ಮಡಿಕೇರಿ, ಮೇ 9: ಕೊಡಗಿನಲ್ಲಿ ಅತ್ಯಧಿಕ ಮಳೆ ಬೀಳುವ ಪ್ರದೇಶಗಳಲ್ಲಿ ಒಂದಾಗಿರುವ ಜೀವನದಿ ಕಾವೇರಿಯ ಉಗಮ ಸ್ಥಳ ತಲಕಾವೇರಿ ವ್ಯಾಪ್ತಿಯಲ್ಲಿ 2020 ರ ಆರಂಭದಿಂದ ಇದುವರೆಗೆ ಸರಾಸರಿ 11.8 ಇಂಚು ಮಳೆಯಾಗಿದೆ. ಪ್ರಸ್ತುತ ವರ್ಷದ ಜನವರಿ ಹೊರತುಪಡಿಸಿದಂತೆ ತಲಕಾವೇರಿಗೆ ಫೆಬ್ರವರಿಯಲ್ಲಿ 0.39 ಇಂಚು, ಮಾರ್ಚ್‍ನಲ್ಲಿ 1.60 ಇಂಚು ಹಾಗೂ ಏಪ್ರಿಲ್ ಒಂದು ಮಾಸದಲ್ಲೇ 6.96 ಇಂಚು ಮಳೆಯಾಗಿದೆ. ಮೇ ತಿಂಗಳ ಆರಂಭದಿಂದ ಇಂದಿನ ತನಕ 2.85 ಇಂಚು ಮಳೆ ದಾಖಲಾಗಿದೆ.ಕಳೆದ ವರ್ಷ ಜನವರಿಯಿಂದ ಪ್ರಸ್ತುತ ಅವಧಿಯಲ್ಲಿ ಒಟ್ಟು ಈ ಭಾಗದಲ್ಲಿ ಕೇವಲ 5.7 ಇಂಚು ಮಳೆಯಾಗಿತ್ತು. 2020 ರ ಆರಂಭಿಕ ಮಳೆ ಗಮನಿಸಿದರೆ, ಭವಿಷ್ಯದಲ್ಲಿ ಹೆಚ್ಚಿನ ಮಳೆ ಸುರಿಯುವ ಆತಂಕವಿರುವುದಾಗಿ ಅಲ್ಲಿನ ಹಿರಿಯ ಅರ್ಚಕ ಟಿ.ಎಸ್. ನಾರಾಯಣಾಚಾರ್ ಕಳವಳ ವ್ಯಕ್ತಪಡಿಸಿದ್ದಾರೆ.

ಈಗಲೇ ಸಮರ್ಪಕವಾಗಿ ವಿದ್ಯುತ್ ಕೂಡ ಪೂರೈಕೆಯಾಗುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸುತ್ತಾ, ತಮ್ಮ ಮನೆಯ ಮೇಲ್ಭಾಗದಲ್ಲಿ ಕಳೆದ ಮುಂಗಾರುವಿನಲ್ಲಿ ಗಜಗಿರಿ ಬೆಟ್ಟ ಕುಸಿದಿರುವ

(ಮೊದಲ ಪುಟದಿಂದ) ಬಗ್ಗೆ ಬೊಟ್ಟು ಮಾಡಿದರು. ಈ ವೇಳೆ ತಮಗೆ ಮನೆ ತೆರವುಗೊಳಿಸಲು ಜಿಲ್ಲಾಡಳಿತ ನಿರ್ದೇಶಿಸಿತ್ತು ಎಂದು ನೆನಪಿಸಿದ ಅವರು, ಆ ಬಳಿಕವೂ ಸಮರ್ಪಕವಾಗಿ ತಡೆಗೋಡೆ ನಿರ್ಮಿಸದೆ ಮತ್ತಷ್ಟು ಅಪಾಯ ಸೃಷ್ಟಿಸಿದ್ದಾಗಿದೆ ಎಂದು ಅಸಮಾಧಾನ ತೋಡಿಕೊಂಡರು. ಭೂಕುಸಿತದ ಜಾಗದಲ್ಲಿ ರಸ್ತೆಗೆ ತಡೆಗೋಡೆ ನಿರ್ಮಿಸಿ, ಅವೈಜ್ಞಾನಿಕ ವಾಗಿ ಮೋರಿಯನ್ನು ಅಳವಡಿಸಿ ರುವ ಪರಿಣಾಮ ಈಗಿನ ಅಲ್ಪ ಮಳೆಗೆ ನೀರು ಸಹಿತ ಕಲ್ಲು-ಮಣ್ಣು ಮನೆಗೆ ಹರಿದು ಬರುವಂತಾಗಿದೆ, ಭೂಮಿ ಕೊರೆಯ ತೊಡಗಿದೆ ಎಂದು ಮಾರ್ನುಡಿದರು. ಇತ್ತ ತುರ್ತು ಗಮನಹರಿಸಿ ಅಪಾಯ ಎದುರಾ ಗದಂತೆ ತ್ವರಿತ ಕೆಲಸ ನಿರ್ವಹಿ ಸಬೇಕೆಂದು ಅವರು ಒತ್ತಾಯಿಸಿದರು.