಕರಣ ದಾಖಲಿಸಿಕೊಂಡಿರುವ ಠಾಣಾಧಿಕಾರಿ ಶಿವಶಂಕರ್ ಅವರು, ತನಿಖೆ ಮುಂದುವರೆಸಿದ್ದಾರೆ.

ಮಡಿಕೇರಿಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ, ಸಹೋದರ ವಾಸವಿರುವ ಮಾದಾಪುರದಲ್ಲಿ ಅಂತ್ಯಕ್ರಿಯೆ ನಡೆಸಲಾಗಿದೆ.