ಕುಶಾಲನಗರ, ಮೇ 13: ಬೇಸಿಗೆ ಅವಧಿಯಲ್ಲಿ ಪ್ರವಾಸಿಗರಿಂದ ಗಿಜಿಗುಡುತ್ತಿದ್ದ ಪ್ರಖ್ಯಾತ ಪ್ರವಾಸಿ ತಾಣ ಕುಶಾಲನಗರ ಕಾವೇರಿ ನಿಸರ್ಗಧಾಮ ಲಾಕ್ಡೌನ್ ಹಿನ್ನೆಲೆ ಯಲ್ಲಿ ಕಳೆದ ಎರಡು ತಿಂಗಳಿಂದ ಪ್ರವಾಸಿಗರ ಆಗಮನವಿಲ್ಲದೆ ಬಿಕೋ ಎನ್ನುತ್ತಿದೆ. ಆದರೆ ಸಿಬ್ಬಂದಿಗಳು ಮಾತ್ರ ಒಳಗಡೆ ಕೇಂದ್ರದ ನಿರ್ವಹಣೆಯಲ್ಲಿ ತೊಡಗಿರುವುದು ಕಂಡುಬಂದಿದೆ.
8 ಜನ ದಿನಗೂಲಿ ನೌಕರರು ಸೇರಿದಂತೆ ಒಟ್ಟು 13 ಜನ ಪ್ರವಾಸಿ ಕೇಂದ್ರದ ನಿರ್ವಹಣೆ ನಡೆಸುತ್ತಿದ್ದು ಕೇಂದ್ರದಲ್ಲಿರುವ ಜಿಂಕೆ ಮತ್ತಿತರ ಪ್ರಾಣಿಗಳ ಆರೈಕೆಯಲ್ಲಿ ತೊಡಗಿಸಿ ಕೊಂಡಿದ್ದಾರೆ. 22 ಜಿಂಕೆಗಳು ಕೇಂದ್ರದಲ್ಲಿದ್ದು ಅವುಗಳಿಗೆ ಆಹಾರ ನೀಡುವುದು ಅಲ್ಲದೆ ಬೇಸಿಗೆ ಅವಧಿಯಾದ ಕಾರಣ ಯಾವುದೇ ಅವಘಡ ಉಂಟಾಗದಂತೆ ಎಚ್ಚರಿಕೆ ವಹಿಸುವಲ್ಲಿ ನೌಕರರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಈಗಾಗಲೆ ನಿಸರ್ಗಧಾಮದ ಅಭಿವೃದ್ಧಿ ಕಾರ್ಯ ಕೆಲವು ಸಮಯದಿಂದ ನಡೆಯುತ್ತಿದ್ದು ಎರಡು ಕಾಟೇಜ್ಗಳನ್ನು ನಿರ್ಮಿಸಲಾಗಿದೆ. ಇದರೊಂದಿಗೆ ನೂತನವಾಗಿ ಎರಡು ಪ್ಯಾರಾಬೋಲಗಳನ್ನು ನಿರ್ಮಾಣ ಮಾಡಲಾಗಿದೆ. ನೂತನ ಕಾಟೇಜ್ಗಳು ನದಿ ಮೇಲ್ಭಾಗದಲ್ಲಿ ಅತ್ಯಾಕರ್ಷಕವಾಗಿ ನಿರ್ಮಾಣಗೊಳ್ಳುತ್ತಿದ್ದು ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಸುಮಾರು 40 ಲಕ್ಷಕ್ಕೂ ಹೆಚ್ಚು ವೆಚ್ಚದಲ್ಲಿ ಅಲ್ಲಿನ ಅಭಿವೃದ್ಧಿ ಕಾಮಗಾರಿ ಮುಂದುವರೆದಿದೆ.
ಉಳಿದಂತೆ ಕಳೆದ ಮಳೆಗಾಲದಲ್ಲಿ ಮೂರು ಕಾಟೇಜ್ಗಳು ನೀರಿನಿಂದ ಹಾನಿಗೊಳಗಾಗಿದ್ದು ಈ ನೂತನ ಕಾಟೇಜ್ಗಳು ಸದ್ಯದಲ್ಲಿಯೇ ಲೋಕಾರ್ಪಣೆಗೊಳ್ಳಲಿದೆ ಎಂದು ಅರಣ್ಯ ಅಧಿಕಾರಿ ಅನನ್ಯಕುಮಾರ್ ಮಾಹಿತಿ ನೀಡಿದ್ದಾರೆ.
ವಾರಾಂತ್ಯದಲ್ಲಿ ಸಾವಿರಾರು ಪ್ರವಾಸಿಗರು ಆಗಮಿಸುವುದ ರೊಂದಿಗೆ ನಿಸರ್ಗಧಾಮದಲ್ಲಿ ಬೋಟಿಂಗ್ ಮತ್ತಿತರ ಚಟುವಟಿಕೆ ಗಳು ಬಿರುಸಿನಿಂದ ನಡೆಯುತ್ತಿತ್ತು. ಬೇಸಿಗೆ ಅವಧಿಯಲ್ಲಿ ರಾಜ್ಯ, ನೆರೆ ರಾಜ್ಯಗಳಿಂದ ನಿತ್ಯ ಎರಡು ಸಾವಿರಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡುತ್ತಿದ್ದು ಇದೀಗ ಲಾಕ್ ಡೌನ್ನಿಂದ ಇಡೀ ಕೇಂದ್ರ ಒಂದು ರೀತಿಯಲ್ಲಿ ಸ್ಥಬ್ಧಗೊಂಡಂತಿದೆ.
ಪ್ರವಾಸಿಗರ ಮೂಲಕ ಬರುತ್ತಿದ್ದ ಮಾಸಿಕ ಲಕ್ಷಾಂತರ ಆದಾಯ ಕೂಡ ಇಲ್ಲದಂತಾಗಿದೆ. ಆದರೂ ಸಮರ್ಪಕ ನಿರ್ವಹಣೆಗೆ ಸಿಬ್ಬಂದಿಗಳು ತಮ್ಮನ್ನು ತೊಡಗಿಸಿಕೊಂಡಿರುವ ದೃಶ್ಯ ಕಂಡು ಬಂದಿದೆ. ವರದಿ: ಚಂದ್ರಮೋಹನ್