ಮಡಿಕೇರಿ, ಮೇ 12: ಕರ್ನಾಟಕ ರಾಜ್ಯ ಸರ್ಕಾರದ ತಾ. 12.5.2020 ರ ಪರಿಷ್ಕೃತ ಮಾರ್ಗಸೂಚಿಯಂತೆ ಇನ್ನು ಮುಂದೆ ಸೇವಾಸಿಂಧು ಪೋರ್ಟಲ್ ಮೂಲಕ ಸ್ವೀಕೃತವಾಗುವ ಈ ಕೆಳಕಂಡ ಕಾರಣಗಳಿಗೆ ಸಂಬಂಧಿಸಿದ ಅರ್ಜಿಗಳಿಗೆ ಮಾತ್ರ ಅನುಮತಿಸಿ ಕರ್ನಾಟಕ ರಾಜ್ಯಕ್ಕೆ ಆಗಮಿಸಲು ಅವಕಾಶ ನೀಡಲಾಗುವುದು.ಕುಟುಂಬದ ಸದಸ್ಯರು ಮೃತಪಟ್ಟ ಸಂದರ್ಭದಲ್ಲಿ ಕರ್ನಾಟಕ ರಾಜ್ಯಕ್ಕೆ ಹಿಂತಿರುಗುವ ಅನಿವಾರ್ಯತೆ ಇರುವವರು, ತುರ್ತು ವೈದ್ಯಕೀಯ, ಮಾರಣಾಂತಿಕ ಖಾಯಿಲೆಯ ಚಿಕಿತ್ಸೆಗಾಗಿ. ಗರ್ಭಿಣಿ ಮಹಿಳೆಯರು, ವಯೋವೃದ್ಧರು. ವಲಸೆ ಕಾರ್ಮಿಕರು, ಕೆಲಸ ಕಳೆದುಕೊಂಡ ಕಾರ್ಮಿಕರು, ಶೈಕ್ಷಣಿಕ ಸಂಸ್ಥೆ, ಹಾಸ್ಟೆಲ್‍ಗಳು ಮುಚ್ಚಿದ ಕಾರಣ ಹಿಂತಿರುಗುವ ವಿದ್ಯಾರ್ಥಿಗಳು, ಲಾಕ್ ಡೌನ್ ನಿಂದ ಸಿಲುಕಿದ ಪ್ರವಾಸಿಗರು, ಯಾತ್ರಾರ್ಥಿಗಳು, ವಿದೇಶದಿಂದ ಆಗಮಿಸಿ, ಹೊರ ರಾಜ್ಯದ ವಿಮಾನ ನಿಲ್ದಾಣಗಳಲ್ಲಿ ಇಳಿದು, ಕರ್ನಾಟಕ ರಾಜ್ಯಕ್ಕೆ ಹಿಂತಿರುಗುವವರು. ಮೇಲಿನಂತೆ ಆಗಮಿಸುವವರು ಕಡ್ಡಾಯವಾಗಿ 14 ದಿನಗಳ ಸಾಂಸ್ಥಿಕ ತಡೆಯಲ್ಲಿ ಇರಬೇಕಾಗಿರುತ್ತದೆ.
ಮೇಲೆ ತಿಳಿಸಿದ ಕಾರಣಗಳಂತೆ ಆಗಮಿಸಲು ಇಚ್ಚಿಸಿದವರು, ಸದರಿ ಅಂಶವನ್ನು ಸಾಬೀತುಪಡಿಸುವ ಪೂರಕ ದಾಖಲೆಗಳನ್ನು ಸೇವಾಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸುವ ವೇಳೆ ಅಪ್ ಲೋಡ್ ಮಾಡತಕ್ಕದ್ದು. ಸದರಿ ದಾಖಲೆಗಳ ಆಧಾರದ ಮೇಲೆ ಅನುಮತಿ ನೀಡುವಲ್ಲಿ ಕ್ರಮವಹಿಸಲಾಗುವುದು ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.