ಗೋಣಿಕೊಪ್ಪಲು, ಮೇ 9: ವೀರಾಜಪೇಟೆ ತಾಲೂಕಿನ ಅರಣ್ಯ ಇಲಾಖೆಯ ಡಿ.ಎಫ್.ಒ. ಶಿವಶಂಕರ್ ಅವರನ್ನು ಕೋಲಾರ ಜಿಲ್ಲೆಗೆ ವರ್ಗಾವಣೆ ಮಾಡಲಾಗಿದ್ದು ಖಾಲಿಯಾದ ಇವರ ಸ್ಥಳಕ್ಕೆ ಕೋಲಾರ ಜಿಲ್ಲೆಯ ವೈ.ಚಕ್ರಪಾಣಿ ಅವರನ್ನು ನೇಮಕಗೊಳಿಸಿ ಸರ್ಕಾರ ಆದೇಶ ಮಾಡಿದೆ.

ವೀರಾಜಪೇಟೆ ತಾಲೂಕಿನ ವಿವಿಧ ಭಾಗಗಳಲ್ಲಿ ನಿರಂತರ ಹುಲಿದಾಳಿ ಹಾಗೂ ಆನೆ ದಾಳಿಯ ಸಂದರ್ಭ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ರೈತರೊಂದಿಗೆ ಸ್ಪಂದಿಸುತ್ತಿಲ್ಲ ವೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕೊಡಗು ಘಟದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಹಾಗೂ ಪದಾಧಿಕಾರಿಗಳು ಇಲಾಖೆಯ ಉನ್ನತ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ಅಲ್ಲದೆ ವಗರೆ ಗ್ರಾಮದಲ್ಲಿ ಶುಕ್ರವಾರ ನಡೆದ ಹುಲಿ ದಾಳಿ ಸಂದರ್ಭ ರೈತರು ಡಿ.ಎಫ್.ಒ. ಶಿವಶಂಕರ್ ವಿರುದ್ಧ ಪ್ರತಿಭಟಿಸಿ ವರ್ಗಾವಣೆ ಗೊಳಿಸುವಂತೆಯೂ ಒತ್ತಾಯಿಸಿದ್ದರು.