ಮಡಿಕೇರಿ, ಮೇ 9: ಕೊಡಗು ಜಿಲ್ಲೆಯಲ್ಲಿ ಕೊರೊನಾ ಸೋಂಕು ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತ ವಿಧಿಸಿರುವ ನಿರ್ಬಂಧಗಳನ್ನು ಉಲ್ಲಂಘಿಸಿ, ಸರಕಾರದ ಆದೇಶ ಪಾಲಿಸದ ಮಂದಿಗೆ ಇದುವರೆಗೆ ರೂ. 2,64,500 ಮೊತ್ತದ ದಂಡ ವಿಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಮಾಹಿತಿ ನೀಡಿದ್ದಾರೆ.‘ಶಕ್ತಿ’ ಈ ಬಗ್ಗೆ ವಿವರ ಬಯಸಿದಾಗ ಪ್ರತಿಕ್ರಿಯೆ ನೀಡಿದ ಅವರು, ಮುಖಗವುಸು ಧರಿಸದ ಕಾರಣಕ್ಕಾಗಿ ಇದುವರೆಗೆ 1,200 ಮಂದಿಗೆ ತಲಾ ರೂ. ಒಂದು ನೂರು ದಂಡ ವಿಧಿಸಿರುವುದಾಗಿ ನೆನಪಿಸಿದರು. ಅಲ್ಲದೆ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ನಿಯಮ ಉಲ್ಲಂಘಿಸಿರುವ ಕಾರಣ 395 ಮಂದಿ ವಿರುದ್ಧ ಕ್ರಮ ಜರುಗಿಸಲಾಗಿದೆ ಎಂದು ಮಾಹಿತಿಯಿತ್ತರು.ಮಾತ್ರವಲ್ಲದೆ ವಾಹನಗಳ ನಿಯಂತ್ರಣ ಕಾಯ್ದೆಯಡಿಯಲ್ಲಿ ಇದೇ ಸಂದರ್ಭ 162 ಮಂದಿ ವಿರುದ್ಧ ಕಾನೂನು ಕ್ರಮದೊಂದಿಗೆ ದಂಡ ವಸೂಲಿ ಮಾಡಲಾಗಿದೆ ಎಂದು ತಿಳಿಸಿದರು. ಇನ್ನು ಮುಂದೆಯೂ ಸಾರ್ವಜನಿಕರು ಕಡ್ಡಾಯ ನಿಯಮ ಪಾಲನೆಯೊಂದಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಮುಖಕ್ಕೆ ಮಾಸ್ಕ್ ಧರಿಸುವ ಮುಖಾಂತರ ತಮ್ಮ ತಮ್ಮ ರಕ್ಷಣೆಗೆ ಕಾಳಜಿ ವಹಿಸುವಂತೆ ಅವರು ಸಲಹೆ ನೀಡಿದರು. ತುರ್ತು ಸೇವೆ ಹೊರತು ಅನವಶ್ಯಕ ಸಂಚರಿಸದಂತೆಯೂ ಕಿವಿಮಾತು ಹೇಳಿದರು.