ಮಡಿಕೇರಿ, ಮೇ 10: ದಕ್ಷಿಣ ಪ್ರಯಾಗವೆಂಬ ಖ್ಯಾತಿಯ ಭಾಗಮಂಡಲ ಕ್ಷೇತ್ರದಲ್ಲಿ ಮುಂಗಾರು ಪ್ರವಾಹದಿಂದ ಎದುರಾಗುತ್ತಿರುವ ಸಂಪರ್ಕ ಸಮಸ್ಯೆ ನಿವಾರಿಸುವ ದಿಸೆಯಲ್ಲಿ ಕರ್ನಾಟಕ ರಾಜ್ಯ ಕಾವೇರಿ ನೀರಾವರಿ ನಿಗಮದಿಂದ ನಿರ್ಮಿಸಲಾಗುತ್ತಿರುವ ಮೇಲ್ಸೇತುವೆ ಕಾಮಗಾರಿಗೆ ಅನೇಕ ತೊಡಕುಗಳು ಎದುರಾಗಿದ್ದು, ಈ ಕಾಮಗಾರಿ ಆಮೆಗತಿಯಲ್ಲಿ ಸಾಗುವಂತಾಗಿದೆ. ಹೀಗಾಗಿ ಪ್ರಸ್ತುತ ಮಳೆಗಾಲ ದಲ್ಲಿಯೂ ಈ ಕೆಲಸ ಪೂರ್ಣ ಗೊಳ್ಳದೆ ಹಿಂದಿನ ವರ್ಷಗಳ ಸಮಸ್ಯೆಯೂ ಮತ್ತೆ ಎದುರಾಗುವುದು ಖಾತರಿ ಎನಿಸತೊಡಗಿದೆ.ಕಾವೇರಿ ನೀರಾವರಿ ನಿಗಮ ದಿಂದ ಈ ಮೇಲ್ಸೇತುವೆ ಕಾಮಗಾರಿ ಯನ್ನು ಬೆಂಗಳೂರಿನ ಖಾಸಗಿ ಉದ್ದಿಮೆ ಎ.ವಿ.ಆರ್. ತೇಜಸ್ ಇನ್ಫ್ರ ಪ್ರೈವೇಟ್ ಲಿಮಿಟೆಡ್‍ಗೆ ನೀಡಲಾಗಿದೆ. ಅಲ್ಲದೆ ಒಟ್ಟು ರೂ. 29 ಕೋಟಿ ವೆಚ್ಚದ ಕಾಮಗಾರಿಗೆ ಹಸಿರು ನಿಶಾನೆ ಲಭಿಸಿದೆ. ಆದರೆ ಇದು ಭಾಗಮಂಡಲ ಸಂಗಮ ತಟದ ನದಿ ಪಾತ್ರ ನಡುವೆ ನಿರ್ಮಾಣಗೊಳ್ಳುತ್ತಿರುವ ಸೇತುವೆಯಾಗಿರುವ ಕಾರಣ, ಪ್ರತಿ ಹಂತದಲ್ಲಿ ಕಬ್ಬಿಣದ ತಗಡಿನಿಂದ ಕೂಡಿದ ಮಣ್ಣು ರಕ್ಷಾಕವಚ ಅಳವಡಿಸಿ ಸೇತುವೆ ಕಂಬಗಳ ಅಡಿಪಾಯ ನಿರ್ಮಿಸಬೇಕಾಗಿದೆ.ಈ ಕಾಮಗಾರಿಗೆ ಎರಡು ವರ್ಷಗಳ ಹಿಂದಿನ ಯೋಜನೆ ಗಿಂತಲೂ ಸುಮಾರು ರೂಪಾಯಿ ಮೂರು ಕೋಟಿಯಷ್ಟು ವೆಚ್ಚವಾಗಲಿದೆ ಎಂದು ಗೊತ್ತಾಗಿದೆ. ಭಾಗಮಂಡಲದಲ್ಲಿ ಆಗಿಂದಾಗ್ಗೆ ಬೀಳುತ್ತಿರುವ ಮಳೆಯಿಂದ ಕಾಮಗಾರಿಗೆ ಹಲವಷ್ಟು ತೊಡ ಕಾಗಿದ್ದು, ಕೊರೊನಾ ಸೋಂಕಿನ ನಡುವೆ ಕೆಲಸ ಸ್ಥಗಿತಗೊಂಡು, ಲಭ್ಯವಿದ್ದ ಕಾರ್ಮಿಕರು ಕೂಡ ಊರು ತೊರೆದು ಬಿಟ್ಟಿದ್ದಾರೆ. ಈ ನಡುವೆ ಸರಕಾರ ಕೆಲಸ ನಿರ್ಮಾಣಕ್ಕೆ ಅವಕಾಶ ಕಲ್ಪಿಸಿದ್ದರೂ, ಸೇತುವೆ ಕಾಮಗಾರಿ ಸಾಮಗ್ರಿ ಮತ್ತು ಕಾರ್ಮಿಕರ ಸಮಸ್ಯೆ ಎದುರಿಸು ವಂತಾಗಿದೆ.

ಅನುಮೋದನೆ ಸಿಕ್ಕಿಲ್ಲ: ಈ ಎಲ್ಲ ಗೊಂದಲಗಳ ನಡುವೆ ಈಗಾಗಲೇ ನಾಲ್ಕಾರು ಕೋಟಿ ರೂಪಾಯಿಯ ಸಾಮಗ್ರಿಗಳ ಬಳಕೆಯೊಂದಿಗೆ ಗುತ್ತಿಗೆದಾರ ಕೆಲಸ ಆರಂಭಿಸಿದ್ದರೂ ನಿಗಮದಿಂದ ಹಣವೇ ಬಿಡುಗಡೆ ಮಾಡಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಅಲ್ಲದೆ ರಾಜ್ಯದ ಮುಖ್ಯ ಮಂತ್ರಿಗಳ

(ಮೊದಲ ಪುಟದಿಂದ) ಅಧ್ಯಕ್ಷತೆಯ ನಿಗಮದ ಉನ್ನತ ಪ್ರಾಧಿಕಾರದಿಂದ ಕೆಲಸ ಮುಂದುವರೆಸಲು ಅನುಮೋದನೆ ಕೂಡ ದೊರಕಿಲ್ಲವೆಂದು ಗೊತ್ತಾಗಿದೆ.

ಕೆಲಸ ಇನ್ನಷ್ಟು ವಿಳಂಬ: ಪ್ರಸ್ತುತ ಸನ್ನಿವೇಶದಲ್ಲಿ ಮೇಲಿನ ಅನೇಕ ತೊಡಕುಗಳ ನಡುವೆ ಭಾಗಮಂಡಲ ಮೇಲ್ಸೇತುವೆ ಕಾಮಗಾರಿ ವಿಳಂಬ ಗೊಂಡಿದ್ದು, ಅಲ್ಲಿನ ದೇವಾಲಯದ ಮುಂಭಾಗದಿಂದ ಮುಂದುವರಿದು ತಲಕಾವೇರಿ ಮಾರ್ಗದ ಮಾರುಕಟ್ಟೆ ತನಕದ ಹಾದಿಯಲ್ಲಿ ಇನ್ನು ಕೂಡ ಸಂಬಂಧಿಸಿದ ಜಾಗ ಸಮಸ್ಯೆ ಬಗೆಹರಿದಿಲ್ಲವೆಂದು ‘ಶಕ್ತಿ’ಗೆ ತಿಳಿದು ಬಂದಿದೆ. ಅಂತೆಯೇ ಇತ್ತ ಅಯ್ಯಂಗೇರಿ ಮಾರ್ಗಕ್ಕೆ ಸಂಪರ್ಕ ಕಲ್ಪಿಸುವ ಮೇಲ್ಸೇತುವೆಗೆ ಇದೇ ತೊಡಕು ಎದುರಾಗಿದೆಯಂತೆ.

ಹೀಗಾಗಿ ಸದ್ಯದ ಪರಿಸ್ಥಿತಿಯಲ್ಲಿ ಪ್ರಸ್ತುತ ಮಳೆಗಾಲದೊಳಗೆ ಮೇಲ್ಸೇತುವೆ ಕಾಮಗಾರಿಯಲ್ಲಿ ಯಾವುದೇ ಪ್ರಗತಿ ನಿರೀಕ್ಷಿಸಲು ಅಸಾಧ್ಯವೆಂಬ ಅಭಿಪ್ರಾಯ ವನ್ನು ಭಾಗಮಂಡಲದ ಜನತೆ ವ್ಯಕ್ತಪಡಿಸುತ್ತಿದ್ದಾರೆ. ಸದ್ಯವೇ ಅಡಿಯಿಡಲಿರುವ ಮಳೆಯ ನಡುವೆ ಅಲ್ಲಿನ ಪರಿಸ್ಥಿತಿ ಹೇಗೆಂದು ಕಾದು ನೋಡಬೇಕಿದೆ.