ಕುಶಾಲನಗರ, ಮೇ 10 : ಕೊರೊನಾ ಹಿನ್ನೆಲೆ ಲಾಕ್‍ಡೌನ್ ನಡುವೆ ಕುಶಾಲನಗರ ಸೇರಿದಂತೆ ಎಲ್ಲೆಡೆ ವ್ಯಾಪಾರ ವಹಿವಾಟುಗಳು ಸಂಪೂರ್ಣ ಸ್ಥಗಿತಗೊಂಡ ಬೆನ್ನಲ್ಲೇ ಕುಶಾಲನಗರದ ಕೆಲವು ಉದ್ಯಮಿಗಳು ತಮ್ಮ ವಹಿವಾಟನ್ನು ಸ್ಥಗಿತಗೊಳಿಸಿ ವಲಸೆ ಹೋಗಲು ಪ್ರಾರಂಭಿಸಿರುವ ವಿದ್ಯಾಮಾನಗಳು ಕಾಣತೊಡಗಿವೆ. ಸದಾ ಪ್ರವಾಸಿಗರಿಂದ ಗಿಜಿಗುಡುತ್ತಿದ್ದ ಕುಶಾಲನಗರದಲ್ಲಿ ಪ್ರವಾಸಿಗರು ರೂಂಗಾಗಿ ಮುಂಗಡ ಬುಕ್ಕಿಂಗ್ ಕಾದಿರಿಸುವುದರೊಂದಿಗೆ ಜಿಲ್ಲೆಗೆ ಆಗಮಿಸಿ ದುಂಬಾಲು ಬೀಳುತ್ತಿದ್ದ ದಿನಗಳು ಇದ್ದವು. ಆದರೆ ಈ ಬಾರಿ ಏಪ್ರಿಲ್, ಮೇ ತಿಂಗಳು ಇದಕ್ಕೆ ತದ್ವಿರುದ್ಧವಾಗಿ ಸಂಪೂರ್ಣ ಲಾಕ್‍ಡೌನ್‍ನೊಂದಿಗೆ ಜನಜೀವನ ಪ್ರವಾಸಿಗರ ಓಡಾಟ ಸ್ತಬ್ಧಗೊಳ್ಳುವು ದರೊಂದಿಗೆ ಪ್ರವಾಸೋದ್ಯಮವನ್ನೇ ನೆಚ್ಚಿ ಕುಳಿತಿದ್ದ ಹೋಂಸ್ಟೇ, ಲಾಡ್ಜ್, ಪ್ರವಾಸಿ ಕೇಂದ್ರಗಳ ವಹಿವಾಟು ದಾರರು ಬರಿಗೈಯಲ್ಲಿ ಮನೆಯಲ್ಲೇ ಕೂರಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದ್ದು ಆತಂಕಕಾರಿ ಬೆಳವಣಿಗೆಯಾಗಿದೆ.ಇತ್ತ ಕಟ್ಟಡಕ್ಕೆ ಬಾಡಿಗೆಯನ್ನು ಕಟ್ಟಲಾಗದೆ ನೌಕರರಿಗೆ ಸಂಬಳ ನೀಡಲು (ಮೊದಲ ಪುಟದಿಂದ) ಸಂಕಷ್ಟವಾಗುವುದರೊಂದಿಗೆ ಕುಶಾಲನಗರದ ಕೆಲವು ಹೋಂಸ್ಟೇಗಳು ಬೀಗ ಜಡಿಯುವುದರೊಂದಿಗೆ ಕೆಲವೊಂದು ಕೇಂದ್ರಗಳನ್ನು ಖಾಲಿ ಮಾಡುತ್ತಿರುವ ದೃಶ್ಯ ಗೋಚರಿಸಿದೆ. ಕುಶಾಲನಗರ ಪಟ್ಟಣದ ಮಡಿಕೇರಿ ರಸ್ತೆಯಲ್ಲಿರುವ ಹೋಂಸ್ಟೇ ಮಾಲೀಕರೊಬ್ಬರು ಕಳೆದ 5 ವರ್ಷಗಳಿಂದ ತಿಂಗಳಿಗೆ ರೂ. 15 ಸಾವಿರದಂತೆ ಬಾಡಿಗೆ ಪಡೆದು ಪ್ರವಾಸಿಗರಿಗೆ ಆತಿಥ್ಯ ನೀಡುವ ಕೆಲಸದಲ್ಲಿ ತೊಡಗಿದ್ದರು. ಕಳೆದ ಹಲವು ತಿಂಗಳುಗಳಿಂದ ಲಾಕ್‍ಡೌನ್ ಹಿನ್ನೆಲೆ ಬೀಗ ಜಡಿಯುವುದರೊಂದಿಗೆ ನೌಕರರನ್ನು ನೋಡಿಕೊಳ್ಳುವುದೇ ದೊಡ್ಡ ಹೊರೆಯಾಗಿ ಪರಿಣಮಿಸಿತ್ತು. ಇದರಿಂದ ನೊಂದ ಉದ್ಯಮಿ ಧನರಾಜ್ ಎಂಬವರು ತನ್ನ ಉದ್ಯಮವನ್ನೇ ತೊರೆದು ಮತ್ತೆ ತನ್ನೂರಾದ ಕಣಗಾಲಿಗೆ ತೆರಳಲು ನಿಶ್ಚಯಿಸಿ ಹೊಟೇಲ್ ಖಾಲಿ ಮಾಡುತ್ತಿದ್ದ ದೃಶ್ಯ ಕಂಡುಬಂದಿತು.

5 ವರ್ಷಗಳ ಕಾಲ ಪ್ರವಾಸಿಗರಿಗೆ ಉಳಿದುಕೊಳ್ಳಲು 5 ಕೊಠಡಿಗಳನ್ನು ನೀಡುವ ಮೂಲಕ ಪ್ರವಾಸೋದ್ಯಮ ದಲ್ಲಿ ತೊಡಗಿಸಿಕೊಂಡಿದ್ದೆ ಎನ್ನುವ ಧನರಾಜ್ ಇದೀಗ ತಿಂಗಳ ಬಾಡಿಗೆ ಕಟ್ಟಲು ಅಸಾಧ್ಯವಾದ ಪರಿಸ್ಥಿತಿ ಎದುರಾಗಿದೆ. ಈ ಹಿನ್ನೆಲೆ ಈ ಉದ್ಯಮವನ್ನು ತೊರೆದು ಮತ್ತೆ ಕೃಷಿ ಚಟುವಟಿಕೆ ಯಲ್ಲಿ ತೊಡಗಿಸಿಕೊಳ್ಳುವುದಾಗಿ ‘ಶಕ್ತಿ’ಗೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಕುಶಾಲನಗರ ಪಟ್ಟಣದಲ್ಲಿ ಕೆಲವರು ಸ್ವಂತ ಕಟ್ಟಡದಲ್ಲಿ ಲಾಡ್ಜ್ ಮತ್ತು ಹೊಟೇಲ್ ಉದ್ಯಮ ನಡೆಸುತ್ತಿದ್ದರೆ ಬಹುತೇಕರು ಬಾಡಿಗೆ ಆಧಾರದಲ್ಲಿ ನಡೆಸುತ್ತಿರುವುದು ಸಾಮಾನ್ಯ. ಸುತ್ತಮುತ್ತಲ ಹೋಂಸ್ಟೇಗಳು ಸಂಪೂರ್ಣ ಬೀಗ ಜಡಿಯಲ್ಪಟ್ಟಿದ್ದು ಇನ್ನೊಂದೆಡೆ ಕುಶಾಲನಗರದ ಸಮೀಪದ ಕಾವೇರಿ ನಿಸರ್ಗಧಾಮ ಪ್ರವಾಸಿ ಕೇಂದ್ರದ ಬಳಿಯ ನೂರಕ್ಕೂ ಅಧಿಕ ಅಂಗಡಿ ಮುಂಗಟ್ಟುಗಳು ಕೂಡ ಲಾಕ್‍ಡೌನ್‍ನಿಂದ ಮುಚ್ಚುವುದರೊಂದಿಗೆ ಬಿಕೋ ಎನ್ನುತ್ತಿವೆ. ಈ ಮೂಲಕ ನೂರಾರು ಉದ್ಯಮಿಗಳು, ನೌಕರರು ಮತ್ತು ಅವಲಂಬಿತರು ದಿನನಿತ್ಯದ ಜೀವನ ನಡೆಸಲು ದಾರಿ ಕಾಣದಂತಾಗಿದೆ.

ದುಬಾರೆ ಪ್ರವಾಸಿ ಕೇಂದ್ರದಲ್ಲಿ ಕೂಡ ಇದೇ ಸ್ಥಿತಿ ಎದುರಾಗಿದ್ದು ಬಹುತೇಕ ನೌಕರರು, ಕಾರ್ಮಿಕರು ನಿತ್ಯ ಊಟ, ತಿಂಡಿಗೆ ಪರದಾಡಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ ಎಂದು ಹೊಟೇಲ್ ಉದ್ಯಮಿಗಳು ತಿಳಿಸಿದ್ದಾರೆ.

ಈ ಪರಿಸ್ಥಿತಿಯಿಂದ ಚೇತರಿಸಿಕೊಳ್ಳಲು ಸಾಧ್ಯವೇ ಇಲ್ಲ ಅನ್ನುವುದು ಕುಶಾಲನಗರ ಹೊಟೇಲ್ ಉದ್ಯಮಿ ಬಿ.ಎ. ಭಾಸ್ಕರ್ ಅವರ ಅಭಿಪ್ರಾಯವಾಗಿದ್ದು, ಇದರಿಂದ ಸಾವಿರಾರು ಜನರು ಬೀದಿಗೆ ಬೀಳುವಂತಹ ಪರಿಸ್ಥಿತಿ ಎದುರಾಗುವ ಆತಂಕವಿದೆ ಎಂದಿದ್ದಾರೆ. ಉದ್ಯಮದ ಹಿನ್ನೆಲೆ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದು ವ್ಯಾಪಾರ ಅಭಿವೃದ್ಧಿ ಬಗ್ಗೆ ಯೋಜನೆ ರೂಪಿಸಿದ ಬಹುತೇಕರಿಗೆ ಮುಂದಿನ ದಿನಗಳು ಸಂಕಷ್ಟದ ದಿನಗಳಾಗಲಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. - ಚಂದ್ರಮೋಹನ್