ಪಬ್-ಕ್ಲಬ್‍ಗಳಲ್ಲಿ ಮದ್ಯ ಮಾರಾಟ

ಬೆಂಗಳೂರು, ಮೇ 8: ಮದ್ಯ ಮಾರಾಟಕ್ಕೆ ಅನುಮತಿ ನೀಡಿದ ಬೆನ್ನಲ್ಲೇ ಭರ್ಜರಿ ಆದಾಯ ಬರುತ್ತಿದ್ದು ಇದರ ಜೊತೆಗೆ ಇದೀಗ ಪಬ್ ಮತ್ತು ಕ್ಲಬ್‍ಗಳಲ್ಲಿಯೂ ಮದ್ಯ ಮಾರಾಟಕ್ಕೆ ಸರ್ಕಾರ ಅವಕಾಶ ನೀಡಿದೆ. ಎಂಎಸ್‍ಐಎಲ್‍ಗಳಲ್ಲಿ ಮೊದಲಿಗೆ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿತ್ತು. ಆದರೆ ಇದೀಗ ಪಬ್ ಮತ್ತು ಕ್ಲಬ್‍ಗಳಲ್ಲಿಯೂ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ ಎಂದು ಅಬಕಾರಿ ಸಚಿವ ಹೆಚ್. ನಾಗೇಶ್ ತಿಳಿಸಿದ್ದಾರೆ. ನಾಳೆಯಿಂದ ರಾಜ್ಯಾದ್ಯಂತ ಪಬ್ ಮತ್ತು ಕ್ಲಬ್, ಎಲ್ಲಾ ಮದ್ಯದಂಗಡಿಯಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ನೀಡಲಾಗಿದೆ. ಆದರೆ ಕಂಡಿಷನ್ಸ್ ಹಾಕಿದ್ದು, ಎಂಆರ್‍ಪಿ ಬೆಲೆಯಲ್ಲೇ ಮಾರಬೇಕು. ಇಲ್ಲದಿದ್ದರೆ ಲೈಸೆನ್ಸ್ ರದ್ದು ಮಾಡಲಾಗುತ್ತದೆ. ಬೆಳಿಗ್ಗೆ 9 ಗಂಟೆಯಿಂದ ಸಂಜೆ 7 ಗಂಟೆ ಯವರೆಗೂ ಮಾತ್ರ ಮಾರಾಟ ಮಾಡಬೇಕು ಎಂದು ಹೇಳಿದ್ದಾರೆ. ವರ್ಷಕ್ಕೆ ಅಬಕಾರಿ ಆದಾಯ ಸರ್ಕಾರಕ್ಕೆ 25 ಸಾವಿರ ಕೋಟಿ ಬರಲಿದೆ. ಈ ವರ್ಷ 2500 ಕೋಟಿ ಹೆಚ್ಚಾಗಲಿದೆ. 22,500 ಕೋಟಿ ಆದಾಯಕ್ಕೆ ಹೆಚ್ಚುವರಿಯಾಗಿ 2500 ಕೋಟಿ ಸಿಗಲಿದೆ ಎಂದು ನಾಗೇಶ್ ಹೇಳಿದರು.

ಚೇತರಿಕೆ ಪ್ರಮಾಣ ಶೇ. 29.36ರಷ್ಟು

ನವದೆಹಲಿ, ಮೇ 8: ಕಳೆದ 21 ದಿನಗಳಿಂದ ದೇಶದ 28 ಜಿಲ್ಲೆಗಳಲ್ಲಿ ಯಾವುದೇ ಹೊಸ ಪ್ರಕರಣ ಪತ್ತೆಯಾಗಿಲ್ಲ. ಕಳೆದ 14 ದಿನಗಳಿಂದ 36 ಜಿಲ್ಲೆಗಳಲ್ಲಿ ಮತ್ತು ಕಳೆದ ಏಳು ದಿನಗಳಿಂದ 46 ಜಿಲ್ಲೆಗಳಲ್ಲಿ ಯಾವುದೇ ಹೊಸ ಪ್ರಕರಣ ವರದಿಯಾಗಿಲ್ಲ. ಭಾರತದಲ್ಲಿ ಚೇತರಿಕೆ ಪ್ರಮಾಣ ಶೇ. 29.36ರಷ್ಟು ಇದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಇದುವರೆಗೆ ದೇಶದ 216 ಜಿಲ್ಲೆಗಳಲ್ಲಿ ಯಾವುದೇ ಕೋವಿಡ್-19 ಪ್ರಕರಣಗಳು ಪತ್ತೆಯಾಗಿಲ್ಲ. 42 ಜಿಲ್ಲೆಗಳಲ್ಲಿ ಕಳೆದ 24 ಗಂಟೆಗಳಿಂದ ಯಾವುದೇ ಹೊಸ ಕೊರೊನಾ ಪ್ರಕರಣ ವರದಿಯಾಗಿಲ್ಲ. ಇಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರವಾಲ್ ಅವರು, ದೇಶದಲ್ಲಿ ಮಹಾಮಾರಿ ಕೊರೊನಾ ವೈರಸ್ ಪೀಕ್ ಹೋಗದಂತೆ ತಡೆಯಲು ಆರೋಗ್ಯ ಸಚಿವಾಲಯ ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಭರವಸೆ ನೀಡಿದರು.

ಸಿಬಿಎಸ್‍ಇ ಪರೀಕ್ಷೆ ಜು. 1 ರಿಂದ ಆರಂಭ

ನವದೆಹಲಿ, ಮೇ 8: ಕೋವಿಡ್-19 ಲಾಕ್‍ಡೌನ್ ಕಾರಣದಿಂದಾಗಿ ಮುಂದೂಡಲ್ಪಟ್ಟಿದ್ದ ಸಿಬಿಎಸ್‍ಇ 10 ಹಾಗೂ 12ನೇ ತರಗತಿಯ ಬೋರ್ಡ್ ಪರೀಕ್ಷೆಗಳನ್ನು ಜುಲೈ 1 ರಿಂದ 15 ರವರೆಗೆ ನಡೆಸಲಾಗುವುದು ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ್ ಪೋಖ್ರಿಯಲ್ ತಿಳಿಸಿದ್ದಾರೆ. ಬಾಕಿ ಇರುವ ಪರೀಕ್ಷೆಗಳ ವೇಳಾಪಟ್ಟಿಗಾಗಿ ವಿದ್ಯಾರ್ಥಿಗಳು ಅಸಹನೆಯಿಂದ ಕಾಯುತ್ತಿದ್ದಾರೆ. ಇದೀಗ ಜುಲೈ 1 ರಿಂದ 15 ರವರೆಗೆ ಪರೀಕ್ಷೆಗಳನ್ನು ನಡೆಸಬೇಕೆಂದು ಇಂದು ನಿರ್ಧರಿಸಲಾಗಿದೆ ಎಂದು ರಮೇಶ್ ಪೋಖ್ರಿಯಲ್ ತಿಳಿಸಿದ್ದಾರೆ.

ಒಂದೇ ದಿನ ರಾಜ್ಯದಲ್ಲಿ 48 ಪ್ರಕರಣ ಪತ್ತೆ

ಬೆಂಗಳೂರು, ಮೇ 8: ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆ ಎಂದು ನಿಟ್ಟುಸಿರು ಬಿಡುವಾಗಲೇ ರಾಜ್ಯದಲ್ಲಿ ಒಂದೇ ದಿನ ಏಕಾಏಕಿ 48 ಹೊಸ ಪ್ರಕರಣಗಳು ವರದಿಯಾಗಿದ್ದು, ಜನರನ್ನು ಬೆಚ್ಚಿ ಬೀಳುವಂತೆ ಮಾಡಿದೆ. ಬೆಂಗಳೂರು ನಗರದ 7 ಹೊಸ ಪ್ರಕರಣಗಳು ಪತ್ತೆಯಾಗಿದ್ದರೆ, ಬೆಳಗಾವಿಯಲ್ಲಿ 11 ಪ್ರಕರಣಗಳು ವರದಿಯಾಗಿವೆ. ದಾವಣಗೆರೆಯಲ್ಲಿ ಬರೋಬ್ಬರಿ 14 ಸೋಂಕಿತ ಪ್ರಕರಣಗಳು ದೃಢಪಟ್ಟಿವೆ. ಉತ್ತರ ಕನ್ನಡದ ಭಟ್ಕಳದಲ್ಲಿ 12 ಪ್ರಕರಣಗಳು ಪತ್ತೆಯಾಗಿವೆ. ಬಳ್ಳಾರಿಯಲ್ಲಿ 1 ಪ್ರಕರಣ ವರದಿಯಾಗಿದ್ದು ಸಂಜೆ ವೇಳೆಗೆ ಚಿತ್ರದುರ್ಗದಲ್ಲಿ 3 ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ ಭಟ್ಕಳದ 5 ತಿಂಗಳ ಹೆಣ್ಣು ಮಗು, 3 ವರ್ಷದ ಬಾಲಕಿ, ದಾವಣಗೆರೆಯ 8 ವರ್ಷದ ಬಾಲಕ, 13 ವರ್ಷದ ಬಾಲಕಿ, 3 ವರ್ಷದ ಬಾಲಕಿ, 9 ವರ್ಷದ ಬಾಲಕಿ, 10 ವರ್ಷದ ಬಾಲಕನೂ ಸೇರಿದ್ದಾರೆ.

ಶೈಕ್ಷಣಿಕ ವರ್ಷದ ಅವಧಿ ಬಗ್ಗೆ ನಿರ್ಧಾರ

ಬೆಂಗಳೂರು, ಮೇ 8: ಕೊರೊನಾ ಲಾಕ್‍ಡೌನ್ ಹಿನ್ನೆಲೆ ಮುಂದಿನ ಶೈಕ್ಷಣಿಕ ವರ್ಷದ ಅವಧಿ ಎಷ್ಟಿರಬೇಕು ಎನ್ನುವ ಕುರಿತು ತಜ್ಞರು ಮತ್ತು ಇಲಾಖಾ ಅಧಿಕಾರಿಗಳ ಸಭೆ ಕರೆದು ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ. ಶೀಘ್ರದಲ್ಲೇ ಶೈಕ್ಷಣಿಕ ವೇಳಾಪಟ್ಟಿ ಪ್ರಕಟವಾಗಲಿದ್ದು, ಹೆಚ್ಚುವರಿ ಶೈಕ್ಷಣಿಕ ಚಟುವಟಿಕೆಗಳು ಇರುವುದಿಲ್ಲ. ಸೀಮಿತ ಅವಧಿಯಲ್ಲಿ ಯಾವ ಯಾವ ಚಟುವಟಿಕೆಗಳನ್ನು ಕೈಗೊಳ್ಳಬೇಕು ಎನ್ನುವ ಕುರಿತು ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ. ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಸಚಿವರು, ಎಸ್‍ಎಸ್‍ಎಲ್‍ಸಿ ಪರೀಕ್ಷೆ ಮುಗಿದ ತಕ್ಷಣವೇ ಸಿಇಟಿ ಪರೀಕ್ಷೆಗಳನ್ನೂ ನಡೆಸಿ ವೃತ್ತಿ ಶಿಕ್ಷಣ ಕೋರ್ಸ್‍ಗಳ ಪ್ರವೇಶಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದಿದ್ದಾರೆ. ವಿದ್ಯಾರ್ಥಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಬೋಧನಾ ಚಟುವಟಿಕೆಗಳನ್ನು ಇಲಾಖೆಯ ಯುಟ್ಯೂಬ್ ವಾಹಿನಿಗೆ ಅಪ್ಲೋಡ್ ಮಾಡಲಾಗುವುದು. ಇದರಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.

ಬಾಬರಿ ಮಸೀದಿ ಧ್ವಂಸ : ತೀರ್ಪಿಗೆ ಸೂಚನೆ

ನವದೆಹಲಿ, ಮೇ 8: ಬಾಬರಿ ಮಸೀದಿ ಧ್ವಂಸ ಪ್ರಕರಣ ಸಂಬಂಧ ಆಗಸ್ಟ್ 31 ರೊಳಗೆ ತನ್ನ ತೀರ್ಪು ನೀಡಬೇಕು ಎಂದು ಸುಪ್ರೀಂ ಕೋರ್ಟ್ ಲಖನೌನಲ್ಲಿನ ವಿಶೇಷ ಸಿಬಿಐ ನ್ಯಾಯಾಲಯವಕ್ಕೆ ನಿರ್ದೇಶನ ನೀಡಿದೆ. ಪ್ರಕರಣವು 1992 ರಲ್ಲಿ ಬಾಬರಿ ಮಸೀದಿಯನ್ನು ಧ್ವಂಸ ಮಾಡಿದ್ದರ ಸಂಬಂಧವಾಗಿದ್ದು ಇದು ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯ ನಂಟು ಹೊಂದಿದೆ. ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ವಿಚಾರಣೆ ನಡೆಸಿದ ಕೋರ್ಟ್ ವಿಚಾರಣಾ ನ್ಯಾಯಾಲಯದಲ್ಲಿ ಇದೇ ಮಾದರಿ ಅನುಸರಿಸಲು ಹೇಳಿದೆ. ಈ ಮುನ್ನ 2019 ರ ಜುಲೈನಲ್ಲಿ ನ್ಯಾಯಾಲಯವು ಒಂಬತ್ತು ತಿಂಗಳಲ್ಲಿ ತೀರ್ಪು ನೀಡುವಂತೆ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶನ ನೀಡಿತ್ತು. ಪ್ರಕರಣದಲ್ಲಿ ಮಾಜಿ ಉಪ ಪ್ರಧಾನಿ ಎಲ್.ಕೆ. ಅಡ್ವಾಣಿ, ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್, ಉಮಾ ಭಾರತಿ ಮತ್ತಿತರರು ಸೇರಿದಂತೆ ಹಲವಾರು ಹಿರಿಯ ಬಿಜೆಪಿ ನಾಯಕರಿದ್ದಾರೆ.

ಎಲ್‍ಜಿ ಪಾಲಿಮರ್ಸ್‍ಗೆ ರೂ. 50 ಕೋಟಿ ದಂಡ

ನವದೆಹಲಿ, ಮೇ 8: ವೈಜಾಗ್ ಗ್ಯಾಸ್ ದುರಂತ ನಡೆದಿದ್ದ ಗ್ಯಾಸ್ ದುರಂತ ಪ್ರಕರಣದಲ್ಲಿ ಎಲ್‍ಜಿ ಪಾಲಿಮರ್ಸ್ ಸಂಸ್ಥೆಗೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ 50 ಕೋಟಿ ರೂಪಾಯಿ ದಂಡ ವಿಧಿಸಿದೆ. ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಲು ಎನ್‍ಜಿಟಿ ಮುಖ್ಯಸ್ಥ ನ್ಯಾ. ಆದರ್ಶ್ ಕುಮಾರ್ ಗೋಯಲ್ ಅವರಿದ್ದ ಪೀಠ ತಾ. 8 ರಂದು ಐವರು ಸದಸ್ಯರ ನ್ನೊಳಗೊಂಡ ಸಮಿತಿಯನ್ನು ರಚಿಸಿದೆ. ಮೇಲ್ನೋಟಕ್ಕೆ ಗೋಚರಿಸಿರುವ ಜೀವಹಾನಿ, ಸಾರ್ವಜನಿಕ ಆರೋಗ್ಯ, ಪರಿಸರಕ್ಕೆ ಉಂಟಾಗಿರುವ ಹಾನಿಯನ್ನು ಗಮನಿಸಿ ಎಲ್‍ಜಿ ಪಾಲಿಮರ್ಸ್ ಇಂಡಿಯಾ ಪ್ರೈವೆಟ್ ಲಿಮಿಟೆಡ್‍ಗೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಬಳಿ 50 ಕೋಟಿ ರೂಪಾಯಿ ಠೇವಣಿ ಇಡಲು ಸೂಚಿಸಲಾಗಿದೆ ಎಂದು ನ್ಯಾಯಾಧೀಕರಣ ಹೇಳಿದೆ. ಉಂಟಾಗಿರುವ ನಷ್ಟದ ಹಾನಿ, ಸಂಸ್ಥೆಯ ಮೊತ್ತ ಎಲ್ಲವನ್ನೂ ಪರಿಗಣಿಸಿ 50 ಕೋಟಿ ರೂಪಾಯಿ ದಂಡ ವಿಧಿಸಲಾಗಿದೆ ಎಂದು ಎನ್‍ಜಿಟಿ ಹೇಳಿದೆ.

ಹೋರಾಟದ ಎಚ್ಚರಿಕೆ ನೀಡಿದ ಸಿದ್ದರಾಮಯ್ಯ

ಬೆಂಗಳೂರು, ಮೇ 8: ಸರ್ಕಾರ ರೈತರಿಗೆ ಹೊಸದಾಗಿ ಬಡ್ಡಿ ರಹಿತ ಸಾಲ ಕೊಡಬೇಕು. ರೈತರು ಈಗಾಗಲೇ ಪಡೆದಿರುವ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಬೇಕು. ಬೇಡಿಕೆ ಈಡೇರಿಸದಿದ್ದರೆ ಹೋರಾಟ ಮಾಡುವುದಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರವನ್ನು ಎಚ್ಚರಿಸಿದ್ದಾರೆ. ಮುಖ್ಯಮಂತ್ರಿಗಳಿಗೆ ಹಕ್ಕೋತ್ತಾಯ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಕೊರೊನಾ ಪರಿಹಾರಕ್ಕಾಗಿ ಸರ್ಕಾರ ಪ್ರಕಟಿಸಿರುವ ಪರಿಹಾರ ಧನ ತೃಪ್ತಿದಾಯಕವಾಗಿಲ್ಲ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹೂ ಬೆಳೆದ ಬೆಳೆಗಾರರಿಗೆ ಪ್ರತಿ ಹೆಕ್ಟೇರ್‍ಗೆ ರೂ. 25 ಸಾವಿರ ಪರಿಹಾರ ಸಾಕಾಗುವುದಿಲ್ಲ. ಅಲ್ಲದೇ ನೇಕಾರರು, ಅಗಸ, ಸವಿತಾ, ಆಟೋ, ಕ್ಯಾಬ್ ಚಾಲಕರನ್ನು ಮಾತ್ರ ಪರಿಹಾರದಡಿ ಸೇರಿಸಿ ಬಹುತೇಕ ಸಂಘಟಿತ ಅಸಂಘಟಿತ ಕಾರ್ಮಿಕರನ್ನೆಲ್ಲ ಕೈಬಿಡಲಾಗಿದೆ. ಕೈಬಿಟ್ಟಿರುವ ಎಲ್ಲಾ ಸಮುದಾಯಕ್ಕೂ ಸರ್ಕಾರ ಪರಿಹಾರ ನೀಡಬೇಕೆಂದು ಸಿದ್ದರಾಮಯ್ಯ ಆಗ್ರಹಿಸಿದರು.