ಮಡಿಕೇರಿ, ಮೇ 9: ಮಡಿಕೇರಿಯ ಕೊಡಗು ವಿಜ್ಞಾನ ಸಂಸ್ಥೆಯ ಬೋಧಕ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗವು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಆಶಯದಂತೆ ಕೇಂದ್ರ ಸರಕಾರದ ರಾಷ್ಟ್ರೀಯ ಆರೋಗ್ಯ ಅಭಿಯಾನ ‘ಲಕ್ಷ್ಯ’ ಕಾರ್ಯಕ್ರಮದಡಿ ರಾಜ್ಯದಲ್ಲಿ ಶೇ. 90ರಷ್ಟು ಸುಧಾರಣೆಗೊಂಡಿದ್ದು, ಕೇಂದ್ರದಿಂದ ಶೇ. 97 ರಷ್ಟು ಮಾನ್ಯತೆ ಪಡೆದಿರುವ ಅತ್ಯುತ್ತಮ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಭಾಜನವಾಗಿದೆ.ಈ ದಿಸೆಯಲ್ಲಿ ಇಲ್ಲಿನ ಹೆರಿಗೆ ಆಸ್ಪತ್ರೆಗೆ ‘ಲಕ್ಷ್ಯ’ ಕಾರ್ಯಕ್ರಮದಡಿ ಅತ್ಯುತ್ತಮ ನಿರ್ವಹಣೆಗಾಗಿ ಪ್ಲಾಟಿನಂ ಬ್ಯಾಡ್ಜ್ (ಬಿಳಿ ಬಂಗಾರ) ಪಡೆದ ಪ್ರಥಮ ಆಸ್ಪತ್ರೆಯೆಂದು ಪರಿಗಣಿಸಲ್ಪಟ್ಟಿದೆ.ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮುಖ್ಯಸ್ಥರಾಗಿರುವ ಡಾ. ಕೆ.ಬಿ. ಕಾರ್ಯಪ್ಪ, ಆಸ್ಪತ್ರೆಯ ಅಧೀಕ್ಷಕ ಬಸವರಾಜ್, ಪ್ರಸೂತಿ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ್ ನೇತೃತ್ವದಲ್ಲಿ ‘ಲಕ್ಷ್ಯ’ ಕಾರ್ಯಕ್ರಮದಡಿ ಹೆರಿಗೆ ವಿಭಾಗದಲ್ಲಿ ಅತ್ಯಂತ ಸುಧಾರಣಾ ವ್ಯವಸ್ಥೆ ಕೈಗೊಳ್ಳಲಾಗಿದೆ. ಡಾ. ಮಂಜುನಾಥ್ ಅವರ ಪ್ರಕಾರ ಪ್ರಧಾನಿ ಮೋದಿ ಆಶಯದಂತೆ ಹೆರಿಗೆಗೆ ಬರುವವರನ್ನು ಅತ್ಯಂತ ಕಾಳಜಿಯೊಂದಿಗೆ ಮಮತೆಯಿಂದ ನೋಡಿಕೊಳ್ಳಲಾಗುತ್ತಿದೆ. ಜೊತೆಗೆ ಎಲ್ಲರೂ ಒಂದು ತಂಡವಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ಈ ಸಾಧನೆ ಲಭಿಸುವಂತಾಗಿದೆ.

ಗರ್ಭಿಣಿಯರಿಗೆ ಹೆರಿಗೆ ನೋವು ಕಾಣಿಸಿಕೊಳ್ಳುವ ಸಂದರ್ಭ ದಾದಿಯರು, ಆಯಾಗಳ ಸಹಿತ ವೈದ್ಯರು ತೀವ್ರ ನಿಗಾವಹಿಸಿ ಯಾವುದೇ ಆತಂಕಕ್ಕೆ ಒಳಗಾಗದಂತೆ ಸಹಜವಾಗಿ ಅಥವಾ ಶಸ್ತ್ರಚಿಕಿತ್ಸೆ ಅಗತ್ಯವಿರುವಲ್ಲಿ ಆ ಮುಖಾಂತರ ಶಿಶುವಿನ ಜನನ ಮಾಡಿಸಲಾಗುತ್ತಿದೆ.

ತೀವ್ರ ನಿಗಾಘಟಕ: 2016-17 ರಿಂದ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಇಳಿಮುಖಗೊಂಡು, ಸಹಜ ಹೆರಿಗೆ ಮಾಡಿಸುವತ್ತ ಸುಧಾರಣೆಗಾಗಿ ಮುಖ್ಯಮಂತ್ರಿಗಳ ‘ಚಾಲೆಂಜ್ ಫಂಡ್’ ಯೋಜನೆಯಲ್ಲಿ ರೂ. 1.5 ಕೋಟಿ ಅನುದಾನ ಕೂಡ ಲಭಿಸಿದೆ. ಈ ಮೊತ್ತದಿಂದ ತೀವ್ರ ನಿಗಾ ಘಟಕಕ್ಕೆ, ಸುಸಜ್ಜಿತ 5 ಹಾಸಿಗೆಯುಳ್ಳ ಪ್ರಸೂತಿ ಮತ್ತು ಸ್ತ್ರೀರೋಗ ಅವಲಂಬನೆ ಘಟಕ (ಹೆಚ್‍ಡಿಯು) ಸ್ಥಾಪಿಸಲಾಗಿದೆ.

ಅಲ್ಲದೆ ಸರಕಾರಿ ಆಸ್ಪತ್ರೆಯಲ್ಲಿ ಅತ್ಯಂತ ಸುಧಾರಣೆಯೊಂದಿಗೆ ವೈದ್ಯರು, ದಾದಿಯರು, ಗರ್ಭಿಣಿ ಯರಿಗೆ ವಿಶ್ರಾಂತಿ ಕೊಠಡಿ ಸಹಿತ ಆಪ್ತ ಸಲಹೆಯು ಆಗಿಂದಾಗ್ಗೆ ತಜ್ಞ ವೈದ್ಯರಿಂದ ನೀಡಲ್ಪಡುವ ವ್ಯವಸ್ಥೆ ರೂಪಿಸಲಾಗಿದೆ. ಪ್ರಸ್ತುತ ಕೊರೊನಾ ನಡುವೆಯೂ ಒತ್ತಡವಿಲ್ಲದೆ ಗರ್ಭಿಣಿ ಯರು, ಬಾಣಂತಿಯರು, ಶಿಶುಗಳ ರಕ್ಷಣೆಗೆ ಕ್ರಮ ತೆಗೆದುಕೊಳ್ಳಲಾಗಿದೆ.