ಮಡಿಕೇರಿ, ಮೇ 10: ನಿನ್ನೆ ದಿನ ಗಾಳಿಬೀಡು ವಿನ ಬಳಿ ಅಲೆದಾಡುತ್ತಿದ್ದ ವ್ಯಕ್ತಿಯನ್ನು ಬ್ರ್ರೆಝಿಲ್ ದೇಶದವನೆಂದು ತಿಳಿದು ಮಡಿಕೇರಿಯ ಕೋವಿಡ್-19 ಆಸ್ಪತ್ರೆಗೆ ಸೇರಿಸಿ ಸಂಪರ್ಕ ತಡೆಗೆ ಒಳಪಡಿಸಲಾಗಿದೆ. ಆದರೆ, ಈ ವ್ಯಕ್ತಿ ಇಟೆಲಿ ದೇಶದ ನಿವಾಸಿ ಎಂದು ಇಂದು ಕೋವಿಡ್ ಆಸ್ಪತ್ರೆಯ ಮೆಡಿಕಲ್ ಸೂಪರಿಂಟೆಂಡೆಂಟ್ ಡಾ. ಎ.ಜೆ. ಲೋಕೇಶ್ ‘ಶಕ್ತಿ’ಯೊಂದಿಗೆ ಖಚಿತಪಡಿಸಿ ದ್ದಾರೆ. ‘ಶಕ್ತಿ’ ಸಂಗ್ರಹಿಸಿದ ಮಾಹಿತಿಯನ್ವಯ ಇಟೆಲಿಯ ಈ ತರುಣ ತನ್ನ ಟ್ರೆಕ್ಕಿಂಗ್ ಸಾಹಸ ಹವ್ಯಾಸದಿಂದ ಇದೀಗ ಕೊರೊನಾ ಶಂಕೆಗೆ ಒಳಗಾಗಿ ಆಸ್ಪತ್ರೆ ಸೇರುವಂತಾ ಗಿದೆ. ಆದರೆ, ಆತನ ಆರೋಗ್ಯ ಸ್ಥಿತಿ ಇದೀಗ ಸಮಾಧಾನ ಕರವಾಗಿದೆ. ಜನತೆಗೆ ಆತಂಕಬೇಡ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ. ಪನ್ನೇಕರ್ ಅವರನ್ನು ‘ಶಕ್ತಿ’ ಈ ಕುರಿತು ಸಂಪರ್ಕಿ ಸಿದಾಗ ಅವರಿಂದ ದೊರೆತ ಅಧಿಕೃತ ಮಾಹಿತಿ ಹೀಗಿದೆ:- ಗಹೇಝಿ ಜುಆನ್ ಪಬ್ಲೋ (ಉಚಿhezi ರಿuಚಿಟಿಠಿಚಿbಟo) ಎಂಬ ಈ ಹೆಸರಿನ 24 ರ ತರುಣ 2019 ರ ಏಪ್ರಿಲ್‍ನಿಂದ 2021 ರ ವರೆಗೆ ಭಾರತದಲ್ಲಿರಲು ವೀಸಾ ಪಡೆದಿದ್ದಾನೆ. ಈಗ ಆತ ಬಂದು ಸುಮಾರು ಒಂದು ವರ್ಷ ಕಳೆದಿದೆ. ಈತನು ಬೈಲಕುಪ್ಪೆಯ ಟಿಬೆಟಿಯನ್ ಮೊನಾಸ್ಟಿಕ್ ಶಾಲೆಯೊಂದರಲ್ಲಿ ವಿದ್ಯಾರ್ಥಿಯಾಗಿ ಕಲಿಯಲು ಈ ಅಧಿಕೃತ ವೀಸಾ ಪಡೆದಿದ್ದಾನೆ. ಅಲ್ಲಿಯೇ ಕಲಿಕೆಯಲ್ಲಿ ತೊಡಗಿಸಿಕೊಂಡಿದ್ದಾನೆ. ಆತನನ್ನು ಗಾಳಿಬೀಡುವಿನ ಬಳಿ ಶನಿವಾರ ದಿನ ರಸ್ತೆಬದಿಯಲ್ಲಿ ಕುಳಿತಿದ್ದುದನ್ನು ಗಮನಿಸಿದ ಸ್ಥಳೀಯರು ವಿದೇಶೀಯನಾದುದರಿಂದ ಕೊರೊನಾ ಭಯದಿಂದ ಸಂಶಯಗೊಂಡು ಗ್ರಾಮ ಪಂಚಾಯ್ತಿ ಪಿಡಿಓಗೆ ಮಾಹಿತಿಯಿತ್ತಿದ್ದಾರೆ.. ಪಿಡಿಓ ಅವರು ಗ್ರಾಮಾಂತರ ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ಅತನನ್ನು ವಿಚಾರಿಸಿದಾಗ ಆತನಿಗೆ ಇಂಗ್ಲಿಷ್ ಗೊತ್ತಿಲ್ಲವೆನ್ನುವದು ಖಾತರಿಯಾಗಿದೆ. ವಿದೇಶೀ ಭಾಷೆಯಲ್ಲಿ ಆತ ಪ್ರತಿಕ್ರಿಯಿಸುವಾಗ ಆತ ಇಟೆಲಿ ದೇಶದವನೆಂದು ಹೇಳಿರಬಹುದಾದರೂ ಸ್ವರ ಉಚ್ಚಾರಣಾ ದೋಷದಿಂದ ಬ್ರೆಝಿಲ್ ಎಂದು ಪೊಲೀಸರ ಕಿವಿಗೆ ಕೇಳಿದೆ. ಅಂತೂ ಕೊರೊನಾ ಮುನ್ನೆಚ್ಚರಿಕೆ ಕ್ರಮವಾಗಿ ಲಾಕ್ ಡೌನ್ ಕಾಯ್ದೆಯನ್ವಯ ಈ ತರುಣನನ್ನು ಮಡಿಕೇರಿಯ ಕೋವಿಡ್ ಆಸ್ಪತ್ರೆಗೆ ಸಂಪರ್ಕ ತಡೆಗೆ ಒಳಪಡಿಸಲು ಸೇರಿಸಲಾಗಿದೆ.

(ಮೊದಲ ಪುಟದಿಂದ) ಕೋವಿಡ್ ಆಸ್ಪತ್ರೆಯ ಡಾ. ಲೋಕೇಶ್ ಅವರು ಇಟೆಲಿಯನ್ ವ್ಯಕ್ತಿಯ ಕುರಿತು ನೀಡಿದ ಮಾಹಿತಿ ಹೀಗಿದೆ:-ಆತನನ್ನು ಆಸ್ಪತ್ರೆಗೆ ಕರೆತಂದಾಗ ಸ್ವಲ್ಪ ಜ್ವರವಿತ್ತು. ನಿನ್ನೆಯಿಂದ ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇಂದು ಜ್ವರ ನಿಯಂತ್ರಣಗೊಂಡಿದ್ದು ಆತನ ಆರೋಗ್ಯ ಸ್ಥಿತಿ ಸುಧಾರಿಸಿದೆ. ಆದರೂ ನಿಯಮಾನುಸಾರ ಆತನ ಗಂಟಲ ದ್ರವವನ್ನು ಮೈಸೂರಿನ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಇನ್ನೂ ಕೈಸೇರಬೇಕಾಗಿದೆ. ಈ ಇಟೆಲಿಯನ್ ಯುವಕ ಬಹುಪಾಲು ಇಟೆಲಿ ಭಾಷೆಯಲ್ಲಿ ಮಾತನಾಡುತ್ತಾನೆ. ಆತನಿಗೆ ಇಂಗ್ಲಿಷ್ ಗೊತ್ತಿಲ್ಲ. ಆದರೂ ವೈದ್ಯಕೀಯ ಕಾಲೇಜಿನ ಸ್ನಾತಕೋತ್ತರ ವಿದ್ಯಾರ್ಥಿಗಳು ಆತನಿಂದ ಸಾಧ್ಯವಾದಷ್ಟು ಮಾಹಿತಿ ಸಂಗ್ರಹಿಸಿದ್ದಾರೆ. ಅದರ ಪ್ರಕಾರ ಈ ಯುವಕನಿಗೆ ಯೋಗ, ಟ್ರೆಕ್ಕಿಂಗ್, ಸಾಹಸಗಳಲ್ಲಿ ಆಸಕ್ತಿಯಿದೆ. ಅದೇ ಆಸಕ್ತಿಯಲ್ಲಿ ಆತ ಬೈಲಕುಪ್ಪೆಯಿಂದ ನಡೆದುಕೊಂಡೇ, ಗಿರಿ ಕಂದರಗಳನ್ನು ದಾಟಿ ಗಾಳಿಬೀಡುವಿನ ವಣಚಲು ಗ್ರಾಮದ ನಿಸರ್ಗ ಪ್ರದೇಶ ತಲುಪಿದ್ದಾನೆ. ಹೀಗೆ ನಡೆದು ಆತನಿಗೆ ತೀರಾ ಸುಸ್ತಾಗಿದೆ. ನಿತ್ರಾಣಗೊಂಡು ರಸ್ತೆ ಬದಿಯಲ್ಲಿ ಕುಳಿತಿದ್ದಾನೆ. ಆ ಸಂದರ್ಭ ಸ್ಥಳೀಯ ಗ್ರಾಮಸ್ಥರು ಈ ವಿದೇಶೀ ಯುವಕನನ್ನು ನೋಡಿ ಕೊರೊನಾ ಆತಂಕದಿಂದ ಸಂಶಯಗೊಂಡು ಪೊಲೀಸರಿಗೆ ತಿಳಿಸುವ ಸನ್ನಿವೇಶ ಒದಗಿತು. ಈ ತರುಣ ತನ್ನ ಟ್ರೆಕ್ಕಿಂಗ್ ಸಾಹಸ ಪ್ರವೃತ್ತಿಯಿಂದ ಇದೀಗ ಆಸ್ಪತ್ರೆ ಸೇರುವಂತಾಗಿದೆ. ಆದರೆ, ಲಾಕ್ ಡೌನ್ ನಿಯಮಾನುಸಾರ ಈ ಕ್ರಮಾನುಸರಣೆ ಕಡ್ಡಾಯವಾಗಿದ್ದು ಮುನ್ನೆಚ್ಚರಿಕೆಯ ದ್ಯೋತಕವಾಗಿದೆ. -‘ಚಕ್ರವರ್ತಿ’