ಸೋಮವಾರಪೇಟೆ, ಮೇ 13: ಕೊರೊನಾ ವೈರಾಣು ಆತಂಕದ ಈ ಸಂದರ್ಭದಲ್ಲಿ ಪ್ರತಿಯೋರ್ವರೂ ಆತ್ಮವಿಶ್ವಾಸದಿಂದ ಸಂಕಷ್ಟಗಳನ್ನು ಎದುರಿಸಬೇಕು ಎಂದು ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮದ ಶ್ರೀ ಬೋಧಸ್ವರೂಪಾನಂದ ಸ್ವಾಮೀಜಿ ಕರೆ ನೀಡಿದರು.

ಮಾಧ್ಯಮ ಸ್ಪಂದನ ತಂಡದ ಕೋರಿಕೆಯ ಮೇರೆಗೆ ಇಲ್ಲಿನ ಸೋಮೇಶ್ವರ ದೇವಾಲಯದಲ್ಲಿ, ಪಟ್ಟಣ ಸುತ್ತಮುತ್ತಲ ವ್ಯಾಪ್ತಿಯ 32 ಮಂದಿ ಅರ್ಚಕರಿಗೆ ಆಶ್ರಮದಿಂದ ಆಹಾರ ಸಾಮಗ್ರಿಗಳ ಕಿಟ್‍ಗಳನ್ನು ವಿತರಿಸಿ ಅವರು ಮಾತನಾಡಿದರು.

ಲಾಕ್‍ಡೌನ್‍ನಿಂದಾಗಿ ದೇವಾಲಯಗಳು ಬಂದ್ ಆಗಿದ್ದು, ಅರ್ಚಕ ವೃಂದ ಸಂಕಷ್ಟಕ್ಕೆ ಸಿಲುಕಿದೆ. ಭಗವಂತ ಮತ್ತು ಭಕ್ತರ ನಡುವಿನ ಕೊಂಡಿಯಾಗಿರುವ ಅರ್ಚಕರು ಹೆಚ್ಚಿನ ಆತ್ಮವಿಶ್ವಾಸವನ್ನು ಹೊಂದಿರಬೇಕು. ಜೀವನದಲ್ಲಿ ಉನ್ನತ ಮೌಲ್ಯಗಳನ್ನು ಅಳವಡಿಸಿಕೊಂಡು ಭಗವಂತನಲ್ಲಿ ಅಚಲ ಶ್ರದ್ಧೆ ಹೊಂದಿರಬೇಕು. ಸಂಕಷ್ಟಗಳು ಆದಷ್ಟು ಶೀಘ್ರ ದೂರಾಗಲೆಂದು ಸರ್ವರೂ ಸಮಾಜದ ಪರವಾಗಿ ಪ್ರಾರ್ಥಿಸಬೇಕು ಎಂದು ಕಿವಿಮಾತು ನುಡಿದರು.

ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಬಿ.ಜಿ. ಅನಂತಶಯನ ಮಾತನಾಡಿ, ಇತ್ತೀಚೆಗೆ ಅರ್ಚಕ ವೃಂದದ ಬಗ್ಗೆ ಅಪಹಾಸ್ಯ ಮಾಡುವ ಪ್ರವೃತ್ತಿಗಳು ಹೆಚ್ಚುತ್ತಿರುವದು ದುರದೃಷ್ಟ. ಮಠದಿಂದ ಅರ್ಚಕರಿಗೆ ಧೈರ್ಯ ತುಂಬುವ ಕಾರ್ಯ ಆಗುತ್ತಿರುವದು ಶ್ಲಾಘನೀಯ ಎಂದರು.

ಮಾಧ್ಯಮ ಸ್ಪಂದನ ಬಳಗದ ಎಸ್.ಎ. ಮುರುಳೀಧರ್ ಅವರು, ಬಳಗದಿಂದ ಜಿಲ್ಲೆಯ ವಿವಿಧ ಭಾಗಗಳಲ್ಲಿ 90ಕ್ಕೂ ಅಧಿಕ ಮಂದಿಗೆ ನೆರವು ಒದಗಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ 32 ಮಂದ ಅರ್ಚಕರಿಗೆ ಅಕ್ಕಿ, ದಿನಸಿ, ತರಕಾರಿಯ ಕಿಟ್‍ಗಳನ್ನು ವಿತರಿಸಲಾಯಿತು. ಈ ಸಂದರ್ಭ ದೇವಾಲಯ ಸಮಿತಿ ಅಧ್ಯಕ್ಷ ಶ್ರೀನಿವಾಸ್, ಗೋಪೇಂದ್ರನಂದಜೀ, ಜಾನಪದ ಪರಿಷತ್‍ನ ಕುಶಾಲಪ್ಪ, ಸಂಪತ್‍ಕುಮಾರ್, ರೋಟರಿ ಸಂಸ್ಥೆಯ ಸದಾನಂದ್, ದೇವಾಲಯ ಸಮಿತಿಯ ಎಸ್.ಡಿ. ವಿಜೇತ್, ರವಿಶಂಕರ್, ರಾಜು, ಪದ್ಮನಾಭ, ಶ್ಯಾಂ ಸುಂದರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಇದೇ ಸಂದರ್ಭ ದೇವಾಲಯ ಸಮಿತಿಯ ವತಿಯಿಂದ ಬೋಧಸ್ವರೂಪಾನಂದಜೀ ಅವರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.