ಮಡಿಕೇರಿ, ಮೇ 11: ಜಿಲ್ಲೆಯಲ್ಲಿರುವ ಆರ್ಮಿ ಕ್ಯಾಂಟೀನ್‍ನಲ್ಲಿ ನಿನ್ನೆಯಿಂದ ಹಲವು ನಿರ್ಬಂಧಗಳ ಪಾಲನೆಯೊಂದಿಗೆ ಸಾಮಗ್ರಿ ವಿತರಣೆ ಮಾಡಲಾಗುತ್ತಿದೆ. ಮಡಿಕೇರಿಯ ಗೋಲ್ಡನ್ ಪಾಮ್ ಕ್ಯಾಂಟೀನ್‍ನಲ್ಲಿ ದಿನವೊಂದಕ್ಕೆ ಕೇವಲ ನೂರು ಮಂದಿಗೆ ಒಳಪಟ್ಟಂತೆ ಸಾಮಗ್ರಿ ನೀಡಲಾಗುತ್ತಿದೆ.ಮೊಬೈಲ್ ಮೂಲಕ ನಿರ್ದಿಷ್ಟ ಕಾರ್ಡ್‍ದಾರರಿಗೆ (ನಿಗದಿತ) ಮೊಬೈಲ್ ಸಂದೇಶದ ಮೂಲಕ ಮಾಹಿತಿ ನೀಡಲಾಗುತ್ತಿದೆ. ಕಾರ್ಡ್‍ದಾರರು ಕಡ್ಡಾಯವಾಗಿ ಸಾಮಾಜಿಕ ಅಂತರ ಪಾಲಿಸುವುದು, ಸ್ಯಾನಿಟೈಸರ್ ಬಳಸುವುದರೊಂದಿಗೆ, ಮಾಸ್ಕ್ ಧರಿಸಿರಬೇಕಿದೆ. ಸ್ವತಃ ಕ್ಯಾಂಟೀನ್ ವ್ಯವಸ್ಥಾಪಕ ಮುಂಡ್ಯೋಳಂಡ ಲೇ.ಕ. ಅಜಿತ್ ಸುಬ್ಬಯ್ಯ ಮುಂದಾಳತ್ವದಲ್ಲಿ ಆಗಮಿಸುವವರ ದೇಹದ (ಮೊದಲ ಪುಟದಿಂದ) ಉಷ್ಣಾಂಶವನ್ನು ಪರಿಶೀಲಿಸಿ (ಜ್ವರ ತಪಾಸಣೆ) ಆವರಣದೊಳಕ್ಕೆ ಬಿಡಲಾಗುತ್ತಿದೆ. ಕಟ್ಟಡದೊಳಕ್ಕೂ ಒಂದೆರಡು ಮಂದಿಯನ್ನು ಮಾತ್ರ ಕಳುಹಿಸಿ ಅವರು ಮರಳಿದ ಬಳಿಕ ಇತರರಿಗೆ ಅವಕಾಶ ಕಲ್ಪಿಸಲಾಗುತ್ತಿದೆ.
ಮದ್ಯ ಸರಬರಾಜಿಗೆ ಸಂಬಂಧಿಸಿದಂತೆ ಯಾವುದೇ ಸೂಚನೆ ಮೇಲ್ಮಟ್ಟದಿಂದ ಬಂದಿಲ್ಲ ಎಂದು ವ್ಯವಸ್ಥಾಪಕ ಸುಬ್ಬಯ್ಯ ತಿಳಿಸಿದ್ದಾರೆ.
ವೀರಾಜಪೇಟೆಯ ಕ್ಯಾಂಟೀನ್‍ನಲ್ಲೂ ಸ್ಥಳಾವಕಾಶದ ಕೊರತೆಯ ನಡುವೆಯೂ ನಿರ್ದಿಷ್ಟ ಕ್ರಮ ಅನುಸರಿಸಲಾಗುತ್ತಿದೆ.