ವೀರಾಜಪೇಟೆ, ಮೇ 13: ಕೇರಳದ ಕಣ್ಣೂರು ಜಿಲ್ಲೆಯ ಕಲ್ಲೇಟಿ ಎಂಬಲ್ಲಿ ಕಲ್ಲು ಕೆಲಸ ನಿರತ, ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಹನ್ನೊಂದು ಮಂದಿ ಕಾರ್ಮಿಕರನ್ನು, ಇಂದು ಜಿಲ್ಲಾಡಳಿತದಿಂದ ತವರಿಗೆ ಕಳುಹಿಸಿಕೊಡಲಾಯಿತು. ಬೆಳಿಗ್ಗೆ ಕೇರಳದಿಂದ ಮಾಕುಟ್ಟ ಗಡಿ ತಲಪಿದ ಈ ಕಾರ್ಮಿಕರ ಬಗ್ಗೆ ಅಲ್ಲಿನ ಕರ್ತವ್ಯ ನಿರತ ಪೊಲೀಸರು ಮೇಲಧಿಕಾರಿಗಳ ಗಮನಕ್ಕೆ ತಂದರು.

ಈ ವೇಳೆ ವೀರಾಜಪೇಟೆ ಪೊಲೀಸ್ ವೃತ್ತ ನಿರೀಕ್ಷಕ ಕ್ಯಾತೇಗೌಡ ಹಾಗೂ ಕಂದಾಯ ನಿರೀಕ್ಷಕರ ಸಹಿತ ಆರೋಗ್ಯ ಕಾರ್ಯಕರ್ತರು ತೆರಳಿ ತುರ್ತು ತಪಾಸಣೆಗೆ ಒಳಪಡಿಸಿದ್ದಾರೆ. ವೀರಾಜಪೇಟೆ ಉಪವಿಭಾಗದ ಡಿವೈಎಸ್‍ಪಿ ಜಯಕುಮಾರ್ ಜಿಲ್ಲಾಧಿಕಾರಿಗಳ ಗಮನ ಸೆಳೆದಿದ್ದಾರೆ.

ಆ ಮೇರೆಗೆ ಈ ಕಾರ್ಮಿಕರಿಗೆ ಅಗತ್ಯ ಸೌಲಭ್ಯ ಒದಗಿಸುವದರೊಂದಿಗೆ, ದೃಢೀಕರಣ ಪರವಾನಗಿ ಸಹಿತ ಖಾಸಗಿ ಮಿನಿ ಬಸ್‍ನಲ್ಲಿ ಶಿವಮೊಗ್ಗಕ್ಕೆ ಕಳುಹಿಸಲು ಕ್ರಮಕೈಗೊಳ್ಳಲಾಗಿದೆ. ಒಂಭತ್ತು ಪುರುಷರು ಹಾಗೂ ತಾಯಿ - ಮಗು ಸಹಿತ 11 ಮಂದಿ ತವರು ಜಿಲ್ಲೆಗೆ ಪ್ರಯಾಣಿಸಿದ್ದಾರೆ.